Site icon TUNGATARANGA

ಮಂಡಗದ್ದೆ ಪಕ್ಷಿಗಳ ನಿನಾದದಿಂದ ದೂರವಾಯ್ತೇ….?

ವಲಸೆ ಹಕ್ಕಿಗಳಿಲ್ಲದೇ ಮಂಡಗದ್ದೆ ಪಕ್ಷಿಧಾಮ ಭಣ-ಭಣ.
ನಮ್ ಮಲೆನಾಡಿನ ಮಡಿಲು, ತುಂಗೆಯ ಒಡಲಾದ ಸಿಹಿಮೊಗೆಯ ಸುಂದರ ಸ್ಥಳಗಳಲ್ಲಿ ಒಂದಾದ ಮಂಡಗದ್ದೆ ಪಕ್ಷಿಧಾಮದಲ್ಲಿ ಬೆಳ್ಳಕ್ಕಿಗಳು ವಲಸೆ ಹಕ್ಕಿಗಳ ಕಲರವದಲ್ಲಿ ಕಂಗೊಳಿಸಬೇಕಿತ್ತು. ನಾಮಪಲಕವೊಂದಕ್ಕೆ ಸೀಮಿತವಾದ ಸುಂದರ ಪಕ್ಷಿಧಾಮ ಇನ್ಮುಂದೆ ಕನಸಷ್ಟೆ…!
ಶಿವಮೊಗ್ಗ ಮಂಡಗದ್ದೆ ಪಕ್ಷಿಧಾಮದಲ್ಲಿ ವಲಸೆ ಪಕ್ಷಿಗಳ ನೀನಾದ. ನಿಸರ್ಗದಲ್ಲಿ ಹಕ್ಕಿಗಳ ಮೋಹಕ ಸೌಂದರ್ಯ. ಮಳೆಗಾಲದ ನಡುವೆ ಬರುವ ವಲಸೆ ಹಕ್ಕಿಗಳ ಸೌಂದರ್ಯಕ್ಕೆ ಮನಸೋಲುವ ಪ್ರವಾಸಿಗರೇ ಇಲ್ಲ. ಆದ್ರೆ, ಇದೀಗ ಈ ಸೌಂದರ್ಯ ಕಣ್ಮರೆಯಾಗುತ್ತಿದೆ. ಮಂಡಗದ್ದೆಯಲ್ಲಿ ಸೂತಕದ ಛಾಯೇ ಆವರಿಸಿಕೊಂಡಿದೆ.
ಪಕ್ಷಿಗಳ ಸಂಖ್ಯೆ ಈಗ ಬೆರಳೆಣಿಕೆಗಿಂತ ಕಡಿಮೆ ಇದೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ…? ಇದ್ದ ಒಂದಿಷ್ಟು ಹೊಳೆಲಕ್ಕಿ ಮರಗಳು ಕಾಣೆಯಾಗುತ್ತಿವೆ. ಆ ಮರಗಳ ಸಂದಿಗಳಲ್ಲಿ ನಿರಂತರ ನಿನಾದ ಮೆರೆಯುತ್ತಿದ್ದ ಹಕ್ಕಿಗಳು ತಮ್ಮ ಸಂಸಾರ ವೃದ್ದಿಸಿಕೊಂಡು ಹೋಗುತ್ತಿದ್ದ ಮಲೆನಾಡ ಮಂಡಗದ್ದೆಯೆಂಬ ತವರೀಗ ಬಣಬಣ ಎನ್ನುತ್ತಿದೆ.


ಮಂಡಗದ್ದೆ ಎಂದ ಕೂಡಲೇ ತಟ್ಟನೆ ನೆನಪಾಗುವುದು, ಇಲ್ಲಿನ ಪಕ್ಷಿಧಾಮ. ಇದು ಶಿವಮೊಗ್ಗ ನಗರದಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿರುವ ಈ ಮಂಡಗದ್ದೆ ಪಕ್ಷಿಧಾಮದಲ್ಲಿ ಈ ಹಿಂದೆ, ಪ್ರತಿ ಮಳೆಗಾಲದಲ್ಲಿ ಯಥೇಚ್ಛವಾಗಿ ಬೆಳ್ಳಕ್ಕಿಗಳು ಹಾಗೂ ಇತರೆ ಹಕ್ಕಿಗಳು ಆಗಮಿಸಿ, ಕಲರವ ತುಂಬಿ ತುಳುಕುವಂತಹ ವಾತಾವರಣ ನಿರ್ಮಿಸುತ್ತಿದ್ದವು.
