ಶಿವಮೊಗ್ಗ: ಜಿಲ್ಲೆಯಲ್ಲಿ ನಡೆದ ಹಿಜಾಬ್-ಕೇಸರಿ ಶಾಲು ವಿವಾದ, ಕಲ್ಲುತೂರಾಟ ಮತ್ತು ಹಲ್ಲೆ ಪ್ರಕರಣವನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಮತ್ತು ಕಾಲೇಜು ಕ್ಯಾಂಪಸ್‌ನಲ್ಲಿ ಧರ್ಮದ ವಿಷ ಬೀಜ ಬಿತ್ತುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಕ್ಷದ ಜಿಲ್ಲಾ ಅಧ್ಯಕ್ಷ ಇಮ್ರಾನ್ ಅಹಮದ್ ಒತ್ತಾಯಿಸಿದ್ದಾರೆ.
ಶಿವಮೊಗ್ಗ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರೀಕ್ಷೆಗಳು ಬಂದಿರುವ ಈ ಸಂದರ್ಭ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬೀದಿಗಿಳಿಯುವುದು ಸರಿಯಲ್ಲ. ಉಡುಪಿ ಜಿಲ್ಲೆಯಲ್ಲಿ ಕಾಲೇಜಿಗೆ ಸೀಮಿತವಾಗಿದ್ದ ವಿವಾದವನ್ನು ಬಗೆಹರಿಸುವಲ್ಲಿ ಸರಕಾರ ವಿಫಲವಾಗಿದೆ. ಸೂಕ್ಷ್ಮ ವಿಚಾರವನ್ನು ಮಾತುಕತೆಯ ಮೂಲಕ ಬಗೆಹರಿಸಬಹುದಿತ್ತು. ಆದರೆ ಇವರು ಸಮವಸ್ತ್ರ ಕಡ್ಡಾಯ ಆದೇಶ ಹೊರಡಿಸಿದರು. ಇದರಿಂದ ಕಾಲೇಜುಗಳ ಆಡಳಿತ ಮಂಡಳಿಗಳು ಹಿಜಾಬ್ ಮತ್ತು ಕೇಸರಿ ವಸ್ತ್ರ ಧರಿಸುವವರನ್ನು ತಡೆದವು. ಈ ಕಾರಣದಿಂದ ಎಲ್ಲೆಡೆ ಘರ್ಷಣೆಯ ವಾತಾವರಣ ಸೃಷ್ಟಿಯಾಯಿತು. ವಿದ್ಯಾರ್ಥಿಗಳು ನಡುವಿನ ವಿವಾದಕ್ಕೆ ಸಂಘ ಪರಿವಾರ ಪ್ರವೇಶ ಮಾಡಿತು.ಅದರ ಅಂಗಸಂಘಟನೆಗಳು ಕಾಲೇಜು ಪ್ರವೇಶ ಮಾಡಿ ವಿವಾದವನ್ನು ದೊಡ್ಡದು ಮಾಡಿವೆ ಎಂದು ಆರೋಪಿಸಿದರು.
ಎಲ್ಲಾ ಧರ್ಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. ಜಿಲ್ಲೆಯ ಜನ ಶಾಂತಿ ಸುವ್ಯವಸ್ಥೆಗೆ ಗಮನ ಕೊಡಬೇಕು. ಮತ್ತು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಅವಕಾಶ ಬಳಸಿಕೊಳ್ಳುವುದನ್ನು ಎಸ್.ಡಿ.ಪಿ.ಐ ಖಂಡಿಸುತ್ತದೆ ಎಂದು ಇಮ್ರಾನ್ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಜೀಬ್ ಮಾತನಾಡಿ, ಶಿವಮೊಗ್ಗದಲ್ಲಿ ಕಾಲೇಜು ಗ್ಲಾಸ್ ಒಡೆಯಲಾಗಿದೆ. ರಾಷ್ಟ್ರ ಧ್ವಜ ಹಾರಿಸುವ ಧ್ವಜಸ್ತಂಭದಲ್ಲಿ ಕೇಸರಿ ದ್ವಜ ಹಾರಿಸಲಾಗಿದೆ. ಈ ದುಂಡಾವರ್ತನೆ ನಡೆಸಿದ ವ್ಯಕ್ತಿಗಳನ್ನು ಬಂಧಿಸಿ ದೇಶದ್ರೋಹದ ಕೇಸು ದಾಖಲಿಸಬೇಕು. ಕೇಸರಿ ಶಾಲು ಧರಿಸಲು ಉತ್ತೇಜನ ನೀಡಿದ್ದಲ್ಲದೆ, ಪ್ರಚೋದನಕಾರಿ ಭಾಷಣ ಮಾಡಿದ ದೀನ್‌ದಯಾಳ್ ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು ಆರೋಪಿಸಿದರು.
ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ. ಈ ವಿಚಾರದ ಹೋರಾಟ ಅಲ್ಲಿಯೇ ನಡೆಯುತ್ತದೆ. ಶಾಲಾ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾಭ್ಯಾಸಕ್ಕೆ ಮಾತ್ರ ಅವಕಾಶ ಇರಬೇಕು. ಶಿವಮೊಗ್ಗ ನಗರದ ಹಾಗೂ ಜಿಲ್ಲೆಯಲ್ಲಿ ಎಲ್ಲರೂ ಶಾಂತಿ ಕಾಪಾಡಬೇಕು. ಕಾನೂನಿಗೆ ವಿರುದ್ಧದ ಕೆಲಸವನ್ನೂ ಯಾರೂ ಮಾಡಬಾರದು. ಕಾಲೇಜಿನಲ್ಲಿ ಮಧ್ಯಾಹ್ನದ ಊಟ ಹಂಚಿಕೊಂಡು ಉಣ್ಣುತ್ತಿದ್ದ ಮಕ್ಕಳಿಂದು ಪರಸ್ಪರ ವಿರೋಧಿಗಳಂತೆ ವರ್ತಿಸುವುದು ದುರಂತ. ಈ ರೀತಿಯ ಧರ್ಮದ ವಿಚಾರ ವಿದ್ಯಾರ್ಥಿಗಳಿಂದ ದೂರ ಇರಬೇಕು ಎಂಬ ನಿಲುವು ನಮ್ಮ ಪಕ್ಷದ್ದಾಗಿದೆ. ಬಿಜೆಪಿ ಮತ್ತು ಸಂಘಪರಿವಾರ ಧರ್ಮದ ಲೇಪ ಹಚ್ಚುವ ಕೆಲಸ ಬಿಡಬೇಕು ಎಂದು ಮುಜೀಬ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊಹಮದ್ ಕಲೀಮುಲ್ಲಾ, ಉಪಾಧ್ಯಕ್ಷ ದೇವೇಂದ್ರ ಪಟೇಲ್, ಜೀಲನ್ ರಾಜಾ, ಪೈರೋಜ್‌ಖಾನ್, ಮನ್ಸೂರ್ ಮತ್ತಿತರರಿದ್ದರು.