Site icon TUNGATARANGA

Special News: ಶಿವಮೊಗ್ಗ ಪಿ&ಟಿ ಕಾಲೋನಿಯ ಮನೆಯನ್ನು ಏಳು ಅಡಿ ಮೇಲೆತ್ತಿದ ಬಿಹಾರಿಗಳು!

ಶಿವಮೊಗ್ಗದಲ್ಲಿ ಇದೇ ಪ್ರಥಮ….!

ಮನೆ ಮಾಲಿಕರು ಶ್ರೀನಿವಾಸ್ ಮೂರ್ತಿ
ಎಸ್.ಕೆ.ಗಜೇಂದ್ರಸ್ವಾಮಿ
ಶಿವಮೊಗ್ಗ, ಜ.೦೮:
ಇಲ್ಲಿನ ಪಿ&ಟಿ ಕಾಲೋನಿಯ ಮೊದಲನೇ ತಿರುವಿನ ಕೊನೆಯ ಭಾಗದ ೨೫ ಚದರ ಅಡಿ ವಿಸ್ತೀರ್ಣದ ಡೂಫ್ಲೆಕ್ಸ್ ಮನೆಯೊಂದನ್ನು ನೆಲದಿಂದ ಸುಮಾರು ಏಳು ಅಡಿ ಮೇಲೆತ್ತುತ್ತಿರುವ ಕಾರ್ಯ ಕಳೆದ ೧ ತಿಂಗಳಿನಿಂದ ಸದ್ದಿಲ್ಲದೇ ನಡೆಯುತ್ತಿದೆ.
ಉದ್ಯೋಗ ಮತ್ತು ವಿನಿಮಯ ಕಛೇರಿಯ ನಿವೃತ್ತ ಉಪನಿರ್ದೇಶಕರು, ಕೈಗಾರಿಕಾ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲರು ಆದ ಶ್ರೀನಿವಾಸ ಮೂರ್ತಿ ಕೆ.ಜಿ. ಅವರ ಸುಮಾರು ೨೫ ವರ್ಷಗಳ ಹಿಂದೆ ನಿರ್ಮಿಸಿದ್ದ ಮನೆ ರಸ್ತೆಯಿಂದ ೫ ಅಡಿ ಆಳದಲ್ಲಿತ್ತು. ಈಗಾಗೀ ಪ್ರತಿ ವರ್ಷ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತಿತ್ತು. ಶ್ರೀನಿವಾಸ ಮೂರ್ತಿ ಅವರ ಪುತ್ರ, ಭದ್ರಾವತಿ ಕಾಲೇಜಿನ ಸಹಪ್ರಾಧ್ಯಾಪಕರೂ ಆದ ಕೆ.ಎಸ್.ಮಂಜುನಾಥ್ ಅವರು ಮನೆಯನ್ನು ಉಳಿಸಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿ ಬಿಹಾರ ಮೂಲದ ಶ್ರೀರಾಮ್ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಆ ಸಂಸ್ಥೆಯ ತಂತ್ರಜ್ಞ ಬಿಹಾರಿಗಳು ಕಳೆದ ೧ ತಿಂಗಳಿನಿಂದ ಇಡೀ ಮನೆಯನ್ನು ಹಂತ ಹಂತವಾಗಿ ಮೇಲೆತ್ತುತ್ತಿದ್ದಾರೆ.
ಈಗಾಗಲೇ ೬ಅಡಿ ಮೇಲಕ್ಕೆ ಬಂದಿರುವ ಮನೆ ಇನ್ನೂ ಒಂದು ಅಡಿ ಮೇಲೆ ಬರಲಿದೆ.

