Site icon TUNGATARANGA

ಭಾವನಿಂದ ನಾದಿನಿಯ ಮೇಲೆ ಅತ್ಯಾಚಾರ: ಫೋಕ್ಸೋ ಕಾಯ್ದೆಯಡಿ ದೂರು 

ಶಿವಮೊಗ್ಗ, ಫೆ.9:
ಮೆಗ್ಗಾನ್ ಆಸ್ಪತ್ರೆಯ ಸಖಿ ಕೇಂದ್ರದಲ್ಲಿ 7 ತಿಂಗಳ ಮಗು ಸಾವುಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಕುಂಸಿ ಪೊಲೀಸರ ಪರಿಶೀಲನೆಯಲ್ಲಿ ಅಕ್ಕನ ಗಂಡ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ನಡೆಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಫೋಕ್ಸೋ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂಸಿ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಘಟನೆ ಇದಾಗಿದ್ದು, ಎಸ್ಸೆಸ್ಸೆಲ್ಸಿ ಅನುತ್ತೀರ್ಣಳಾಗಿದ್ದ ಸಂದರ್ಭದಲ್ಲಿ ಅಕ್ಕನ ಮನೆಗೆ ಬಂದಿದ್ದ ಈಕೆಯ ಮೇಲೆ ಅಕ್ಕನ ಗಂಡನೇ ನಿರಂತರವಾಗಿ ಅತ್ಯಾಚಾರ ನಡೆಸಿದ್ದ ಘಟನೆ ಬಹಿರಂಗಗೊಂಡಿದೆ. ಈ ಯುವತಿ ಹಾಗೂ ಅಕೆಯ ಅಣ್ಣ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇಂದು ಕುಂಸಿ ಪೊಲೀಸರು ಆರೋಪಿಯಾದ ಭಾವವನ್ನು ಬಂಧಿಸಿದ್ದಾರೆ.


6 ನೇ ತರಗತಿಯಿಂದ ಅಕ್ಕನ ಮನೆಯಲ್ಲೇ ಹೆಚ್ಚುದಿನ ಇರುತ್ತಿದ್ದ ನಾದಿನಿಯ ಮೇಲೆ ಭಾವನೇ ಈ ಕೃತ್ಯ ನಡೆಸಿದ್ದು, ಕಳೆದ 4 ತಿಂಗಳ ಹಿಂದೆ ಈ ಯುವತಿ ವಾಂತಿ ಮಾಡಿಕೊಂಡ ಸಂದರ್ಭದಲ್ಲಿ ಆಕೆಯ ಅಕ್ಕ ಹಾಗೂ ತಾಯಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಗ ಆಕೆ 5ತಿಂಗಳ ಗರ್ಭಿಣಿಯಾಗಿದ್ದರು. ೧೮ ವರ್ಷ ವಯಸ್ಸು ಎಂದು ಹೇಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಕಳೆದ ಜನವರಿ 13 ರಂದು ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಮಗುವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಒಂದುದಿನವಿದ್ದ ನಂತರ ಮಗುವನ್ನು ಮೆಗ್ಗಾನ್‌ಆಸ್ಪತ್ರೆಯಲ್ಲಿ ಐಸಿಯುನಲ್ಲಿಟ್ಟಿದ್ದರು. ಮರುದಿನ ಮಗು ಸಾವು ಕಂಡಿದೆ.
ಈ ಬಗ್ಗೆ ಅನುಮಾನಗೊಂಡ ಪೊಲೀಸರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದು ಆರೋಪಿಯನ್ನು ಬಂಧಿಸಲಾಗಿದೆ. ಆ ಯುವತಿಯನ್ನು ಉಜ್ವಲಕೇಂದ್ರದಲ್ಲಿ ಇರಿಸಲಾಗಿದೆ.

Exit mobile version