Site icon TUNGATARANGA

ಜು.29: ಕುವೆಂಪು ವಿವಿಯ ಘಟಿಕೋತ್ಸವ

ಶಿವಮೊಗ್ಗ: ಕುವೆಂಪು ವಿವಿಯ 30ನೇ ವಾರ್ಷಿಕ ಘಟಿಕೋತ್ಸವ ಜು.29 ರಂದು ಆನ್‍ಲೈನ್ ಮೂಲಕ ವಿವಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಘಟಿಕೋತ್ಸವ ವಿಶೇಷವಾಗಿದೆ ಮತ್ತು ಸರಳವಾಗಿರುತ್ತದೆ. ಆನ್‍ಲೈನ್ ಮೂಲಕ ಘಟಿಕೋತ್ಸವ ನಡೆಯಲಿದ್ದು, ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಿಂಡಿಕೇಟ್ ಸದಸ್ಯರು ಹೀಗೆ ಎಲ್ಲರೂ ಸೇರಿ ಸುಮಾರು 100 ಮಂದಿ ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅವರೆಲ್ಲರು ಸಂದೇಶ ಕಳಿಸಿದ್ದು, ಒಡಿಸ್ಸಾದ ಕೇಂದ್ರೀಯ ವಿವಿಯ ಕುಲಾಧಿಪತಿ ಪ್ರೊ.ಪಿ.ವಿ.ಕೃಷ್ಣಭಟ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಆದರೆ ಅವರು ಕೂಡ ನೇರವಾಗಿ ಬರುವುದಿಲ್ಲ. ವೀಡಿಯೋ ಮೂಲಕ ಭಾಷಣ ಮಾಡಲಿದ್ದಾರೆ ಎಂದರು.
ಈ ಬಾರಿ 9443 ಪುರುಷರು, 14289 ಮಹಿಳೆಯರು ಸೇರಿ ಒಟ್ಟು 23,732 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಹಾಗೆಯೇ 140 ಪುರುಷರು, 54 ಮಹಿಳೆಯರು ಸೇರಿದಂತೆ 194 ಅಭ್ಯರ್ಥಿಗಳು ಪಿಹೆಚ್‍ಡಿ ಪದವಿ ಪಡೆದಿದ್ದಾರೆ. ಘಟಿಕೋತ್ಸವದಲ್ಲಿ 119 ಸ್ವರ್ಣ ಪದಕಗಳಿದ್ದು, ಅವುಗಳನ್ನು 54 ಮಹಿಳೆಯರು, 13 ಪುರುಷರು ಸೇರಿದಂತೆ ಒಟ್ಟು 67 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಹಾಗೆಯೇ 4 ಪುರುಷರು,15 ಮಹಿಳೆಯರು ಸೇರಿದಂತೆ 19 ವಿದ್ಯಾರ್ಥಿಗಳು 24 ನಗದು ಬಹುಮಾನಗಳನ್ನು ಪಡೆದಿದ್ದಾರೆ. ಇದರಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ ಎಂದರು.
ಹೆಚ್ಚು ಪದಕ ವಿದ್ಯಾರ್ಥಿಗಳು:-
ಕನ್ನಡ ಅಧ್ಯಯನ ಎಂ.ಎ. ವಿಭಾಗದ (ಕನ್ನಡ)ದಲ್ಲಿ ಹೆಚ್.ರಂಗನಾಥ್ ಎಂಬ ವಿದ್ಯಾರ್ಥಿ 10 ಸ್ವರ್ಣ ಪದಕ ಹಾಗೂ ಮೂರು ನಗದು ಬಹುಮಾನಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಪದಕ ಪಡೆದ ವಿದ್ಯಾರ್ಥಿಯಾಗಿದ್ದಾರೆ.
ಎಂ.ಆರ್.ಸಂಚಿತ(ಎಂಎಸ್ಸಿ ಜೈವಿಕ ತಂತ್ರಜ್ಞಾನ), ಬಿ.ಬಿ.ರುಕ್ಕಯ್ಯ (ಬಿ.ಕಾಂ), ತಲಾ 5 ಸ್ವರ್ಣ ಪದಕ ಪಡೆದಿರುತ್ತಾರೆ. ಹೆಚ್.ವಾಣಿ(ಸಮಾಜ ಶಾಸ್ತ್ರ,ಎಂಎ.,) ಎನ್.ಜಿ.ಪೂಜಾ(ಎಂಎಸ್ಸಿ ಪರಿಸರ ವಿಜ್ಞಾನ), ಕೆ.ವಿ.ಅಮೃತ (ಎಂಬಿಎ), ತಲಾ 4 ಸ್ವರ್ಣ ಪದಕ ಪಡೆದಿರುತ್ತಾರೆ ಎಂದರು.
