Site icon TUNGATARANGA

ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಿ: ಪದ್ಮಿನಿ ವಿಶ್ವನಾಥ್


ಶಿವಮೊಗ್ಗ,ಜ.೧೪:
ಮಕ್ಕಳು ಇತರರಿಂದ ತಮಗಾಗುತ್ತಿರುವ ತೊಂದರೆಗಳನ್ನು ಭಯ ಪಡದೆ ತಮ್ಮ ಪೋಷಕರ ಬಳಿ ಹೇಳಿಕೊಳ್ಳಬೇಕು. ತಮ್ಮವರಾಗಲಿ ಅಥವಾ ಬೇರೆ ಯಾರೇ ಆಗಲಿ ನಿಮ್ಮನ್ನು ಭಯಪಡಿಸಿ ನಿಮಗೆ ಯಾವುದೇ ರೀತಿಯ ತೊಂದರೆ ನೀಡುತ್ತಿದ್ದಲ್ಲಿ ನಿರ್ಭಯವಾಗಿ ಸಂಕೋಚ ಬಿಟ್ಟು ಹೇಳಿಕೊಂಡಾಗ ಮಾತ್ರ ನಿಮ್ಮ ಸಮಸ್ಯೆಗೆ ಪರಿಹಾರ ದೊರಕಬಲ್ಲದು ಎಂದು ಮಲೆನಾಡು ಮಿತ್ರ ಪತ್ರಿಕೆಯ ಉಪ ಸಂಪಾದಕಿ ಪದ್ಮಿನಿ ವಿಶ್ವನಾಥ್ ತಿಳಿಸಿದರು.


ನಗರದ ಸಂತೇಕಡೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಮಕ್ಕಳಿಗಾಗಿ ಪೊಲೀಸ್ ಇಲಾಖೆ ವತಿಯಿಂದ ನಡೆಸುತ್ತಿರುವ ಸ್ಟುಡೆಂಟ್ ಪೊಲೀಸ್ ಕೆಡೆಟ್ ತರಬೇತಿ ಅಂಗವಾಗಿ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭದ್ರತೆಗೆ ಕಾರಣಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದ ಅವರು, ಇತ್ತೀಚೆಗೆ ವರ್ಲ್ಡ್ ವಿಷನ್ ಇಂಡಿಯಾ ಸಮೀಕ್ಷೆಯಲ್ಲಿ ಪ್ರತಿ ಇಬ್ಬರು ಮಕ್ಕಳಲ್ಲಿ ಒಬ್ಬರು ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವ ಬಗ್ಗೆ ವರದಿ ಬಂದಿದೆ. ಮಹಿಳೆಯರಾಗಲಿ ಅಥವಾ ಮಕ್ಕಳಾಗಲಿ ತಮ್ಮ ಮೇಲಾಗುತ್ತಿರುವ ದೌರ್ಜನ್ಯ, ಹಲ್ಲೆ , ಲೈಂಗಿಕ ಕಿರುಕುಳ, ಅನಗತ್ಯ ನಿಂದನೆ ಮುಂತಾದ ವಿಷಯಗಳನ್ನು ತಮ್ಮವರ ಬಳಿ ಮುಕ್ತವಾಗಿ ಹೇಳಿಕೊಂಡಾಗ ಮಾತ್ರ ನಿಮ್ಮ ಸಮಸ್ಯೆ ಬಗೆಹರಿಯಬಹುದಲ್ಲದೇ, ನಿಮ್ಮ ಮೇಲೆ ದೌರ್ಜನ್ಯವೆಸಗಿದವರನ್ನು ಶಿಕ್ಷೆಗೊಳಪಡಿಸಬಹುದು ಎಂದರು.


ಇದಕ್ಕಾಗಿ ಸರ್ಕಾರ ವತಿಯಿಂದ ಪೋಕ್ಸೊ ಸೇರಿದಂತೆ ಹಲವಾರು ಕಾನೂನು ಕಾಯ್ದೆಗಳು ಮಕ್ಕಳು ಮತ್ತು ಮಹಿಳೆಯರ ಪರವಾಗಿವೆ ಎಂದ ವಿವರಿಸಿದರಲ್ಲದೇ, ಅವುಗಳ ಬಗ್ಗೆ ಮಾಹಿತಿ ನೀಡಿದ ಅವರು, ವಿಪರ್ಯಾಸವೆಂದರೆ ಕೊರೊನಾದಂತಹ ಸಾಂಕ್ರಾಮಿಕ ರೋಗ ದೇಶವನ್ನು ಬಾಸಿದ ಸಂದರ್ಭದಲ್ಲಿ ಲೌಕ್‌ಡೌನ್‌ನಿಂದಾಗಿ ಜನ ಮನೆಯಿಂದ ಹೊರಬರದಂತಹ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗಿದ್ದು ಆಘಾತಕಾರಿ. ಈ ಸಂದರ್ಭದಲ್ಲಿ ಸೈಬರ್ ಅಪರಾಧಗಳು ಹೆಚ್ಚಾದವು ಎಂದು ಆತಂಕ ವ್ಯಕ್ತಪಡಿಸಿದರು.
ಕೇವಲ ನಿಮ್ಮ ಮೇಲೆ ಆಗುವ ದೌರ್ಜನ್ಯ ಮಾತ್ರವಲ್ಲ ,ನಿಮ್ಮ ಕಣ್ಣು ಮುಂದೆ ನಡೆಯುತ್ತಿರಬಹುದಾದ ಶೋಷಣೆ, ಹಲ್ಲೆಯಂತಹ ಸಂದರ್ಭಗಳಲ್ಲಿ ನಿಮ್ಮ ಪೋಷಕರ ಗಮನಕ್ಕೆ ತಂದು ಅದನ್ನು ಪ್ರತಿಭಟಿಸುವ ಧೈರ್ಯ ಮತ್ತು ಸ್ಥೈರ್ಯವನ್ನು ಪ್ರತಿ ಮಕ್ಕಳೂ ಬೆಳೆಸಿಕೊಳ್ಳಿ. ಹೆಣ್ಣು ಮಕ್ಕಳು ಕರಾಟೆ, ಮುಂತಾದ ಸ್ವರಕ್ಷಣಾ ಕಲೆಗಳನ್ನು ಕಲಿತುಕೊಳ್ಳಿ ಎಂದು ಕಿವಿಮಾತು ಹೇಳಿದ ಅವರು, ಏನೇ ಆಗಲಿ ಎಂತಹ ಸಂಧರ್ಭವೇ ಎದುರಾಗಲಿ ಅದನ್ನು ಆತ್ಮ ವಿಶ್ವಾಸದಿಂದ ಎದುರಿಸಿ ಎಂದು ತಿಳಿ ಹೇಳಿದರು.
ತುಂಗಾನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಆರ್.ಉಮಾಪತಿ ಪೊಲೀಸ್ ಇಲಾಖೆ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ದೊರಕಬಹುದಾದ ಕಾನೂನುಗಳ ಬಗ್ಗೆ ತಿಳಿಸಿದರು.
ಉಪನ್ಯಾಸದ ನಂತರ ಮಕ್ಕಳೊಂದಿಗಿನ ಸಂವಾದದಲ್ಲಿ ಮಕ್ಕಳು ಹಲವಾರು ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಲಿಷಾ ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಪೊಲೀಸ್ ಇಲಾಖೆ ವತಿಯಿಂದ ನೋಟ್‌ಬುಕ್ ಮತ್ತು ಪೆನ್ನು ವಿತರಿಸಲಾಯಿತು.

Exit mobile version