ಶಿವಮೊಗ್ಗ: ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸುವುದಾಗಿ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ತಿಳಿಸಿದ್ದಾರೆ.
ಚನ್ನಬಸಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಕರ್ನಾಟಕದ ಹೆಮ್ಮೆ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಗಡಿಪಾರು ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಇದೊಂದು ಹಾಸ್ಯಾಸ್ಪದ ಹೇಳಿಕೆಯಾಗಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಚನ್ನಬಸಪ್ಪ ಆಗಾಗ ಇಂತಹ ಮಾತುಗಳನ್ನು ಹೇಳುತ್ತಾರೆ ಎಂದು ಟೀಕಿಸಿದರು.
ಕೇವಲ ರಾಜಕಾರಣಕ್ಕಾಗಿ, ಓಲೈಕೆಗಾಗಿ ಗೋಹತ್ಯೆ ಮತ್ತು ಹಿಂದುತ್ವ ಪದಗಳನ್ನು ಬಳಸಿಕೊಳ್ಳುವ ಈ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತೀಯರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದ್ದಾರೆ. ಈ ನಾಡಿನಲ್ಲಿ ಬೇಕಾದಷ್ಟು ಸಮಸ್ಯೆಗಳು ಇರುವಾಗ ಇಂತಹ ವಿಷಯಗಳನ್ನು ಂಧ್ಯ ತರುತ್ತಾರೆ. ಅಭಿವೃದ್ಧಿಯ ಯೋಚನೆ ಬಿಟ್ಟು ರಾಜಕಾರಣಕ್ಕಾಗಿ ಹಿಂದೂಗಳ ಪರವಾಗಿ ನಾವಿದ್ದೇವೆ ಎನ್ನುವುದು ಬಾಲಿಶವಾಗಿದೆ ಎಂದು ಅವರು ದೂರಿದರು.
ಮಹಾನಗರ ಪಾಲಿಕೆ ಆಸ್ತಿಯಾದ ಶಿವಪ್ಪ ನಾಯಕ ಮಾರುಕಟ್ಟೆ(ಬ್ಯಾರಿಸ್ ಸಿಟಿ ಸೆಂಟರ್ ಮಾಲ್) ಅನ್ನು ಮುಸಲ್ಮಾನರು ಭೋಗ್ಯ ಪಡೆದಿರುವ ಈ ಕಟ್ಟಡವನ್ನು ಬಿಜೆಪಿ ಆಡಳಿತದಲ್ಲಿ ಮಾರಾಟ ಮಾಡಲು ಹೊರಟ ಇವರು ಮತಕ್ಕಾಗಿ ರಾಜಕಾರಣಕ್ಕೆ ಮಾತ್ರ ಹಿಂದೂಗಳ ಪರವಾಗಿ ಇರುತ್ತಾರೆ. ಈ ಶಿವಪ್ಪನಾಯಕ ಮಾರುಕಟ್ಟೆಯನ್ನು ಮಾರಾಟ ಮಾಡಲು ಮುಂದಾದವರ ವಿರುದ್ಧ ಮೊದಲು ಕ್ರಮಕೈಗೊಳ್ಳಲಿ. ಅನಂತರ ಇವರು ಹೇಳಿಕೊಳ್ಳುವಂತೆ ಇವರ ಡಬಲ್ ಇಂಜಿನ್ ಸರ್ಕಾರದಿಂದ ಹೇಳಿದಂತೆ ನಡೆದುಕೊಳ್ಳಲು ಸಾಧ್ಯವಾದರೆ ನಮ್ಮ ನಾಯಕರ ವಿಷಯದಲ್ಲಿ ಇವರು ಕೊಟ್ಟ ಹೇಳಿಕೆಯಂತೆ ಮಾಡಿ ತೋರಿಸಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.