ಸೀಮಾ ಎಸ್.ಡಿ. ಎಂಎಸ್ಸಿ ಗಣಿತಶಾಸ್ತ್ರದಲ್ಲಿ 3 ಪದಕ,. 3 ನಗದು ಬಹುಮಾನ ಪಡೆದರೆ, ಎಂಸಿಎ ವಿಭಾಗದಲ್ಲಿ ಕೆ.ಆರ್.ಆಶ್ವಿನಿ 3 ಸ್ವರ್ಣ ಪದಕ, ಒಂದು ನಗದು ಬಹುಮಾನ ಪಡೆದಿರುತ್ತಾರೆ. ಎಂಎಸ್ಸಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಬಿ.ಎಂ.ನವೀನ, ಎಂ.ಎ.ಇತಿಹಾಸ ವಿಭಾಗದಲ್ಲಿ ಪಿ.ದೀಪ್ತಿ, ಎಂಎಸ್ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ಶಾಶ್ವತಿ ಹೆಚ್.ಎಸ್, 3 ಸ್ವರ್ಣ ಪದಕ ಬಹುಮಾನ ಪಡೆದಿರುತ್ತಾರೆ ಎಂದರು.
ಪಿಹೆಚ್‍ಡಿ ಪದವಿಯನ್ನು 194 ವಿದ್ಯಾರ್ಥಿಗಳು ಪಡೆದಿದ್ದು ಇಲ್ಲಿ ಪುರುಷರೇ ಮೇಲುಗೈ ಸಾಧಿಸಿದ್ಧಾರೆ. ಕಲಾ ವಿಭಾಗದಲ್ಲಿ 80, ವಾಣಿಜ್ಯ ನಿಕಾಯದಲ್ಲಿ 13, ಶಿಕ್ಷಣ ನಿಕಾಯದಲ್ಲಿ 05, ಕಾನೂನು ನಿಕಾಯದಲ್ಲಿ 01, ವಿಜ್ಞಾನನಿಕಾಯದಲ್ಲಿ 93 ವಿದ್ಯಾರ್ಥಿಗಳು ಸೇರಿ 194 ಜನರಿಗೆ ಪಿಹೆಚ್‍ಡಿ ಪದವಿ ನೀಡಲಾಗಿದೆ ಎಂದರು.
ಆನ್‍ಲೈನ್ ಸಿದ್ದತೆ:
ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ವೆಂಕಟೇಶ್ವರಲು ಆನ್‍ಲೈನ್ ಸಿದ್ದತೆ ಬಗ್ಗೆ ವಿವರಣೆ ನೀಡಿ, ಕೋವಿಡ್ ಹಿನ್ನೆಲೆಯಲ್ಲಿ ಘಟಿಕೋತ್ಸವವನ್ನು ಮುಂದೂಡುತ್ತಾ ಬಂದಿದ್ದು, ಈಗಲೂ ಕೂಡ ಹೆಚ್ಚು ಜನರಿಲ್ಲದೇ ಸೀಮಿತವಾಗಿ ಆನ್‍ಲೈನ್ ಮೂಲಕವೇ ಘಟಿಕೋತ್ಸ ವವನ್ನು ಆಯೋಜಿಸಲಾಗಿದೆ. ರ್ಯಾಂಕ್ ವಿದ್ಯಾರ್ಥಿಗಳಲ್ಲೂ ಕೆಲವರನ್ನು ಮಾತ್ರ ಘಟಿಕೋತ್ಸವಕ್ಕೆ ಆಮಂತ್ರಣ ನೀಡಲಾಗಿದೆ. ಆದರೆ ಅವರ ಪೋಷಕರು ಈ ಕಾರ್ಯಕ್ರಮಕ್ಕೆ ಹಾಜರಾಗುವಂತಿಲ್ಲ. ಉಳಿದ ಎಲ್ಲರಿಗೂ ಅಂಚೆ ಮೂಲಕವೇ ಅವರ ಪ್ರಮಾಣಪತ್ರ ಮತ್ತು ನಗದು ಬಹುಮಾನ ಹಾಗೂ ಪದಕಗಳನ್ನು ಕಳುಹಿಸಲಾಗುವುದು. ಈ ಬಾರಿ ಕೊರಳಿಗೆ ಹಾಕುವ ಪದಕದ ಬದಲು ಫೋಟೋ ಫ್ರೇಮ್ ಪದಕಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
ಘಟಿಕೋತ್ಸವ ಕಾರ್ಯಕ್ರಮ ವೀಕ್ಷಣೆಗಾಗಿ ಲೈವ್ ಸ್ಟ್ರೀಮಿಂಗ್ ಮತ್ತು ವೆಬಿನಾರ್ ವ್ಯವಸ್ಥೆಯನ್ನು ಮಾಡಲಾಗುವುದು. ರ್ಯಾಂಕ್ ವಿಜೇತರು ಮತ್ತು ಪಿಹೆಚ್‍ಡಿ ಪದವೀಧರರಿಗೆ ಹಾಗೂ ಪೋಷಕರಿಗೆ ಬೇರೆ ಬೇರೆ ಲಿಂಕ್‍ಗಳನ್ನು ಜೋಡಿಸಲಾಗುವುದು. ಈಗಾಗಲೇ ಎಲ್ಲ ಪದವೀ ವಿದ್ಯಾರ್ಥಿಗಳಿಗೆ ಈ ಲಿಂಕನ್ನು ಕಳುಹಿಸಲಾಗಿದೆ ಎಂದರು.
