Site icon TUNGATARANGA

ನಾಳೆ ಭದ್ರಾ ಎಡದಂಡೆ ಮತ್ತು ನಾಡಿದ್ದು ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ.,

ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತೀರ್ಮಾನ

ಶಿವಮೊಗ್ಗ, ಡಿ.28;
ಪ್ರಸಕ್ತ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗಾಗಿ ಡಿ.29 ರ ನಾಳೆ ಭದ್ರಾ ಎಡದಂಡೆ ಮತ್ತು ಡಿ.30 ರ ನಾಡಿದ್ದು ಬಲದಂಡೆ ನಾಲೆಗಳಿಗೆ 120 ದಿನಗಳ ಕಾಲ ನೀರು ಹರಿಸಲು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನ ಕೈಗೊಂಡಿದೆ ಎಂದು ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ತಿಳಿಸಿದರು.


ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ 2021-22 ನೇ ಸಾಲಿನ ಬೇಸಿಗೆ ಬೆಳೆಗಳಿಗಾಗಿ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ನೀರನ್ನು ಹರಿಸುವ ಮತ್ತು ಬೆಳೆ ಕ್ಷೇತ್ರವನ್ನು ಪ್ರಕಟಿಸುವ ಕುರಿತು ತೀರ್ಮಾನ ಕೈಗೊಳ್ಳಲು ಭದ್ರಾ ಕಾಡಾ, ಶಿವಮೊಗ್ಗ ಇವರ ಅಧ್ಯಕ್ಷತೆಯಲ್ಲಿ ಇಂದು ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ ಕಚೇರಿ ಸಭಾಂಗಣ, ಮಲವಗೊಪ್ಪ, ಶಿವಮೊಗ್ಗ ಇಲ್ಲಿ ನಡೆದ 79ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ನೀರಾವರಿ ಸಲಹಾ ಸಮಿತಿಯ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಡಿ.29 ರ ರಾತ್ರಿಯಿಂದ ಎಡದಂಡೆ ನಾಲೆ ಮತ್ತು ಡಿ.30 ರ ರಾತ್ರಿಯಿಂದ ಬಲದಂಡೆ ನಾಲೆಗಳಿಗೆ 120 ದಿನಗಳ ಕಾಲ ನೀರು ಹರಿಸಲಾಗುವುದು. ಅಚ್ಚುಕಟ್ಟು ಪ್ರದೇಶದ ಯಾವುದೇ ನಾಲೆಗಳ ಭಾಗದ ರೈತರಿಗೆ ತೊಂದರೆಯಾಗದಂತೆ ನೀರು ಹರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.


ದಾವಣಗೆರೆ, ಮಲೆಬೆನ್ನೂರು ಶಾಖಾ ನಾಲೆಗಳಿಗೆ ಸ್ವಲ್ಪ ತಡವಾಗಿ ಅಂದರೆ ಡಿಸೆಂಬರ್ 06 ಅಥವಾ 07 ಕ್ಕೆ ನೀರು ಹರಿಸುವಂತೆ ಅಧಿಕಾರಿಗಳು ಕೇಳಿಕೊಂಡಿರುವ ಹಿನ್ನೆಲೆ ಅಭಿಯಂತರರು ಅಲ್ಲಿ ಮರಳಿನ ತಡೆ ಒಡ್ಡಿ ನೀರು ಹರಿಸುವಂತೆ ಸೂಚನೆ ನೀಡಿದ್ದೇನೆ. ಭದ್ರಾ ಜಲಾಶಯದಲ್ಲಿ ಡಿ.28 ರಂದು 57.703 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಬೇಸಿಗೆ ಅವಧಿಗೆ 51.97 ಟಿಎಂಸಿ ನೀರು ಅವಶ್ಯವಿದ್ದು, 5.733 ಟಿಎಂಸಿ ನೀರು ಜಲಾಶಯದಲ್ಲಿ ಉಳಿಯಲಿದೆ ಎಂದರು.


ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶದ ರೈತರಿಗೆ ಪೂರಕವಾಗಿ ಸ್ಪಂದಿಸಬೇಕು. ರೈತರಿಗೆ ಬೆಲೆ ಕೊಡಬೇಕು. ರೈತರು ಹಾಗೂ ತಮ್ಮ ದೂರವಾಣಿ ಕರೆಗಳಿಗೆ ಸೂಕ್ತವಾಗಿ ಉತ್ತರಿಸಬೇಕು. ಅಧಿಕಾರಿಗಳ ಕೆಲಸವನ್ನು ನಾನು ಮಾಡಿದ್ದೇನೆ. ನರೇಗಾ ಯೋಜನೆಯಡಿ ಚಾನಲ್‍ಗಳಲ್ಲಿ ಹೂಳು ತೆಗೆಸಿದ್ದೇನೆ. ಇನ್ನು ಮುಂದೆ ಚಾನಲ್‍ಗಳ ಮೇಲೆ ಇಂಜಿನಿಯರುಗಳು ಓಡಾಡಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.


