ಹೊಸನಗರ; ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೋರಿ ವ್ಯಕ್ತಿಯೋರ್ವ ಶುಕ್ರವಾರ ಬೆಳ್ಳಂಬೆಳಗ್ಗೆ ಏಕಾಏಕಿ ಮೊಬೈಲ್ ಟವರ್ ಏರಿ ಸಾರ್ವಜನಿಕವಾಗಿ ಸಂಚಲನ ಮೂಡಿಸಿದ ಘಟನೆ ತಾಲೂಕಿನ ಕೋಡೂರು ಗ್ರಾಮದಲ್ಲಿ ನೆಡೆದಿದೆ.
ಶಾಂತಪುರದ ವಾಸಿ ಕೃಷ್ಣಮೂರ್ತಿ ಬಿನ್ ಹುಚ್ಚನಾಯ್ಕ್(47) ಟವರ್ ಏರಿದ ವ್ಯಕ್ತಿ. ತನ್ನ ವಾಸದ ಮನೆಯ ಜಾಗಕ್ಕೆ ಸಂಬಂಧಿಸಿದಂತೆ ನೆರೆ ಮನೆಯವರಲ್ಲಿ ಹಲವು ವರ್ಷಗಳಿಂದ ವ್ಯಾಜ್ಯ ನಡೆದಿದ್ದು, ಈ ಸಂಬಂಧ ಸೂಕ್ತ ಸರ್ಕಾರಿ ದಾಖಲೆ ನೀಡುವಂತೆ ಕೋರಿ ಹಲವು ಬಾರಿ ಗ್ರಾಮಾಡಳಿತಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರದ ಹಿನ್ನಲೆಯಲ್ಲಿ ಇಂದು ಏಕಾಏಕೀ ಟವರ್ ಏರಿ ಪ್ರತಿಭಟನೆಗೆ ಮುಂದಾದರು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ತಾಲೂಕು ಆಡಳಿತದ ಅಧಿಕಾರಿಗಳು ಕೆಲವು ಕಾಲ ಮಂತ್ರಮುಗ್ದರಾದರು. ತನ್ನ ಬೇಡಿಕೆ ಈಡೇರಿಸುವ ಹೊರತು ತಾನು ಕೆಳಗೆ ಬಾರೆನು . . . ಎಂದು ಹಟ ಹಿಡಿದಿದ್ದ, ಕೃಷ್ಣಮೂರ್ತಿಯ ಮನ ಓಲಿಸಲು ಅಧಿಕಾರಿಗಳಿಗೆ ಹಲವು ಗಂಟೆಗಳೇ ಬೇಕಾಯಿತು. ಅಗ್ನಿಶಾಮಕ ದಾಳ, ಪೊಲೀಸ್ ಸಿಬ್ಬಂದಿಗಳ ಸಹಿತ ತಹಶೀಲ್ದಾರ್ ವಿ.ಎಸ್. ರಾಜೀವ್, ಇಒ ಪ್ರವೀಣ್ ಕುಮಾರ್, ಸಿಪಿಐ ಮಧುಸೂದನ್ ಸಮ್ಮುಖದಲ್ಲಿ ಕೃಷ್ಣಮೂರ್ತಿಯ ಮನ ಒಲಿಸಿ, ಪರಿಹಾರ ಕೊಡಿಸುವ ಭರವಸೆಯೊಂದಿಗೆ ಟವರ್‌ನಿಂದ ಕೆಳಗಿಳಿಸಲಾಯಿತು.
ಪೊಲೀಸ್ ಸಿಬ್ಬಂದಿಗಳ ಬಂದೋಬಸ್ತ್‌ನಲ್ಲಿ ಅಗ್ನೀಶಾಮಕದಳದ ಸಿಬ್ಬಂದಿಗಳಾದ ಸಹಾಯಕ ಅಗ್ನಿಶಾಮಕ ಅಧಿಕಾರಿ ಕೆ.ಟಿ.ರಾಜಪ್ಪ, ಪ್ರಮುಖ ಅಗ್ನಿಶಾಮಕ ಕೆಹೆಚ್. ರಾಜೇಶ್, ಆಗ್ನಿಶಾಮಕ ಬಿ. ಮಂಜುನಾಥ್, ಚಾಲಕ ಬಿ.ಜೆ. ಶಿವರಾಜ್ ಕಾರ‍್ಯಚರಣೆಯನ್ನು ಯಶಸ್ಸಿಯಾಗಿ ಪೂರೈಸಿದರು.