Site icon TUNGATARANGA

ವರ್ಷವಿಡೀ ಸಂಸ್ಕೃತ ಭಾಷೆಗಾಗಿ ಮೀಸಲಿಟ್ಟ ಮೇದಾವಿ ಶಿವಮೊಗ್ಗದ ಎಸ್.ಕೆ. ಶೇಷಾಚಲ

ಜನುಮದಿನದ ಸಮಾರಂಭದಲ್ಲಿ ನಿರ್ಧಾರ


ನಾವು ಬಗೆ ಬಗೆಯ ರೀತಿಯಲ್ಲಿನ ಜನುಮದಿನಾಚರಣೆಗಳನ್ನು ಆಚರಿಸಿಕೊಂಡಿದ್ದೇವೆ. ಆಚರಿಸಿಕೊಳ್ಳುತ್ತಿರುವುದನ್ನು ಗಮನಿಸಿದ್ದೇವೆ. ಹಾಗೆಯೇ ಜನುಮದಿನದಂದು ಹಲವು ಕಡೆ ಪ್ರಜ್ಞಾ ಪೂರಕ ನಿಲುವುಗಳನ್ನು, ನಿರ್ಧಾರಗಳನ್ನು ಕೈಗೊಳ್ಳುವುದನ್ನು ಕಂಡಿದ್ದೇವೆ. ಈ ನಡುವೆ ಶಿವಮೊಗ್ಗ ವಾಸವಿ ವಿದ್ಯಾಲಯದ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಅವರು ಜನುಮದಿನದಂದೇ ವರ್ಷವಿಡಿ ಸಂಸ್ಕೃತ ಭಾಷೆಗಾಗಿ ತಮ್ಮನ್ನು ತಾವು ಮುಡಿಪಾಗಿಡಲು, ಅದಕ್ಕಾಗಿ ಬಹುತೇಕ ಬಿಜಿಯ ಬದುಕಲ್ಲಿ ಬಹುಭಾಗ ಸಮಯವನ್ನು ಮೀಸಲಿಡುವುದಾಗಿ ಘೋಷಿಸಿದ್ದಾರೆ.


ಶಿವಮೊಗ್ಗ ನಗರದ ಹಿರಿಯರಾದ ವಾಸವಿ ವಿದ್ಯಾಲಯದ ಮುಖ್ಯಸ್ಥರಾಗಿ ದೇಶಪ್ರೇಮ, ಭಾಷೆ, ಸಂಸ್ಕೃತಿ, ಸಂಸ್ಕಾರ, ಧರ್ಮಗಳ ಉಳುವಿಗೆ ಶಾಂತಿ ಕಾಪಾಡುವಿಕೆಗೆ ನಿರಂತರ ಪ್ರಯತ್ನಿಸುತ್ತಿರುವ ಶೇಷಾಚಲ ಅವರು ತಮ್ಮ ೬೮ನೇ ವರುಷದ ಆರಂಭದ ದಿನ ಇಂತಹದೊಂದು ನಿರ್ಧಾರವನ್ನು ಕೈಗೊಂಡದ್ದು, ಹೆಮ್ಮೆಯ ವಿಚಾರವೇ ಹೌದು.


ಆರ್ಯ ವೈಶ್ಯ ಜನಾಂಗದ ಪ್ರಮುಖರು, ವಾಸವಿ ವಿದ್ಯಾಲಯ ಹಾಗೂ ವಾಸವಿ ಅಕಾಡೆಮಿಯ ಕಾರ್ಯದರ್ಶಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಎಸ್.ಕೆ.ಶೇಷಾಚಲ, ಅಪ್ಪಟ ಭಾರತೀಯ, ಜನ್ಮ ದಿನದಂದು ಬೆಳಿಗ್ಗೆ ೮ ಕ್ಕೆ ಹಿತೈಷಿಗಳ, ಬಂಧುಗಳ ಸಮ್ಮುಖದಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ಸ್ವತ: ತಾವೇ ಪೂಜೆ ಅರ್ಚನೆ, ಅಭಿಷೇಕ ಸಲ್ಲಿಸಿ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿದರು.