ರೈತ ಮುಖಂಡರಾದ ಬಸವರಾಜಪ್ಪ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶ ವಿಭಿನ್ನ ಹವಾಮಾನ ಮತ್ತು ಮಣ್ಣಿನ ಗುಣ ಹೊಂದಿದೆ. ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ನೀರು ಹರಿಸುವುದು ಮತ್ತು ಬಂದ್ ಮಾಡುವುದು ಕಷ್ಟ. ಏಕೆಂದರೆ ಭದ್ರಾವತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲುಭೂಮಿ, ಕೆಂಪುಮಿಶ್ರತ ಮಣ್ಣಿನಲ್ಲಿ ಅಡಿಕೆ ಇತ್ಯಾದಿ ಬೆಳೆಯಲಾಗುತ್ತಿದ್ದು ಈ ಮಣ್ಣು 20 ರಿಂದ 25 ದಿನಕ್ಕೆ ಮಾತ್ರ ನೀರನ್ನು ಹಿಡಿದಿಡಲು ಸಾಧ್ಯ. ಅದೇ ದಾವಣಗೆರೆ, ಮಲೆಬೆನ್ನೂರು, ಹರಿಹರ ಭಾಗದಲ್ಲಿ ಎರೆಮಣ್ಣಿದ್ದು ಒಂದು ತಿಂಗಳವರೆಗೆ ನೀರನ್ನು ತಡೆದಿಡುವ ಸಾಮಥ್ರ್ಯ ಅಲ್ಲಿನ ಮಣ್ಣಿಗೆ ಇರುತ್ತದೆ. ಆದ್ದರಿಂದ ಆ ಭಾಗಕ್ಕೆ ಸ್ವಲ್ವ ತಡವಾಗಿ ನೀರು ಹರಿಸಬೇಕೆಂದು ಸದಸ್ಯರು ಕೇಳಿದ್ದಾರೆ.


ಸರ್ವ ಸದಸ್ಯರ ಚರ್ಚೆ ನಂತರ ಎಲ್ಲರಿಗೂ ಅನುಕೂಲ ಆಗುವ ರೀತಿಯಲ್ಲಿ ಇಂದು ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ವಿದ್ಯುತ್ ಎಲ್‍ಸಿ ವ್ಯವಸ್ಥೆಯಂತೆ ನೀರು ಬಿಡಲು ಕೂಡ ಒಂದೆರಡು ಮೂರು ಗೇಟ್ ವ್ಯವಸ್ಥೆ ಮಾಡಿಕೊಂಡರೆ, ಬೇಡವಾದ ಭಾಗಕ್ಕೆ ಗೇಟ್ ಹಾಕಿ, ಬೇಕಾದ ಕಡೆ ಗೇಟ್ ಓಪನ್ ಮಾಡಿ ನೀರು ಹರಿಸಬಹುದು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಸಂಬಂಧಿಸಿದ ಇಂಜಿನಿಯರುಗಳು ಅಂದಾಜು ಪಟ್ಟಿ ತಯಾರಿಸುವಂತೆ ತಿಳಿಸಿದ ಅವರು ಶಾಸಕರು, ಸಂಸದರು ಮತ್ತು ಅಧ್ಯಕ್ಷರು ಇದನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದರು.