ಮಳೆಗಾಲದ ನಡುವೆಯೇ, ಬೆಳ್ಳಕ್ಕಿಗಳ ಕಲರವ, ಈ ಪಕ್ಷಿಧಾಮದಲ್ಲಿ ಆರಂಭವಾಗುತ್ತಿತ್ತು. ತುಂತುರು ಮಳೆಯಲ್ಲಿ ಬೆಳ್ಳಕ್ಕಿಗಳ ಪಡೆಯ ಮೋಹಕ ಹಾರಾಟ ನೋಡುಗರಿಗೆ ಖುಷಿ ನೀಡುತ್ತಿತ್ತು. ಮಲೆನಾಡಿನ ಮುಂಗಾರು ಮಳೆ, ಬಿದ್ದ ಕೂಡಲೇ ತುಂಗೆಯ ಮಡಿಲಲ್ಲಿ ಅರಳಿರುವ ಮರಗಳ ಮೇಲೆ ಬಾನಾಡಿಗಳ ಚಿಲಿಪಿಲಿ ಸದ್ದಿನ ಸುಂದರಲೋಕ ರೂಪುಗೊಳ್ಳುತ್ತಿತ್ತು. ಆದರೆ ಈಗ ಇವೆಲ್ಲವೂ ಮಾಯವಾಗಿದೆ. ಹಕ್ಕಿ-ಪಕ್ಷಿಗಳ ಸ್ವಚ್ಚಂದ ಹಾರಾಟ ಕಣ್ತುಂಬಿಕೊಳ್ಳುವ ಅವಕಾಶ ಇದೀಗ ಕಾಣೆಯಾಗಿದೆ. ವರ್ಷದ ಅತಿಥಿಗಳ ಆಗಮನದಿಂದಾಗಿ ಸಂತಸಗೊಳ್ಳುತ್ತಿದ್ದ ಪ್ರವಾಸಿಗರು, ಈಗ ನಿರಾಸೆಗೊಳ್ಳುವಂತಾಗಿದೆ. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಸೈಬಿರಿಯಾ ಸೇರಿದಂತೆ, ಎರಡು-ಮೂರು ದೇಶಗಳ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ತನ್ನ ಸೌಂದರ್ಯವನ್ನು ಈ ಮಂಡಗದ್ದೆ ಪಕ್ಷಿಧಾಮ ಕಳೆದುಕೊಂಡಿದೆ. ಗಾಜನೂರು ಡ್ಯಾಂ ಎತ್ತರ ಮಾಡಿರುವ ಹಿನ್ನೆಲೆಯಲ್ಲಿ, ಮಂಡಗದ್ದೆ ಭಾಗದಲ್ಲಿ ಹಿನ್ನೀರು ಹೆಚ್ಚಾಗಿ, ವಿದೇಶಿ ಪಕ್ಷಿಗಳಿಗೆ, ಸಂತಾನೋತ್ಪತ್ತಿಗೆ ಪ್ರಿಯವಾಗಿದ್ದ ಎಲ್ಲಾ ಮರಗಳು ಮಾಯವಾಗಿದ್ದು, ಇದೇ ವಿದೇಶಿ ಹಕ್ಕಿಗಳ ಮಾಯವಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ, ಇಲ್ಲಿನ ಸೊಬಗು ಕಳೆದುಕೊಂಡಿದ್ದು, ಪ್ರವಾಸಿಗರು ಬಂದರೆ ನಿಲ್ಲಲು ಸೂರಿಲ್ಲದಂತಾಗಿದೆ. ಶೌಚಾಲಯ ವ್ಯವಸ್ಥೆ ಸೇರಿದಂತೆ, ಮೂಲಭೂತ ಸೌಕರ್ಯವಿಲ್ಲದೇ, ಈ ಪ್ರವಾಸಿ ತಾಣ ಭಣಗುಡುವಂತಾಗಿದೆ. ಪಕ್ಷಿಧಾಮವೆಂದ ಕೂಡಲೇ, ದೇಶ-ವಿದೇಶಗಳಿಂದ ಛಾಯಾಗ್ರಹಣಕ್ಕಾಗಿಯೇ ಅಗಮಿಸುತ್ತಿದ್ದ ಛಾಯಗ್ರಾಹಕರು ಇತ್ತ ತಲೆ ಹಾಕುತ್ತಿಲ್ಲ.