ಅನಂತರ ಗಣ್ಯರ ಸಮ್ಮುಖದಲ್ಲಿ ನಡೆದ ಜನ್ಮದಿನದ ಸಮಾರಂಭದಲ್ಲಿ ಘೋಷಣೆ ಮಾಡಿದ್ದು ಅದನ್ನು ಕೇಳಿ ಅಲ್ಲಿದ್ದ ಗಣ್ಯರಿಗೆ, ಅವರ ಹಿತೈಷಿಗಳಿಗೆ ಆಶ್ಚರ್ಯವಾಯಿತು. ಅದೇನೆಂದರೆ ಅವರು ತಮ್ಮ ೬೭ನೇ ಜನ್ಮ ದಿನಾಚರಣೆಯನ್ನು ಒಂದು ವರ್ಷಗಳ ಸಂಸ್ಕೃತ ಭಾಷೆಯ ಪುನರುತ್ಥಾನಕ್ಕೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಸಂಕಲ್ಪ ಮಾಡುತ್ತಾರೆ.


ಅದರಲ್ಲೂ ಪ್ರಮುಖವಾಗಿ ಸಂಸ್ಕೃತ ಭಾರತಿಯವರು ಎಲ್.ಕೆ.ಜಿ.ಯಿಂದ ಏಳನೇ ತರಗತಿಯವರೆಗೆ ಸಿದ್ಧ ಪಡಿಸಿದ ಪಠ್ಯಕ್ರಮವನ್ನು ರಾಜ್ಯದ ಪ್ರಾಥಮಿಕ ಶಾಲೆಗಳಗಲ್ಲಿ ಅಳವಡಿಸಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ದೊರಕುವಂತೆ ಮಾಡುವುದು. ಇದಕ್ಕಾಗಿ ಅವರು ವಾಸವಿ ಅಕಾಡೆಮಿ ಟ್ರಸ್ಟ್ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಸಹಾಯ ಪಡೆಯಲು ಕೋರಿದ್ದಾರೆ. ಇವರ ಕೋರಿಕೆಗೆ ಎರಡೂ ಸಂಸ್ಥೆಯವರು ಅಸ್ತು ಎಂದಿದ್ದಾರೆ.


ಈ ಬಗ್ಗೆ ಅಂದಿನಿಂದಲೇ ಕಾರ್ಯೋನ್ಮುಖರಾದ ಇವರು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರೊಂದಿಗೆ ಮಾತನಾಡಿ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ಈ ಯೋಜನೆ ಜಾರಿಗೆ ತರುವಂತಹ ನಿಟ್ಟಿನಲ್ಲಿ ಸಾಮೂಹಿಕವಾಗಿ ಪ್ರಯತ್ನಿಸುವ ಮಾತು ಕಥೆ ನಡೆಸಿದ್ದಾರೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಇಂದು ಸಂಸ್ಕೃತ ಭಾಷೆ ನಮಗೆ ಯಾಕೆ ಬೇಕು, ಅದರಿಂದ ಸಮಾಜಕ್ಕೆ ಅಗುವ ಪ್ರಯೋಜನವಾದರೂ ಏನು? ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಮನಮುಟ್ಟುವಂತೆ ಹಲವಾರು ಕಾರ್ಯಕ್ರಮಗಳಲ್ಲಿ ಹೇಳುತ್ತಾರೆ.


ಅಂದಿನ ಜನ್ಮದಿನಾಚರಣೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಪಟ್ಟಾಭಿರಾಮ ಅವರು ಮಾತನಾಡುತ್ತಾ, ಎಸ್.ಕೆ.ಶೇಷಾಚಲ ರವರು ತಮ್ಮ ದಿನಾಚರಣೆಯನ್ನು ಸಂಸ್ಕೃತ ಚಟುವಟಿಕೆಗಳನ್ನು ಒಂದು ವರ್ಷದವರೆಗೆ ನಡೆದುವುದರ ಮೂಲಕ ಅಚರಿಸುತ್ತಿರುವುದು ಸಮಾಜಕ್ಕೂಂದು ಉತ್ತಮ ಸಂದೇಶ ನೀಡಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಜನ್ಮ ದಿನಾಚರಣೆಯನ್ನು ಸಮಾಜದ ಒಳಿತಿಗಾಗಿ ಯಾವುದಾದರೂ ಒಂದು ವಿಷಯವನ್ನು ಸ್ವೀಕರಿಸಿ ಆಚರಿಸಿದರೆ, ನಮ್ಮ ದೇಶದ ಸಾವಿರಾರು ಸಮಸ್ಯೆಗಳು ಬಗೆ ಹರಿಯುತ್ತವೆ, ಇದಕ್ಕೆ ಮುನ್ನುಡಿಯಾಗಿ ಶೇಷಾಚಲ ಅವರು ಮೊದಲಿಗರಾಗಿದ್ದಾರೆ ಎಂದರು