ಮನೆಯ ಯಾವುದೇ ಒಳಾಂಗಣ ವ್ಯವಸ್ಥೆಗಳಿಗೆ ಚಿಕ್ಕ ಲೋಪವಾಗಿಲ್ಲ. ಮನೆಯನ್ನು ಕೆಡವಿ ಬೇರೆ ಮನೆ ಕಟ್ಟದೇ, ಅದನ್ನೆ ಪುನರ್‌ನವೀಕರಿಸದೇ ಆ ಮನೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಮಂಜುನಾಥ್ ಅವರ ಈ ಪ್ರಯತ್ನ ಶಿವಮೊಗ್ಗ ಜಿಲ್ಲೆಯಲ್ಲೆ ಮೊಟ್ಟ ಮೊದಲನೆಯದಾಗಿದೆ.
ಸುಮಾರು ೬ರಿಂದ ೭ಲಕ್ಷ ಖರ್ಚಾಗುತ್ತದೆ ಎನ್ನುವ ಶ್ರೀನಿವಾಸ್ ಅವರು ಶ್ಮ್ಮೂರ್ತಿ ಅವರು ಸಂಸ್ಥೆಯ ಬಿಹಾರದ ತಂತ್ರಜ್ಞರನ್ನು ಪ್ರಶಂಸಿದ್ದಾರೆ.

೯ ಜನ ಬಿಹಾರಿ ತಂತ್ರಜ್ಞರು ಹಂತ ಹಂತವಾಗಿ ಮನೆಯನ್ನು ಮೇಲೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಘಟನೆ ಸದ್ದಿಲ್ಲದೇ ನಡೆಯುತ್ತಿದೆ. ಈಗಲೂ ಇದೇ ಒಂಭತ್ತು ಕಾರ್ಮಿಕರು ಮೇಲೆತ್ತುತ್ತಿರುವ ಇದೇ ಮನೆಯ ಮೇಲ್ಚಾವಣಿಯಲ್ಲಿ ಉಳಿದುಕೊಂಡಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ..?
ಆರಂಭದಲ್ಲಿ ಮನೆಯ ಸುತ್ತ ಅಂದರೆ ಪೌಂಡೇಷನ್ ಇರುವ ಜಾಗವನ್ನು ಅತ್ಯಂತ ವ್ಯವಸ್ಥಿತವಾಗಿ ಬಿಡಿಸಿಕೊಳ್ಳುವ ಈ ತಂತ್ರಜ್ಞರ ತಂಡ ನಂತರ ಸುತ್ತ ಹೋಲ್‌ಗಳ ಸಹಾಯದಿಂದ ಭೂಮಿ ಮತ್ತು ಮನೆಯ ಆಳದ ಲಿಂಟಲ್ ಭಾಗವನ್ನು ಬಿಡಿಸಿಕೊಳ್ಳುತ್ತಾರೆ. ಅದಕ್ಕೆ ಜಾಕ್ ಕೊಟ್ಟು ನಿಧಾನವಾಗಿ ಇದೇ ಜಾಕ್ ಆಧಾರದಲ್ಲಿ ನಿತ್ಯ ಮನೆ ಎತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ. ಹಾಗೆಯೇ ಭೂಮಿಯ ತಳಭಾಗದಿಂದ ಇರುವ ಪೌಂಡೇಷನ್ ಹಾಗೂ ಪಿಲ್ಲರ್‌ಗಳನ್ನು ಮೇಲೆತ್ತುತ್ತಾ ಕೂಡಿಸಿಕೊಳ್ಳುತ್ತಾರೆ. ಶಿವಮೊಗ್ಗದಲ್ಲಿ ಮನೆ ಎತ್ತುತ್ತಿರುವ ಈ ಕಾರ್ಯ ಅತ್ಯಂತ ವಿಶಿಷ್ಠ ಹಾಗೂ ವಿಸ್ಮಯ.


ಹಿಂದೆ ಕಟ್ಟಿದ್ದ ಮನೆಯ ಬಗ್ಗೆ ಇಟ್ಟುಕೊಂಡ ಪ್ರೀತಿಗೆ ಆ ಮನೆಯನ್ನು ಉಳಿಸಿಕೊಳ್ಳಲು ಶ್ರೀನಿವಾಸ್ ಮೂರ್ತಿ ಹಾಗೂ ಮಂಜುನಾಥ್ ಅವರ ಕಾರ್ಯ ಕುತೂಹಲಕಾರಿ ಹಾಗೂ ವಿಶೇಷ ವೆನಿಸುತ್ತದೆ.

Exit mobile version