ಒಂದುಕಾಲದಲ್ಲಿ ಮಂಡಗದ್ದೆ ಪಕ್ಷಿಧಾಮವೆಂದರೆ, ಬೆಳ್ಳಕ್ಕಿಗಳ ಚಿಲಿಪಿಲಿ ಸದ್ದು ನೋಡುಗರನ್ನು ಮನಮೋಹಕಗೊಳಿಸುತ್ತಿತ್ತು. ಪಕ್ಷಿಗಳ ಪಾಲಿಗೆ ಸ್ವರ್ಗವಾಗಿದ್ದ ಪಕ್ಷಿಧಾಮದಲ್ಲಿ ಇಂದು ಕೇವಲ ಬೆರಳೆಣಿಕೆಯಷ್ಟು ಪಕ್ಷಿಗಳು ಮಾತ್ರ, ಕಾಣುವಂತಾಗಿದೆ. ಸೈಬಿರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ನಿಂದ ಇಲ್ಲಿಗೆ ಪಕ್ಷಿಗಳು ಕೇವಲ ಸಂತಾನೋತ್ಪತ್ತಿಗಾಗಿ ಆಗಮಿಸುತ್ತಿದ್ದವು. ಇದರ ಚಲನವಲನಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕರು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಜುಳು ಜುಳು ಹರಿಯುವ ನೀರಿನ ಮಧ್ಯದಲ್ಲಿ ಹಕ್ಕಿಗಳ ಕಲರವ ಕೈ ಬೀಸಿ ಕರೆಯುತ್ತಿತ್ತು. ಪಕ್ಷಿಗಳ ಪಾಲಿಗೆ ಸ್ವರ್ಗವಾಗಿದ್ದ ಅಂದ ಇಂದು ಸಂಪೂರ್ಣವಾಗಿ ಮಾಯವಾಗಿದೆ. ಪ್ರತಿವರ್ಷ ಏನಿಲ್ಲಾ ಅಂದರೂ ಜೂನ್ ಎರಡನೇ ಆಥವಾ ಮೂರನೇ ವಾರದಲ್ಲಿ ಹಕ್ಕಿಗಳು ಮಂಡಗದ್ದೆ ಪಕ್ಷಿಧಾಮಕ್ಕೆ ವಲಸೆ ಬರುತ್ತಿದ್ದವು. ದೇಶಿ ಹಕ್ಕಿಗಳ ಜೊತೆಗೆ ಇದೀಗ ವಿದೇಶಿ ಹಕ್ಕಿಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು, ಪ್ರೇಮಿಗಳು ಮತ್ತು ವಿದ್ಯಾರ್ಥಿಗಳು, ಹಾತೊರೆಯುತ್ತಿದ್ದರು. ತುಂಗಾ ನದಿಯ ಹಿನ್ನೀರು ಹೆಚ್ಚಾಗುವ ಆತಂಕ ಕಾಡಲಾರಂಭಿಸಿದ್ದು, ಈ ಕಾರಣದಿಂದ ಮುಳುಗಡೆ ಗ್ರಾಮ ಎಂದೇ ಕರೆಸಿಕೊಳ್ಳುತ್ತಿದ್ದ ಮಂಡಗದ್ದೆ ಗ್ರಾಮವನ್ನೇ ಇಂದು ಖಾಲಿ ಮಾಡಿಸಲಾಗಿದೆ. ಇಲ್ಲಿನ ಜನರು ಗ್ರಾಮವನ್ನು ತೊರೆದು ಹೋದ ನಂತರ, ಈ ಪಕ್ಷಿಧಾಮ ಕಳೆಗುಂದಿದೆ. ದೇಶಿ ಜೊತೆಗೆ ವಿದೇಶಿ ಹಕ್ಕಿಗಳು ಕಾಣೆಯಾಗಿ, ಈ ಪಕ್ಷಿಧಾಮ ಸಂಪೂರ್ಣವಾಗಿ ಕಳೆಗುಂದಿದೆ.