ವಿಧಾನ ಪರಿಷತ್ ಸದಸ್ಯರಾಗದ ಡಿ.ಎಸ್.ಅರುಣ್ ರವರು ಮಾತನಾಡುತ್ತ, ಸಂಸ್ಕೃತ ಭಾಷೆಯ ಪುನರುತ್ಥಾನಕ್ಕೆ ಶೇಷಾಚಲ ರವರು ಮಕ್ಕಳಿಗೆ ಸಂಸ್ಕೃತ ಕಲಿಸುವ ಯೋಜನೆ ಇಂದಿನ ನಮ್ಮ ಸಮಾಜಕ್ಕೆ ಪ್ರಸ್ತುತವಾಗಿದೆ. ಅವರ ಈ ಅನುಕರಣೆ ಇತರರಿಗೆ ಮಾರ್ಗದರ್ಶನವಾಗಲಿ ಎಂದರು.
ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎನ್.ಗೋಪಿನಾಥ್ ರವರು ಮಾತನಾಡುತ್ತ, ಈ ದೇಶದಲ್ಲಿ ಸಾದುಗಳು ಸಂತರು ಬಗೆ ಬಗೆಯ ವಿಧದಲ್ಲಿ ಸೇವೆ ಸಲ್ಲಿಸಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ ಅವರ ಸಾಲಿನಲ್ಲಿ ಶೇಷಾಚಲ ರವರು ಸಾಂಸರಿಕ ಜೀವನದಲ್ಲಿದ್ದು, ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾದ ಸಂಸ್ಕೃತ ಭಾಷೆಯ ಪ್ರಚಾರ, ಪ್ರಸಾರ ಕೈಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.


ಇವರ ಕಾರ್ಯಕ್ಕೆ ಸಹಕಾರಿಯಾಗಿ ದೊಡ್ಡ ಕಾರ್ಯಪಡೆಯೇ ಸಿದ್ಧವಾಗಿದ್ದು ಇವರ ಸ್ನೇಹಿತರು, ಬಂದುಗಳು, ಹಿತೈಷಿಗಳು ಈಗಾಗಲೇ ಕಾರ್ಯೋನ್ಮೂಖರಾಗಿದ್ದು ಸಂಸ್ಕೃತ ಬೆಳವಣಿಗೆಯಲ್ಲಿ ಧುಮುಕಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಮೊಗ್ಗ ಜಿಲ್ಲಾ ಸಂಚಾಲಕರಾದ ಬಿ.ಎ.ರಂಗನಾಥ್ ಅವರು ಶೇಷಾಚಲ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸುತ್ತ ಸಂಸ್ಕೃತ ಪುನರುತ್ಥಾನದ ಇವರ ಕಾರ್ಯಕ್ಕೆ ಇಡೀ ಸಂಘ ಪರಿವಾರವೇ ಸಹಕರಿಸಲಿದೆ ಎಂದು ಶುಭ ಹಾರೈಸಿದರು.


ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹಮೂರ್ತಿ ಮಾತನಾಡುತ್ತ ಶೇಷಾಚಲರವರ ಜನ್ಮ ದಿನಾಚರಣೆ ವರ್ಷವಿಡೀ ಸಂಸ್ಕೃತ ಸೇವೆಗೆ ಮೀಸಲಿಟ್ಟಿರುವುದು ದೇಶದಲ್ಲಿಯೇ ಇದು ಪ್ರ ಪ್ರಥಮ. ಇವರೊಂದಿಗೆ ನಾವು ಸದಾ ಕೈ ಜೋಡಿಸುತ್ತೇವೆ ಎಂದರು.
ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ಜನ್ಮದಿನಾಚರಣೆ ಯನ್ನು ಸಮಾಜದ ಒಳಿತಿಗಾಗಿ ಒಂದು ವರ್ಷವಿಡೀ ಈ ರೀತಿ ಸಾರ್ಥಕವಾಗಿ ಆಚರಿಸಿದರೆ ದೇಶ ಜಗತ್ತಿನಲ್ಲಿಯೇ ಗುರುಸ್ಥಾನ ಪಡೆಯುವುದರಲ್ಲಿ ಸಂದೇಹವೇ ಇಲ್ಲ.

Exit mobile version