Site icon TUNGATARANGA

ಸರ್ಕಾರದಿಂದ ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ : ಆಕ್ರೋಶ ವ್ಯಕ್ತವಾಗಿದ್ದೇಕೆ ಗೊತ್ತಾ..?

ಶಿವಮೊಗ್ಗ:
ಸರ್ಕಾರ ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು, ಸರ್ಕಾರದ ನೂತನ ನಿರ್ಧಾರದಿಂದ ಸುಮಾರು 7500 ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ.ಅತಿಥಿ ಉಪನ್ಯಾಸಕರ ಅನ್ನ ಕಿತ್ತುಕೊಳ್ಳುವ ಸರ್ಕಾರದ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಆಗ್ರಹಿಸಿದೆ.

ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಸರ್ಕಾರ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ. ಸೋಮಶೇಖರ್ ಶಿಮೊಗ್ಗಿ ಮತ್ತು ಪದಾಧಿಕಾರಿಗಳು ಅತಿಥಿ ಉಪನ್ಯಾಸಕರಿಗೆ ಭರ್ಜರಿ ಕೊಡುಗೆ ನೀಡಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ ಮಾಡಿದ್ದೇ ಬೇರೆ. ಮುಷ್ಕರದಲ್ಲಿದ್ದ ಅತಿಥಿ ಉಪನ್ಯಾಸಕರನ್ನು ವಿಭಜನೆ ಮಾಡುವ ಷಡ್ಯಂತ್ರ ರೂಪಿಸಿ ಇರುವ 8 ಗಂಟೆಯ ಕಾರ್ಯಭಾರವನ್ನು 16 ಗಂಟೆಗೆ ಏರಿಕೆ ಮಾಡಿ ಶೇ. 50 ರಷ್ಟು ಅತಿಥಿ ಉಪನ್ಯಾಸಕರ ತೆಗೆದು ಹಾಕುವುದು ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು.


ಇಬ್ಬರ ಅನ್ನವನ್ನು ಕಸಿದು ಒಬ್ಬರಿಗೆ ನೀಡುವ ಹುನ್ನಾರ ಸರ್ಕಾರದ ನಿರ್ಧಾರ ಹಿಂದಿದೆ. ಆದ್ದರಿಂದ ಸರ್ಕಾರದ ಈ ನಿರ್ಧಾರವನ್ನು ಅತಿಥಿ ಉಪನ್ಯಾಸಕರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಮತ್ತು ಹೋರಾಟ ಕೂಡ ಕೈಬಿಡುವುದಿಲ್ಲ ಎಂದು ತಿಳಿಸಿದರು.
ಈ ಸರ್ಕಾರಕ್ಕೆ ಅಂತಃಕರಣವಿಲ್ಲ. ತಾಯ್ತನ ಮೊದಲೇ ಇಲ್ಲ. ನಾವು ಕೇಳುತ್ತಿರುವುದು ಸೇವಾ ಭದ್ರತೆ. ನಮ್ಮನ್ನು ಉಪನ್ಯಾಸಕರ ಸೇವೆಯಲ್ಲಿ ವಿಲೀನಗೊಳಿಸಬೇಕು. ಪ್ರಸ್ತುತ ಕೆಪಿಎಸ್ ನಿಯಮದಲ್ಲಿ ಇದಕ್ಕೆ ಅವಕಾಶ ಕೂಡ ಇದೆ. ಆದರೂ ರಾಜ್ಯ ಸರ್ಕಾರ ಈ ಅಂಶಗಳನ್ನು ಮರೆಮಾಚಿದೆ. ಯಾವುದೇ ಚರ್ಚೆ ಮಾಡದೇ ನಿಜವಾದ ಅಧ್ಯಯನದ ವರದಿ ನೀಡದೇ, ಸಾಧಕ –ಬಾಧಕ ಗುರುತಿಸದೇ, ಸಲಹೆ ಪಡೆಯದೇ ಉನ್ನತ ಶಿಕ್ಷಣ ಸಚಿವರು ದಿಢೀರನೇ ಶೇ. 50 ರಷ್ಟು ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆಯುವಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ದೂರಿದರು.
ಹಾಗಾಗಿ ಸರ್ಕಾರದ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ನಮಗೆ ಉದ್ಯೋಗ ಭದ್ರತೆ ಬೇಕು. ರಾಜ್ಯ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಉದ್ಯೋಗ ಕಡಿತಗೊಳಿಸುವ ಮಾರಕ ಆದೇಶವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್. ಸರ್ವಜ್ಞಮೂರ್ತಿ, ರಾಜೇಶ್ ಕುಮಾರ್, ಸತೀಶ್, ಚಂದ್ರಪ್ಪ, ವಸಂತಕುಮಾರ್, ಎಂ.ಆರ್. ರೂಪಾ, ಪರಿಮಳ, ಡಾ. ಶೀಲಾ ಮುಂತಾದವರಿದ್ದರು.

Exit mobile version