ಖಾದಿ ಉಡುಪು:
ಘಟಿಕೋತ್ಸವ ಸಂದರ್ಭದಲ್ಲಿ ತೊಡುತ್ತಿದ್ದ ಉಡುಪನ್ನು ಈ ಬಾರಿಯಿಂದ ಬದಲಾವಣೆ ಮಾಡಲಾಗಿದ್ದು, ಉದ್ದದ ಕಪ್ಪು ನಿಲುವಂಗಿಯ ಬದಲು ಖಾದಿ ವಸ್ತ್ರ ತಯಾರಿಸಲಾಗಿದೆ. ಈ ಗೌನ್ ಶಿವಪ್ಪನಾಯಕ ತೊಡುತ್ತಿದ್ದ ಉಡುಪನ್ನು ಹೋಲುತ್ತಿದ್ದು, ಪ್ರಾದೇಶಿಕ ಪರಂಪರೆಯನ್ನು ಉಳಿಸುವ ದೃಷ್ಟಿಯಿಂದ ಬದಲಾಯಿಸಲಾಗಿದೆ ಮತ್ತು ಶಿವಪ್ಪನಾಯಕ ತೊಡುತ್ತಿದ್ದ ಪೇಟ ಈ ಬಾರಿ ಅನಿವಾರ್ಯ ಕಾರಣಗಳಿಂದ ಇರುವುದಿಲ್ಲ. ಅದರ ಬದಲು ಮೈಸೂರು ಪೇಟ ಧರಿಸಲಾಗುವುದು ಎಂದರು.
ಕೇವಲ ಒಂದು ಗಂಟೆಯೊಳಗೆ ಇಡೀ ಘಟಿಕೋತ್ಸವ ಕಾರ್ಯಕ್ರಮ ಮುಗಿಯಲಿದೆ. ಸಿಂಡಿಕೇಟ್ ಸದಸ್ಯರು ಸೇರಿದಂತೆ ವೇದಿಕೆಯಲ್ಲಿ ಸುಮಾರು 50 ಜನರು ಇದ್ದರೆ, ವೇದಿಕೆಯ ಕೆಳಗೆ ಸುಮಾರು 50 ಮಂದಿ ಇರಲಿದ್ದಾರೆ. ಸುಮಾರು 1 ಸಾವಿರ ಜನರು ಕುಳಿತುಕೊಳ್ಳಬಹುದಾದ ಸಭಾಂಗಣದಲ್ಲಿ 100 ಜನರು ಮಾತ್ರ ಇದ್ದು, ಸಾಮಾಜಿಕ ಅಂತರ ಕಾಪಾಡಲಾಗುವುದು. ಎಲ್ಲರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಗುವುದು. ಥರ್ಮಲ್ ಟೆಸ್ಟ್ ಮಾಡಲಾಗುವುದು. ಇಡೀ ಸಭಾಂಗಣವನ್ನೇ ಸ್ಯಾನಿಟೈಸರ್ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ವಿಭಾಗದ ಕುಲಸಚಿವ ಪ್ರೊ.ಎನ್.ಎಸ್.ಪಾಟೀಲ್, ಹಣಕಾಸು ಅಧಿಕಾರಿ ಎಸ್.ರಾಮಕೃಷ್ಣ, ಪಿಆರ್‍ಓ ಸತ್ಯಪ್ರಕಾಶ್ ಇದ್ದರು.

Exit mobile version