ಶಿವಮೊಗ್ಗ, ಫೆ.5:
ಕಳೆದ ಜನವರಿ 24 ರಂದು ರಾಜ್ಯದ ಎಲ್ಲಾ ಉಸ್ತುವಾರಿ ಸಚಿವರನ್ನು ರಾಜ್ಯ ಸರ್ಕಾರ ಬದಲಾವಣೆ ಮಾಡಿದ್ದು,ಶಿವಮೊಗ್ಗ ಶಿವಮೊಗ್ಗ ಸಚಿವ ಕೆ.ಎಸ್.ಈಶ್ವರಪ್ಪ ಬದಲಿಗೆ ಮಂಡ್ಯ ಮೂಲದ ಸಚಿವ ಕೆ.ಸಿ. ನಾರಾಯಣಗೌಡ ಅವರನ್ನು ನೇಮಿಸಲಾಗಿತ್ತು. ಮರುದಿನ ರಾತ್ರಿ ಶಿವಮೊಗ್ಗಕ್ಕೆ ಬಂದಿದ್ದ ಸಚಿವರು ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ತಿಂಗಳಿಗೆ ಕನಿಷ್ಠ ಮೂರರಿಂದ ನಾಲ್ಕು ಭಾರಿ ಬರುತ್ತೇನೆ ಎಂದು ಹೇಳಿ ಹೋದವರು ಇಂದಿನವರೆಗೂ ಬಂದಿಲ್ಲ.
ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ಸಿಟಿ ಅವಾಂತರ, ನಿತ್ಯ ಜನರ ಶಾಪ, ಮಿಮಾನ ನಿಲ್ದಾಣ ಕಾಮಗಾರಿ ಸೇರಿದಂತೆ ಹಲವು ಮಹತ್ತರ ಕಾಮಗಾರಿಗಳು ನಡೆಯುತ್ತಿರುವ ಹೊತ್ತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿ ಕಾಮಗಾರಿಗಳ ಮೇಲೆ ಪ್ರಭಾವ ಬೀರುತ್ತಿಲ್ಲ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ಡಾ.ಸೆಲ್ವಕುಮಾರ್ ನಿನ್ನೆ ನಡೆಸಿದ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇರಬೇಕಿತ್ತು. ಜಿಲ್ಲೆಯಲ್ಲಿನ ಅಭಿವೃದ್ದಿಗಳಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿದ್ದಾರೆ. ಆದರೆ ಇಡೀ ವ್ಯವಸ್ಥೆಯನ್ನು ಅತ್ಯಂತ ಗಂಭೀರವಾಗಿ ಅವಲೋಕಿಸುತ್ತಾ, ಜಿಲ್ಲೆಯ ಅಭಿವೃದ್ಧಿಗೆ ಬದ್ಧರಾಗಬೇಕಿರುವ ಉಸ್ತುವಾರಿ ಸಚಿವರು ದೂರದವರಾದರೆ ವ್ಯವಸ್ಥೆಗಳನ್ನು, ಅಲ್ಲಿನ ಲೋಪಗಳನ್ನು ಜನತೆ ಯಾರಿಗೆ ಹೇಳಬೇಕು. ನಿನ್ನೆ ಡಾ.ಸೆಲ್ವಕುಮಾರ್ ಮಾರ್ಚ್ ಅಂತ್ಯದೊಳಗೆ ಸ್ಮಾರ್ಟ್‌ಸಿಟಿ ಕೆಲಸಗಳನ್ನು ಮುಗಿಸುವಂತೆ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ.ನ ಸಿಇಒ ಸಹ ಸಂಬಂಧಿಸಿದವರಿಗೆ ಸೂಚಿಸಿದ್ದಾರೆ.
ಎಲ್ಲಾ ಕಡೆ ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ಗುಂಡಿ ಗೊಟರುಗಳಿಂದ ನಿತ್ಯದ ಬದುಕಿಗೆ ಕಿರಿಕಿರಿ ಮಾಡುತ್ತಿರುವ ಹೊತ್ತಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಿವಮೊಗ್ಗ ನಗರವನ್ನು ಒಮ್ಮೆಯಾದರೂ ಸುತ್ತಾಡಿ ಪರಿಸ್ಥಿತಿಯನ್ನು ಅವಲೋಕಿಸುವ ಜೊತೆಗೆ ಆಗಬೇಕಾದ ಕೆಲಸ ಮಾಡಲು ಸೂಚಿಸಬೇಕಿತ್ತು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ.ನಾರಾಯಣಗೌಡರು ಶೀಘ್ರ ಹಾಗೂ ಪದೇ ಪದೇ ಜಿಲ್ಲೆಗೆ ಆಗಮಿಸಿ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.