ತೀರ್ಮಾನಕ್ಕೂ ಮುನ್ನ ಶಾಸಕರಾದ ಸಂಗಮೇಶ್ವರ್ ಮಾತನಾಡಿ, ಈ ಬಾರಿ ಒಳ್ಳೆಯ ಮಳೆಯಾಗಿ, ಡ್ಯಾಮ್‍ನಲ್ಲಿ ಸಾಕಷ್ಟು ನೀರಿದ್ದರೂ, ಇದುವರೆಗೆ ನಾಲೆಗಳಿಗೆ ನೀರು ಹರಿಸದೇ ಇರುವುದರಿಂದ ವಿಶೇಷವಾಗಿ ಎಡೆದಂಡೆ ಭಾಗದ ರೈತರಿಗೆ ಹಾಗೂ ಜಾನುವಾರುಗಳಿಗೆ ನೀರಿಲ್ಲದೇ ತುಂಬಾ ತೊಂದರೆಯಾಗಿದೆ. ಇಂಜಿನಿಯರುಗಳು ನೀರು ಬಂದ್ ಮಾಡಿ ಇಷ್ಟು ದಿನ ಆದರೂ ಕಾಮಗಾರಿ ಸಬೂಬು ಹೇಳಿ ನೀರು ಹರಿಸುವುದಕ್ಕೆ ಅಡ್ಡಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಿಪಡಿಸಿದ ಅವರು, ಅಧ್ಯಕ್ಷರು ದೃಢವಾದ ನಿರ್ಧಾರ ಮಾಡಿ ನಾಳೆಯಿಂದಲೇ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದರು.
ಪ್ರಾಧಿಕಾರದ ನಿರ್ದೇಶಕರಾದ ಷಡಕ್ಷರಪ್ಪ ಮಾತನಾಡಿ, ಎಡದಂಡೆ ನಾಲೆ ರೈತರಿಗೆ, ಜಾನುವಾರುಗಳಿಗೆ ನರಿಲ್ಲದೇ ತುಂಬಾ ತೊಂದರೆಯಾಗಿದೆ ಆದ್ದರಿಂದ ಎಡದಂಡೆ ನಾಲೆಗೆ ಇಂದಿನಿಂದಲೇ ಹಾಗೂ ಬಲದಂಡೆ ನಾಲೆ ಡಿ.30 ರಿಂದ ನೀರು ಬಿಡಬೇಕು. ಸರ್ಕಾರ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಚಾನಲ್‍ಗಳಲ್ಲಿ ರಿಪೇರಿ ಕಾಮಗಾರಿಗಳು ಆಗಿಲ್ಲವೆಂದು ಅಧಿಕಾರಿಗಳು ಸರ್ಕಾರವನ್ನು ದೂರುವುದು ಸರಿಯಲ್ಲ ಎಂದರು.
ಎಡದಂತೆ ನಾಲೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ರಘುನಾಥ್ ಜೆ ಮಾತನಾಡಿ, ಪ್ರತಿ ಸಲ ನೀರು ಬಂದ್ ಮಾಡಿದಾಗ ಗೊಂದಲ ಸೃಷ್ಟಿಯಾಗುತ್ತಿದೆ. ನೀರು ನಿಲ್ಲಿಸಿದ 25 ದಿನಗಳಿಗೆ ಅಧ್ಯಕ್ಷರು ಒಂದು ಸಭೆ ಕರೆದು ನಿರ್ಧಾರ ಕೈಗೊಳ್ಳಬೇಕು. ಎಡದಂಡೆ ಭಾಗದ ಮರಳು ಮಿಶ್ರಿತ ಮಣ್ಣಿನಲ್ಲಿ ನೀರನ ತೇವ ತಡೆದಿಡುವ ಶಕ್ತಿ ಇಲ್ಲವಾದ್ದರಿಂದ ಇಂದೇ ನೀರು ಬಿಡಬೇಕು. ಇಲ್ಲವಾದಲ್ಲಿ ಧರಣಿ ಮಾಡಲಾಗುವುದು ಎಂದರು.


ಎಡದಂಡೆ ನಾಲೆ ಭಾಗದ ಸದಸ್ಯರಾದ ವೈ.ಜಿ ಮಲ್ಲಿಕಾರ್ಜುನ ಮಾತನಾಡಿ, ನೀರು ನಿಲ್ಲಿಸಿ 40 ದಿನ ಆದರೂ ನೀರು ಹರಿಸದಿರುವುದು ವಿಪರ್ಯಾಸ. ಅವೈಜ್ಞಾನಿವಕಾಗಿ ಹೀಗೆ ನೀರು ನಿಲ್ಲಿಸಿದರೆ ಬೆಳೆ ಹಾಳಾಗುತ್ತದೆ ಎಂದರು.
ಎಡದಂಡೆ ನಾಲೆ ಭಾಗದ ಸದಸ್ಯರು ಯಶವಂತರಾವ್, ರಾಮಪ್ಪ, ಹನುಮಂತಪ್ಪ, ಶೇಖರಪ್ಪ ಹಾಗೂ ಇತರೆ ರೈತರು ಇಂದು ರಾತ್ರಿಯೇ ನೀರು ಹರಿಸುವಂತೆ ಒತ್ತಾಯಿಸಿದರು.
ದಾವಣಗೆರೆ ಮತ್ತು ಮಲೆಬೆನ್ನೂರು ನಾಲಾಭಾಗದ ಸದಸ್ಯರಾದ ತೇಜಸ್ವಿ ಪಟೇಲ್ ಮತ್ತು ಇತರರು ಮಾತನಾಡಿ, ನಮಗೆ ಜ.5 ರ ಹೊತ್ತಿಗೆ ನೀರು ಬಿಡಬಹುದು. ಸಲಹಾ ಸಮಿತಿ ಸಂಪ್ರದಾಯದಂತೆ ಅಧಿಸೂಚನೆ ಹೊರಡಿಸಿ ನೀರು ಬಿಡಬೇಕು. ಡಿ.30 ಕ್ಕೆ ನೀರು ಹರಿಸಲು ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಮರಳಿನ ತಡೆ ಒಡ್ಡು ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು.


