ಶಿವಮೊಗ್ಗ,ಜು.23: ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಕರೋನಾ ಅವಾಂತರ ಮಿತಿಮೀರಿದ್ದು, ಪದೇಪದೇ ಸಾವುಗಳು ಸಂಭವಿಸುತ್ತಿರುವುದು ತೀರಾ ಆತಂಕವನ್ನು ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ 19 ಸಾವುಗಳನ್ನು ಕಂಡಿರುವ ಶಿವಮೊಗ್ಗದ ಪಾಲಿಗೆ ಮತ್ತೆ 3 ಸಾವು ಕಂಡುಬಂದಿರುವುದು ತೀವ್ರ ಆತಂಕವನ್ನು ಸೃಷ್ಟಿಸಿದೆ. ಶಿವಮೊಗ್ಗದ ಬಾಪೂಜಿನಗರ, ಗೋಪಾಳ ಹಾಗೂ ಭದ್ರಾವತಿಯ ಓರ್ವರು ಸಾವು ಕಂಡಿದ್ದಾರೆಂದು ಮೂಲಗಳು ಹೇಳಿವೆ.
ಅಂತೆಯೇ ಶಿವಮೊಗ್ಗ ನಗರದ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು ಒಟ್ಟಾರೆ ಶಿವಮೊಗ್ಗ ಜಿಲ್ಲೆಯ ಸಂಖ್ಯೆ ಸಾವಿರದ ಗಡಿ ದಾಟಿದೆ.
ಪಾಲಿಕೆ- ಜಿ.ಪಂ. ಪ್ರವೇಶ ನಿಷೇಧ
ದುರಂತದ ಸಂಗತಿಯೆಂದರೆ ಶಿವಮೊಗ್ಗದ ಅತಿಮುಖ್ಯ ಸ್ಥಳಗಳಾದ ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್ ಎರಡು ಪ್ರದೇಶಗಳು ಈಗ ವ್ಯಾಪ್ತಿಗೆ ಸೇರುವ ಅನಿವಾರ್ಯತೆಗೆ ತಲುಪಿವೆ. ವಾರಿಯರ್ಸ್ ಆಗಿ ಕೆಲಸ ಮಾಡುವ ನೌಕರರಿಗೆ ಕರೊನಾ ಕಂಟಕ ತಲೆದೋರಿರುವುದು ಆತಂಕದ ಸಂಗತಿಯೇ ಹೌದು. ಈ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಜಿ.ಪಂ. ಗೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಯಾವುದೇ ವ್ಯಕ್ತಿಗಳು ಒಳಗೆ ಆಗಮಿಸುವಂತಿಲ್ಲ.
ಆತಂಕದ ಸಂಗತಿ
ಕರೋನಾ ಪರೀಕ್ಷೆಯಲ್ಲಿ ಬೇರೆ ಹೆಸರು ಹಾಗೂ ಅನ್ಯ ಮೊಬೈಲ್ ನಂಬರ್ ನೀಡಿ ಪರೀಕ್ಷೆ ನಡೆಸಿಕೊಂಡ ಸಾಕಷ್ಟು ಜನ ಸೊಂಕಿತರಾದ ಸಂದರ್ಭದಲ್ಲಿ ಕಾಣೆಯಾಗಿ ಆತಂಕವನ್ನು ಸೃಷ್ಟಿಸುತ್ತಿದ್ದಾರೆನ್ನಲಾಗಿದೆ. ಶಿವಮೊಗ್ಗ ನಗರದ ಎಲ್ಲ ಬೀದಿಗಳಲ್ಲಿ ಈಗಾಗಲೇ ಕೊರೋನ ಅವಾಂತರ ಕಂಡುಬರುತ್ತಿದೆ. ಹಾಗಾಗಿ ಆಯಾ ಭಾಗಗಳನ್ನು ಸೀಲ್ಡೌನ್ ಮಾಡಲಾಗಿದ್ದು, ನಗರದ ಸಂಪೂರ್ಣ ಓಡಾಟ ಕಷ್ಟವಾಗಿದೆ.
ಜನರ ವಿರೋಧ
ಅಂತೆಯೇ ಇಂದಿನಿಂದ ಶಿವಮೊಗ್ಗ ನಗರದ ಸಂಪೂರ್ಣ ಸೀಲ್ಡೌನ್ ಹಿನ್ನೆಲೆಯಲ್ಲಿ ಹಳೆನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರದೇಶಗಳು ಬಹುತೇಕ ಸ್ಥಬ್ದವಾಗಿವೆ. ಇದಕ್ಕೆ ಅಲ್ಲಿನ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಸೀಲ್ಡೌನ್ ತೆರವು ಮಾಡುವಂತೆ ಒತ್ತಾಯಿಸಿದ್ದಾರೆ.
ಗಣಪ ಮೆರವಣಿಗೆ ರದ್ದು
ಹಿಂದೂ ಮಹಾಸಭಾ ಗಣಪ ಮೆರವಣಿಗೆ ರದ್ದುಗೊಳಿಸಲಾಗಿದ್ದು, ಎಂದಿನಂತೆ ಗಣಪ ಪ್ರತಿಷ್ಟಾಪನೆ, ಪೂಜೆ ನಡೆಯಲಿದೆ. ಉಳಿದಂತೆ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲವೆಂದು ಹಿಂದೂ ಮಹಾಸಭಾ ಸಮಿತಿ ತಿಳಿಸಿದೆ.