Site icon TUNGATARANGA

ಹಿಜಾಬ್ ವಿಚಾರಣೆ ಮುಂದೂಡಿಕೆ: ಅಂತಿಮ ಆದೇಶದವರೆಗೂ ಹಿಜಾಬ್-ಕೇಸರಿ ಶಾಲಿಗೆ ಅವಕಾಶವಿಲ್ಲ: ನ್ಯಾಯಾಲಯ ಮಧ್ಯಂತರ ಆದೇಶ


ಬೆಂಗಳೂರು: ಹಿಜಾಬ್ ವಿವಾದದ ವಿಚಾರಣೆಯನ್ನು ಸೋಮವಾರಕ್ಕೆ ವಿಸ್ತೃತ ಪೀಠ ಮುಂದೂಡಿದೆ.
ಏಕಸದಸ್ಯ ಪೀಠದ ವರ್ಗಾವಣೆಯ ನಂತರ ರಾಜ್ಯ ಮುಖ್ಯನ್ಯಾಯಮೂರ್ತಿಗಳನ್ನು ಒಳಗೊಂಡ ತ್ರಿಸದಸ್ಯ ಪೀಠ, ಸೋಮವಾರದಿಂದ ಪ್ರತಿದಿನವೂ ಸಹ ವಿಚಾರಣೆ ನಡೆಸುತ್ತೇವೆ. ಅಲ್ಲದೇ ಆದಷ್ಟು ಶೀಘ್ರ ತೀರ್ಪು ನೀಡುತ್ತೇವೆ. ಅಲ್ಲಿಯವರೆಗೂ ಶಾಲಾ ಕಾಲೇಜುಗಳನ್ನು ಆರಂಭಿಸಬೇಕು. ಅಲ್ಲದೇ, ಅಂತಿಮ ತೀರ್ಪು ನೀಡುವವರೆಗೂ ಯಾವುದೇ ರೀತಿಯ ಧಾರ್ಮಿಕ ಉಡುಗೆಗೆ ಅವಕಾಶ ಇರುವುದಿಲ್ಲ ಎಂದು ಪೀಠ ಮಧ್ಯಂತರ ಆದೇಶ ನೀಡಿದೆ.
ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಹಾಗೂ ಹೆಗಡೆ ಅವರುಗಳು, ಆಹಾರ ಹಾಗೂ ನೀರು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದಂತಾಗುತ್ತದೆ. ಈ ರೀತಿಯ ಆದೇಶ ಬೇಡ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆಹಾರ-ನೀರಿನ ವಿಚಾರ ಬೇರೆ. ಇದು ಬೇರೆ. ಎರಡಕ್ಕೂ ಹೋಲಿಕೆ ಮಾಡಬೇಡಿ. ಇದು ಪ್ರಕರಣದ ಅಂತಿಮ ತೀರ್ಪು ಅಲ್ಲ. ಬದಲಾಗಿ, ಮಧ್ಯಂತರ ಆದೇಶ ನೀಡುತ್ತಿದ್ದೇವೆ. ಇದನ್ನು ಪಾಲಿಸಿ. ತತಕ್ಷಣ ಶಾಲೆಗಳನ್ನು ಆರಂಭಿಸಿ, ತರಗತಿ ನಡೆಸಿ. ಅಲ್ಲದೇ, ಅಂತಿಮ ತೀರ್ಪು ನೀಡುವವರೆಗೂ ಯಾವುದೇ ರೀತಿಯ ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಬರಲು ಅವಕಾಶವಿರುವುದಿಲ್ಲ ಎಂದು ಸೂಚಿಸಿದ್ದಾರೆ.
ಇದು ಅತ್ಯಂತ ಸೂಕ್ಷ್ಮ ಹಾಗೂ ಸಾಂವಿಧಾನಿಕ ವಿಚಾರವಾದ್ದರಿಂದ ತರಾತುರಿಯಲ್ಲಿ ತೀರ್ಪು ನೀಡುವುದು ಸಾಧ್ಯವಿಲ್ಲ. ಹೀಗಾಗಿ, ಒಂದೆರಡು ವಾರಗಳ ಕಾಲ ವಾದ-ಪ್ರತಿವಾದ ಆಲಿಸಿ, ಕೂಲಂಕಶ ಪರಿಶೀಲನೆ ನಡೆಸಿ ಅಂತಿಮ ತೀರ್ಪು ನೀಡಬೇಕಿದೆ. ಹೀಗಾಗಿ, ಸೋಮವಾರ ಮಧ್ಯಾಹ್ನ ೨.೩೦ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಪೀಠ ಅಂದಿನಿಂದ ಪ್ರತಿದಿನ ವಾದ-ಪ್ರತಿವಾದ ಆಲಿಸಿ, ಆದಷ್ಟು ಶೀಘ್ರ ಅಂತಿಮ ತೀರ್ಪು ನೀಡಲಾಗುವುದು ಎಂದು ಮುಖ್ಯನ್ಯಾಯಮೂರ್ತಿಗಳು
ತಿಳಿಸಿದ್ದಾರೆ.

Exit mobile version