Site icon TUNGATARANGA

ಜೀವ ವಿಮೆ ಬದುಕಿನ ಆಪದ್ಭಾಂಧವ: ದೇವರಾಜ್

ಶಿವಮೊಗ್ಗ: ಜೀವ ವಿಮೆ ದೀರ್ಘಾವಧಿಯ ಉಳಿತಾಯಕ್ಕೆ ನೆರವಾಗುತ್ತದೆಯಲ್ಲದೆ ಬದುಕಿಗೆ ರಕ್ಷಣೆ ನೀಡುತ್ತದೆ. ಬದುಕಿನ ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಜೀವ ವಿಮೆ ಅಗತ್ಯ. ಜೀವ ವಿಮೆ ಬದುಕಿನ ಆಪದ್ಭಾಂಧ ಎಂದು ಎಲ್‌ಐಸಿ ಆಫ್ ಇಂಡಿಯಾ ಶಿವಮೊಗ್ಗ ಶಾಖೆ-೨ರ ಹಿರಿಯ ವ್ಯವಸ್ಥಾಪಕ ಕೆ.ಹೆಚ್.ದೇವರಾಜ್ ಹೇಳಿದರು.’


ಇಲ್ಲಿನ ಅನುಪಿನಕಟ್ಟೆಯಲ್ಲಿರುವ ಮೌಂಟೇನ್ ಇನ್ನೋವೇಟಿವ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಪತ್ರ ವಿತರಿಸಿ ಅವರು ಮಾತನಾಡಿದರು.


ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಹಾಗೂ ಅನಿಶ್ಚಿತ ಘಟನೆಗಳಿಗೆ ಸಮರ್ಪಕ ಮತ್ತು ಸೂಕ್ತ ಹಣಕಾಸು ಯೋಜನೆಗಳು ಮಾತ್ರ ಪರಿಹಾರ ಒದಗಿಸಬಲ್ಲವು. ಪ್ರತಿಯೊಬ್ಬ ವ್ಯಕ್ತಿಯು ಬದುಕಿನಲ್ಲಿ ವಿವಿಧ ಹಂತಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಹಣ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗ ಮಾಡಲು ಹಣದ ಅಡಚಣೆ ಸಾಮಾನ್ಯ. ಈ ಕಾರಣಕ್ಕಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು. ಇವರಿಗೆ ನೆರವಾಗಲು ಶೈಕ್ಷಣಿಕ ವಿಮಾ ಸೌಲಭ್ಯವಿದೆ. ವಿದ್ಯಾರ್ಥಿಗಳು ಮತ್ತಿವರ ಪೋಷಕರು ಇದರ ಪ್ರಯೋಜನ ಪಡೆಯಬೇಕೆಂದರು.


ಪ್ರತಿಭಾನ್ವಿತ ವಿದ್ಯಾರ್ಥಿಗಳು ದೇಶದ ಬೌದ್ಧಿಕ ಸಂಪತ್ತು. ಇಂತಹ ಸಂಪತ್ತನ್ನು ಹೆಚ್ಚಿಸಲು ಎಲ್‌ಐಸಿ ಆಫ್ ಇಂಡಿಯಾ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಲಾ ೧೦ ಸಾವಿರ ರೂ.ನ ಗೋಲ್ಡನ್ ಜ್ಯೂಬಿಲಿ ಸ್ಕಾಲರ್ ಶಿಪ್ ನೀಡಲಿದೆ. ಈಗಲೂ ಸಹ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಎಲ್‌ಐಸಿ ಹಣಕಾಸು ಸಲಹೆಗಾರ ಕುಮಾರ್ ಎಸ್.ಎಂ., ಮೌಂಟೇನ್ ಇನ್ನೋವೇಟಿವ್ ಎಜುಕೇಷನ್ ಸೊಸೈಟಿ (ಎಂ.ಐ.ಇ.ಎಸ್.) ಶೈಕ್ಷಣಿಕ ನಿರ್ದೇಶಕ ಟಿ.ಎಸ್.ಶಿವಕುಮಾರ್, ಆಡಳಿತಾಧಿಕಾರಿ ಸುಮಾ ಕಳಸಾಪುರ, ಕಾರ್ಯದರ್ಶಿ ಶಿಲ್ಪಶ್ರೀ, ಮೌಂಟೇನ್ ಇನ್ನೋವೇಟಿವ್ ಶಾಲೆಯ ಪ್ರಾಂಶುಪಾಲೆ ಶಿಲ್ಪ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.

ಜೀವ ವಿಮೆ ಬದುಕಿನ ಆಪದ್ಭಾಂಧವ: ದೇವರಾಜ್

Exit mobile version