ಶ್ರೀಶೀಲ ಸಂಪಾದನಾ ಮಠದಲ್ಲಿ ಸಂಕ್ರಾಂತಿ
ಸಂಭ್ರಮ-ರುದ್ರಾಕ್ಷಿ ಮಾಲೆ ಧಾರಣೆ ಕಾರ್ಯಕ್ರಮ
ಶಿವಮೊಗ್ಗ: ರುದ್ರಾಕ್ಷಿ ಧಾರಣೆಯಿಂದ ಒತ್ತಡವನ್ನು ನಿಯಂತ್ರಿಸಬಹುದಲ್ಲದೆ ದೇಹ, ಮನಸ್ಸು ಮತ್ತು ಆತ್ಮಕ್ಕೆ ಧನಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ. ಇಂದ್ರಿಯಗಳ ಶಕ್ತಿ ಸಹ ಹೆಚ್ಚುತ್ತದೆ. ಅಲ್ಲದೆ ಆಧ್ಯಾತ್ಮಿಕತೆಯ ಪ್ರಬಲ ಸುರಕ್ಷಾ ಕವಚ ಸಹ ಸೃಷ್ಟಿಯಾಗುತ್ತದೆ ಎಂದು ಗೋಣಿಬೀಡು ಶ್ರೀ ಶೀಲ ಸಂಪಾದನಾ ಮಠದ ಪೀಠಾಧ್ಯಕ್ಷ, ಮಹಾ ತಪಸ್ವಿ ಸಿದ್ಧಲಿಂಗ ಶ್ರೀಗಳು ಹೇಳಿದರು.
ಶ್ರೀ ಶೀಲ ಸಂಪಾದನಾ ಮಠ ಸ್ಪಿರಿಚ್ಯುವಲ್ ಫೌಂಡೇಷನ್ ವತಿಯಿಂದ ಗೋಣಿಬೀಡಿನ ಶ್ರೀ ಶೀಲ ಸಂಪಾದನಾ ಮಠದಲ್ಲಿ ಭದ್ರೆಯ ಮಡಿಲಲ್ಲಿ ಪವಿತ್ರ ಸ್ಥಾನ ಹಾಗೂ ಸಂಜೆ ನಡೆದ ರುದ್ರಾಕ್ಷಿ ಮಾಲೆ ಧಾರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ರುದ್ರಾಕ್ಷಿ ಪ್ರಕೃತಿ ಮತ್ತು ಬ್ರಹ್ಮಾಂಡದ ಸಕಾರಾತ್ಮಕ ಶಕ್ತಿಯನ್ನು ಒಟ್ಟುಗೂಡಿಸುತ್ತದೆ. ಜೀವನದ ಎಲ್ಲಾ ಕೆಲಸಗಳನ್ನು ಸಕಾರಾತ್ಮಕಗೊಳಿಸುತ್ತದೆ. ಆಧ್ಯಾತ್ಮಿಕ ಅನ್ವೇಷಕರು ರುದ್ರಾಕ್ಷಿಯನ್ನು ಧರಿಸಬೇಕು. ಇದರಿಂದ ದೈವತ್ವದ ಉಪಸ್ಥಿತಿ ಜಾಗೃತಗೊಳ್ಳುತ್ತದೆ ಎಂದು ಅಭಿಪ್ರಾಯಿಸಿದರು.
ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ. ಅಂತಯೇ ಮನಷ್ಯನು ದುರ್ಗಣಗಳಿಂದ ಸದ್ಗುಣದ ಕಡೆಗೆ ಸಾಗಲಿ. ಸನ್ಮಾರ್ಗದಲ್ಲಿ ನಡೆಯಲಿ. ದೈಹಿಕ ಹಾಗೂ ಮಾನಸಿಕ ದೋಷ ನಿವಾರಣೆಯಾಗುವ ಪರ್ವ ಕಾಲ ಇದಾಗಲಿ ಎಂದು ಆಶಿಸಿದರು.
ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ.ಹಿರೇಮಠ, ಪಾಟೀಲ ವಿಜಯ ಕುಮಾರ್ ಬೆಳಗಾಂ, ಚೆನ್ನಪ್ಪ ಇಕ್ಲಾಸಪುರ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಯಾವುದೇ ಜಾತಿ, ಮತ, ಪಂಥ ಬೇಧವಿಲ್ಲದೆ ಆಧ್ಯಾತ್ಮಿಕ ಆಸಕ್ತರಿಗೆ ಮಹಾ ತಪಸ್ವಿ, ಪವಿತ್ರಾತ್ಮ ಡಾ. ಸಿದ್ಧಲಿಂಗ ಶ್ರೀಗಳು ರುದ್ರಾಕ್ಷಿ ಮಾಲೆ ಅನುಗ್ರಹ ಕರುಣಿಸಿದರು.