ಶಿವಮೊಗ್ಜ,ಜ.೨೧:
ಬಹುತೇಕ ಶಿವಮೊಗ್ಗ ಜಿಲ್ಲೆಯಲ್ಲಿ ದರೋಡೆ, ಸುಲಿಗೆ, ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ೧೪ ಪ್ರಕರಣಗಳನ್ನು ಬೇಧಿಸುವ ಮೂಲಕ ಸುಮಾರು ೫.೩೦ಲಕ್ಷ ಮೌಲ್ಯದ ವಸ್ತುಗಳನ್ನು ಹೊಳೆಹೊನ್ನೂರು ಪೊಲೀಸ್ ಇನ್ಸ್ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ನೇತೃತ್ವದ ತಂಡ ಹಳೆಯ ಖದೀಮರ ಜಾಲವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಅರಬಿಳಚಿ ಕ್ಯಾಂಪ್ನ ಮನೆಯೊಂದರ ಕಳವು ಪ್ರಕರಣದ ಆರೋಪಿಗಳ ಬೆನ್ನು ಹತ್ತಿದ ಈ ಪೊಲೀಸ್ ತಂಡ ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಜಿಲ್ಲೆಯ ೧೪ ಪ್ರಕರಣಗಳ ವಸ್ತುಗಳನ್ನು ವಕ್ಕೆ ಪಡೆದಿದೆ.
ಶಿವಮೊಗ್ಗ ತಾಲೂಕಿನ ಹಾಯ್ ಹೊಳೆ ಗ್ರಾಮದ ಸತೀಶ ಯಾನೆ ಕರಡಿ, ಗೋಪಾಳದ ಸಿದ್ದೇಶ್ವರ ವೃತ್ತದ ಬಳಿಯ ಪ್ರವೀಣ್, ಮಿಳಘಟ್ಟದ ಅಭಿಷೇಕ್ ಹಾಗೂ ಗಾಜನೂರಿನ ಇಂದ್ರಾ ನಗರದ ನಿವಾಸಿ ಶಿವಕುಮಾರ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ದ ಹೊಳೆಹೊನ್ನೂರು ಪೊಲೀಸ್ ಠಾಣೆ ಸೇರಿದಂತೆ, ಶಿವಮೊಗ್ಗದ ತುಂಗನಗರ ಪೊಲೀಸ್ ಠಾಣೆ, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಸುಲಿಗೆ ಪ್ರಕರಣಗಳು, ಮಾಳೂರು ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ, ಶಿಕಾರಿಪುರ, ರಿಪ್ಪನ್ ಪೇಟೆ, ತುಂಗಾನಗರ, ಶಿವಮೊಗ್ಗ ಗ್ರಾಮಾಂತರ, ರಿಪ್ಪನ್ ಪೇಟೆ ಹಾಗೂ ಹೊಳೆಹೊನ್ನೂರು ಸೇರಿದಂತೆ ಎಂಟು ಠಾಣೆಗಳಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿತ್ತು.
ಎಸ್ಪಿ ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮಾತೆ, ಭದ್ರಾವತಿ ಉಪವಿಭಾಗದ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮೀಪತಿ ನೇತೃತ್ವದ ತಂಡದಲ್ಲಿ ಪಿಎಸ್ಐ ಸುರೇಶ್, ಎಎಸ್ಐ ಲಿಂಗೇಗೌಡ, ಹೆಚ್ಸಿ ಮಂಜುನಾಥ್ ಸಿಬ್ಬಂದಿಗಳಾದ ಪ್ರಸನ್ನ, ಪ್ರಕಾಶ್ ನಾಯ್ಕ್, ವಿಶ್ವನಾಥ್, ಕಾಶೀನಾಥ್, ಇವರನ್ನು ಒಳಗೊಂಡ ತಂಡ ಈ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದೆ.