ಒಂದು ಬದುಕನ್ನ, ಬದುಕಿನೊಳಗೆ ಕಳೆದು ಹೋಗುವ ಸಾವನ್ನ ಬರಹದ ರೂಪದಲ್ಲಿ ಬಿಚ್ಚಿಡುವುದು ಸುಲಭವೇನಲ್ಲ. ಮನದ ದುಂಖ ಒಂದೆಡೆಯಾದರೆ, ಬದುಕಲ್ಲಿ ಕಂಡ ವಾಸ್ತವಗಳ ನಡುವಿನ ಪ್ರೀತಿ, ವಿಶ್ವಾಸ, ಆತ್ಮೀಯತೆಗೆ ಇದು ತೀರ್ಥ ಸ್ವರೂಪವೆಂದರೂ ತಪ್ಪಾಗಲಿಕ್ಕಿಲ್ಲ.
ಈ ಪೀಠಿಕೆಗೆ ಕಾರಣ ಇಂದು ಮದ್ಯಾಹ್ನ ಕೇಳಿಬಂದ ಶಾಕಿಂಗ್ ನ್ಯೂಸ್. “ಹಿಂದೆ ನಮ್ ಬಿಇಓ ಆಗಿದ್ರಲ್ಲ ಕಮಲಾಕರ್ ಸರ್ ಹೋಗ್ಬಿಟ್ರಂತೆ” ಎಂದು ನನಗೆ ಶಿಕ್ಷಕ ಮಿತ್ರ ಹೇಳಿದಾಗ ನಿಜಕ್ಕೂ ಅಚ್ಚರಿ ಜೊತೆ ಸುಳ್ಳು ಸುದ್ದಿ ಇರಬೇಕೆಂಬ ದ್ವನಿ ಅಷ್ಟೆ ನನ್ನಿಂದ ಬಂದದ್ದು….,
ಶಿವಮೊಗ್ಗದಲ್ಲಿ 2000ನೇ ಸಾಲಿನಲ್ಲಿ ಪತ್ರಿಕಾ ವೃತ್ತಿಯಲ್ಲಿರುವವರಿಗೆ ಚಿರಪರಿಚಿತರು ಎಂದೇ ಹೇಳಬಹುದಾದ ಅಂದಿನ ಬಿಇಓ ಶಿವಮೊಗ್ಗದಲ್ಲಿ ಸುಮಾರು ಆರು ವರುಷಗಳ ಕಾಲ ಜನಾನುರಾಗಿ ಅಧಿಕಾರಿ ಎನಿಸಿಕೊಂಡಂತಹವರು.
ಚೌಹಾಣ್, ಗಂಗಪ್ಪಗೌಡ, ದೇವಪ್ರಕಾಶ್ ಅಂತಹ ಅಧಿಕಾರಿಗಳ ಕೆಳಗೆ ತಾಲ್ಲೂಕಿನ ಶಿಕ್ಷಣದ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದಲ್ಲದೇ ಶಿವಮೊಗ್ಗದ ಹಲವು ಸಾಮಾಜಿಕ ಜವಾಬ್ಧಾರಿಗಳಲ್ಲೂ ಗುರುತಿಸಿಕೊಂಡಿದ್ದವರು.
ಶಿವಮೊಗ್ಗ ಪದವೀದರರ ಸಹಕಾರ ಸಂಘದಲ್ಲಿಯೂ ಸೇವೆ ಸಲ್ಲಿಸಿದ್ದ ಕಮಲಾಕರ್ ಸರ್, ನನಗೆ ಅಲ್ಲಿ ನೀಡಿದ್ದ ಸಾಲಕ್ಕೆ ಜಾಮೀನು ಹಾಕಿದ್ದರು.
ಕಮಲಾಕರ್ ಬಗ್ಗೆ ಹೇಳುವುದು ಸಾಕಷ್ಟಿದೆ. ಬೆಂಗಳೂರಿನ ರಾಜದಾನಿಯಲ್ಲಿದ್ದರೂ ಈಗಲೂ ಅದೇ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದ ಕಮಲಾಕರ್ ಇನ್ನಿಲ್ಲ ಎಂದರೆ ಹೇಗೆ ನಂಬುವುದು…?
ಸರಳತೆ ಹಾಗೂ ಸಜ್ಜನಿಕೆಗೆ ಕಮಲಾಕರ್ ಹೇಳಿ ಮಾಡಿಸಿಟ್ಟ ವ್ಯಕ್ತಿ. ಅಧಿಕಾರಿಯೆಂಬ ದರ್ಪ ತೋರಿಸಿದ್ದ ಕ್ಷಣಗಳ ಯಾವ ನಿದರ್ಶನಗಳೂ ಸಿಕ್ಕಲಿಕ್ಕಿಲ್ಲ. ಅಂದಿನ ಶಾಸಕರು ಹಾಗೂ ಈಗಿನ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಅಧಿಕಾರಿಯಾಗಿದ್ದರೂ ಸಹ ಕಮಲಾಕರ್ ಅದನ್ಬ ದುರ್ಭಳಕೆ ಮಾಡಿಕೊಳ್ಳಲಿಲ್ಲ. ಶೆಟಲ್ ಆಡುವಾಗ ಈಶ್ವರಪ್ಪ ಅವರಂತೆ ಮಗುವಾಗುತ್ತಿದ್ದ ಕಮಲಾಕರ್ ಅವರಿಗೆ ಹೃದಯ ಕಾಡಿತೇ…?
ಬಂದ ಮಾಹಿತಿ ಇಂತಿದೆ…:
ವಿಷಾದದ ಸುದ್ದಿ
ಇಂದು ನಮ್ಮ ಶಿವಮೊಗ್ಗ ತಾಲ್ಲೂಕಿನಲ್ಲಿ ಬಿಇಒ ಆಗಿ ಕರ್ತವ್ಯ ನಿರ್ವಹಿಸಿ ಎಲ್ಲಾ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದ ಹಾಗೂ ಹಾಲಿ ಬೆಂಗಳೂರಿನಲ್ಲಿ ಬಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಮಲಾಕರ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ
ಆತ್ಮೀಯ ಸಹೋದರ ಭಾವದಲ್ಲಿ ನನ್ನ ಗುರುತಿಸಿದ್ದ ಪ್ರೀತಿಯ ಕಮಲಾಕರ್ ಸರ್ ಅವರ ಆತ್ಮಕ್ಕದ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ. ಓಂ ಶಾಂತಿ
ಗಜೇಂದ್ರ ಸ್ವಾಮಿ, ತುಂಗಾತರಂಗ