Site icon TUNGATARANGA

ಹೊಳೆಹೊನ್ನೂರು ಸಬ್ ಇನ್ಸ್‌ಪೆಕ್ಟರ್, ಪಿಸಿ ಸಸ್ಪೆಂಡ್!

ಶಿವಮೊಗ್ಗ, ಜು25: ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನ ಹತ್ತಿಕ್ಕಲಾಗದ ಆಪಾದನೆ ಮೇರೆಗೆ ಪಿಎಸ್ಐ ಸುರೇಶ್ ಹಾಗೂ ಠಾಣೆಯ ಗುಪ್ತವಾರ್ತ ವಿಭಾಗದ ಪಿ.ಸಿ.ಪ್ರಕಾಶ್ ರವರನ್ನ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಇಂದು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕಳೆದ ಜು.23 ರಂದು ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಐಬಿ ವಿಭಾಗದ ನಿರೀಕ್ಷಕ ಕುಮಾರ ಸ್ವಾಮಿ ಅವರ ನೇತೃತ್ವದ ತಂಡ ಹೊಳೆಹೊನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಟ್ಕಾ, ಜೂಜಾಟ ನಡೆಯುತ್ತಿರುವ ಜಾಗದ ಮೇಲೆ ದಾಳಿ ನಡೆಸಿತ್ತು. ಖಚಿತ ಮಾಹಿತಿ ಪಡೆದು ದಾಳಿ ನಡೆಸಿ 36070 ರೂ.ಗಳ ದೊಡ್ಡಪ್ರಮಾಣದಲ್ಲಿ ಹಣವನ್ನ ವಶಪಡಿಸಿಕೊಂಡು ಆರೋಪಿ ತಿಪ್ಪೇಶ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಪಿಎಸ್ಐ ಸುರೇಶ್ ರವರು ಮತ್ತು ಗುಪ್ತವಾರ್ತ ವಿಭಾಗದ ಪ್ರಕಾಶ್ ರವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಜೂಜು ಮತ್ತು ಮಟ್ಕಾದಂತಹ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ, ಪ್ರಕರಣ ದಾಖಲಿಸುವಲ್ಲಿ ಹಾಗೂ ನಿಖರ ದಾಳಿ ನಡೆಸುವಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ಜಿಲ್ಲಾರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಈ ಕ್ರಮವನ್ನ ಜರುಗಿಸಿರುವುದಾಗಿ ತಿಳಿದುಬಂದಿದೆ.
ಪಿಎಸ್ಐ ಸುರೇಶ್ ಹಾಗೂ ಪೊಲೀಸ್ ಪ್ರಕಾಶ್ ನಾಯ್ಕ್ ರವರ ವಿರುದ್ಧ ಖಡಕ್ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು  ಶಿಸ್ತು ಬಾಕಿ ಇರಿಸಿ ಅಮಾನತು ಗೊಳಿಸಿದ್ದಾರೆ.

Exit mobile version