ಶಾಸಕರು, ರೈತ ಸಂಘದ ಮುಖಂಡರು, ರೈತರು ಮಾತನಾಡಿ, ಇಂಜಿನಿಯರುಗಳು ಜ.10 ರ ನಂತರ ನೀರು ಹರಿಸುವಂತೆ ತಿಳಿಸಿದ್ದು, ಅವರಿಗೆ ರೈತರ ಸಂಕಷ್ಟಗಳ ಬಗ್ಗೆ ಅರಿವಿಲ್ಲ. ತಾವು ಕೈಗೊಳ್ಳಬೇಕಾದ ಕಾಮಗಾರಿ, ರಿಪೇರಿಗಳನ್ನು ನಿಗದಿತ ವೇಳೆಗೆ ಕೈಗೊಳ್ಳದೇ ನೀರು ಹರಿಸುವುದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಸವರಾಜಪ್ಪ ಮಾತನಾಡಿ, ಭದ್ರಾ ಅಚ್ಚುಕಟ್ಟಿನ ಸದಸ್ಯರಲ್ಲಿ ಭಿನ್ನತೆ ಬೇಡ. ಭದ್ರಾ ಅಚ್ಚುಕಟ್ಟುದಾರರೆಲ್ಲ ಒಂದು. ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಮಾರ್ಚ್‍ವರೆಗೆ ನೀರು ಹರಿಸುವ ತೀರ್ಮಾನ ಕೈಗೊಂಡಿದ್ದಾರೆ. ಬೇಸಿಗೆಯಲ್ಲಿ ತುಂಗಾ ಮೇಲ್ದಂಡೆ ಮತ್ತು ನಮ್ಮ ನಡುವೆ ಹೋರಾಟ ಮಾಡಬಹುದಾದ ಸಂದರ್ಭ ಕೂಡ ಬರಬಹುದು. ಆದ್ದರಿಂದ ತುಂಗಾ ಮೇಲ್ದಂಡೆ ಯೋಜನೆಗೆ ತುಂಗಾದಿಂದ 17.5 ಟಿಎಂಸಿ ಮತ್ತು ಭದ್ರಾ ಅಣೆಕಟ್ಟಿನಿಂದ 12.4 ಟಿಎಂಸಿ ಒದಗಿಸುವ ಬದಲಾಗಿ ಸಂಪೂರ್ಣ 29.9 ಟಿಎಂಸಿ ನೀರನ್ನು ತುಂಗಾದಿಂದಲೇ ತುಂಗಾ ಮೇಲ್ದಂಡೆ ಯೋಜನೆಗೆ ನೀಡಲು ಡಿಪಿಆರ್ ಆಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯ ಇಂದು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಅಧೀಕ್ಷಕ ಇಂಜಿನಿಯರ್ ಚಂದ್ರಹಾಸ್ ಮಾತನಾಡಿ, 2021-22 ನೇ ಸಾಲಿನ ಬೇಸಿಗೆ ಬೆಳೆಗಳಿಗಾಗಿ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ನೀರು ಸಮರ್ಪಕವಾಗಿ ಹರಿಯುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕಾಡಾ ನಿರ್ದೇಶಕರಾದ ರುದ್ರಮೂರ್ತಿ, ವಿನಾಯಕ್, ಹನುಮಂತಪ್ಪ, ಸದಾಶಿವಪ್ಪ ಗೌಡ್ರು, ರಾಜಪ್ಪ, ಇತರೆ ನಾಲೆಗಳ ಸದಸ್ಯರಾದ ದ್ಯಾಮಪ್ಪ ಗೌಡ್ರು, ದೇವಪ್ಪ ರೆಡ್ಡಿ, ಡಾಣಾಯಕಪುರದ ಪರಮೇಶಗೌಡ್ರು, ಆಡಳಿತಾಧಿಕಾರಿ ಅರುಣ್(ಪ್ರಭಾರ), ಭದ್ರಾ ಯೋಜನಾ ವೃತ್ತದ ಎಇಇಗಳಾದ ರವಿಚಂದ್ರ, ಪ್ರಸನ್ನ, ವೆಂಕಟೇಶ್, ಇತರೆ ಸದಸ್ಯರು, ಅಧಿಕಾರಿಗಳು, ರೈತರು ಹಾಜರಿದ್ದರು.
(

Exit mobile version