Site icon TUNGATARANGA

ಮತ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು: ಡಾ.ಸತೀಶ್ ಕುಮಾರ್

ಕುವೆಂಪುರವರ ಕನ್ನಡ ಡಿಂಡಿಮವ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ

ಶಿವಮೊಗ್ಗ:
ಕುವೆಂಪುರವರು ಸಪ್ತಸೂತ್ರಗಳಲ್ಲಿ ಉಲ್ಲೇಖಿಸಿರುವಂತೆ ಮನುಷ್ಯಜಾತಿ ತಾನೊಂದೇವಲಂ ಎಂಬುವುದನ್ನು ನಿರೂಪಾಧಿಕವಾಗಿ ಸ್ವೀಕರಿಸಬೇಕು. ವರ್ಣಾಶ್ರಮವನ್ನು ತಿದ್ದುವುದಲ್ಲ. ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು. ಮತ ತೊಲಗಿ ಅಧ್ಯಾತ್ಮ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ|| ಸತೀಶಕುಮಾರ ಹೊಸಮನಿರವರು ತಿಳಿಸಿದರು.


ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯ ಕವಿಶೈಲದ ಹೇಮಾಂಗಣ ಸಭಾಂಗಣದಲ್ಲಿ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಇವರು ಹಮ್ಮಿಕೊಂಡಿದ್ದ ಕುವೆಂಪುರವರ ಕನ್ನಡ ಡಿಂಡಿಮವ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು  ಉದ್ಘಾಟಸಿ ಮಾತನಾಡಿದರು.


ಮತ ಮನುಜಮತವಾಗಬೇಕು- ಪಥ ವಿಶ್ವಪಥವಾಗಬೇಕು. ಮನುಷ್ಯ ವಿಶ್ವಮಾನವ ನಾಗಬೇಕು. ಇಂದಿನ ಮಕ್ಕಳೇ ನಾಳಿನ ದೇಶದ ಭವಿಷ್ಯ. ಅದರಲ್ಲೂ ಲಭ್ಯವಿರುವ ತಂತ್ರಜ್ಞಾನದ ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.


ನಮ ಕರ್ನಾಟಕ ಸಾರ್ವಜನಿಕ ಗ್ರಂಥಾಲಯದ ಡಿಜಿಟಲ್ ಗ್ರಂಥಾಲಯ ವೆಬ್‌ಸೈಟನ್ನು ಸುಮಾರು ೫೫ ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಡಿಜಿಟಲ್ ಗ್ರಂಥಾಲಯದ ಬಗ್ಗೆ ಸಭಿಕರಿಗೆ ಮಾಹಿತಿಯನ್ನು ನೀಡಿದರು.
ಸಾರ್ವಜನಿಕ ಗ್ರಂಥಾಲಯದ ಡಿಜಿಟಲ್ ಪೋರ್ಟಲ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕಗಳು, ಕಥೆ, ಕಾದಂಬರಿ, ಮಕ್ಕಳ ಪುಸ್ತಕಗಳು, ದಿನಪತ್ರಿಕೆ ಮತ್ತು ವೀಡಿಯೋಗಳು ಈ ರೀತಿಯಾಗಿ ಎಲ್ಲಾ ರೀತಿಯ ವಿಷಯವಸ್ತುಗಳ ಸಾಹಿತ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿ ಸ್ಥಳದಲ್ಲಿಯೇ ಹಲವಾರು ಜನರ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಡಿಜಿಟಲ್ ಗ್ರಂಥಾಲಯ ಹಾಗೂ ಮೊಬೈಲ್‌ಯ್ಯಾಪ್‌ನಲ್ಲಿ ಒಟ್ಟು ೨,೧೨,೦೦,೦೦೦ (೨ ಕೋಟಿ ೧೨ ಲಕ್ಷಓದುಗರು) ಸದಸ್ಯರು ನೋಂದಣಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಸುಮಾರು ೫,೫೫,೪೬೯ ಓದುಗರು ನೋಂದಣಿಯಾಗಿದ್ದಾರೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಲು ಅವರು ಸೂಚಿಸಿದರು.


ವಿಶ್ವಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಇವರ ವತಿಯಿಂದ  ಡಾ|| ಸತೀಶಕುಮಾರಎಸ್ ಹೊಸಮನಿ ರವರಿಗೆ ಕರುನಾಡ ನಕ್ಷತ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಉಮೇಶ್, ಜಿಲ್ಲಾ ಕೇಂದ್ರಗ್ರಂಥಾಲಯದ ಉಪ ನಿರ್ದೇಶಕರಾದ ವೆಂಕಟೇಶ್.ಸಿ.ಜೆ., ನಗರಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಹರೀಶ್. ಎಂ.ಆರ್, ಈ. ರವೀಶ್, ಕಡಿದಾಳ್ ಪ್ರಕಾಶ್ ಶ್ರೀಮತಿ ವೀಣಾ ಗಾನವಿ ರೈತಕವಿ ಪಿ ಶಂಕರಪ್ಪ ಬಳ್ಳೇಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

Exit mobile version