ಒಟ್ಟಿನಲ್ಲಿ, ಕಳೆದೆರೆಡು ವರ್ಷಗಳ ಹಿಂದೆ ಇಲ್ಲಿನ ಗ್ರಾಮಸ್ಥರ ಜೊತೆಗೆ ಹಕ್ಕಿಗಳ ಕಲರವ ಕಣ್ಮರೆಯಾಗಿದ್ದು, ಗುಂಪು-ಗುಂಪಾಗಿ ಕೂರುವ ಬೆಳ್ಳಕ್ಕಿಗಳ ಸಾಲಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಹಕ್ಕಿಗಳು ಮಾತ್ರ ಕಾಣಸಿಗುತ್ತಿವೆ. ಇದು ಪ್ರವಾಸಿಗರಲ್ಲಿ ಮತ್ತು ಛಾಯಾಗ್ರಾಹಕರಲ್ಲಿ ತೀವ್ರ ಬೇಸರ ತರುವಂತಾಗಿದೆ. ಪ್ರವಾಸದ್ಯೋಮದ ಹೆಸರನಲ್ಲಿ ಸರ್ಕಾರಗಳು, ಇಲ್ಲದೇ ಇರುವ ಯೋಜನೆಗಳನ್ನು ಅನುಷ್ಟಾನಗೊಳಿಸುವ ಬದಲು ಇರುವಂತಹ ತಾಣಗಳನ್ನೇ ಅಭಿವೃದ್ಧಿಪಡಿಸಿದರೆ, ಇಂತಹ ಸ್ಥಳಗಳು ಮತ್ತು ಇವುಗಳ ಇತಿಹಾಸವು ಉಳಿಯಲಿದೆ.
ಶಿವಮೊಗ್ಗ ಪ್ರವಾಸೋದ್ಯಮ ಇಲಾಖೆಗೆ ಇಲ್ಲಿನ ಕರ್ಮಕಾಂಡ ಗೊತ್ತಾದಂತಿಲ್ಲ. ಕನಿಷ್ಟ ಸೌಕರ್ಯ ಕಲ್ಪಿಸಲಾಗದ ಈ ವ್ಯವಸ್ಥೆ ಬಗ್ಗೆ ನಾಚಿಕೆಯೆನಿಸುತ್ತೆ. ಮಂಡಗದ್ದೆ ಪಕ್ಷಿಧಾಮ ಎಂಬ ಬೋರ್ಡ್ ಹಾಕಿರುವುದನ್ನೇ ಕಾಯಕ ಎಂದುಕೊಂಡಿರುವ ಇಲಾಖೆ ಅಲ್ಲಿನ ಟವರ್ ಅವ್ಯವಸ್ಥೆ, ಪುಡಾರಿಗಳ ತಿರುಗಾಟ, ಅನೈತಿಕ ಚಟುವಟಿಕೆಗಳು ಹಾಗೂ ಕುಡಿತದ ಅಡ್ಡೆ ಮಾಡಿಕೊಂಡಿರುವುದಕ್ಕೆ ಬ್ರೇಕ್ ಹಾಕಬೇಕಿದೆ. ಜೊತೆಗೆ, ಕಾವಲುಗಾರರನ್ನ ನೇಮಿಸಿ ಪ್ರವಾಸಿಗರನ್ನ ಆಕರ್ಷಿಸುವ ಕೆಲಸ ಮಾಡಬೇಕಿದೆ.
ಎಸ್.ಕೆ. ಗಜೇಂದ್ರ ಸ್ವಾಮಿ
(ಸ್ಪೂರ್ತಿ: ಗೋವಾ ಮೋಹನ್, ಶಿವಮೊಗ್ಗ ನಾಗರಾಜ್)

Exit mobile version