Site icon TUNGATARANGA

‘ದವನ’ – ಡಾ. ಸಿ. ಎನ್. ಮಂಜುನಾಥ್‌ರವರ ಅಭಿನಂದನಾ ಗ್ರಂಥದ ಬಗ್ಗೆ ಕೀನ್ಯಾದ ಡಾ.ಸುಕನ್ಯಾ ಅವರ ಬರಹ


ಇತ್ತೀಚೆಗೆ ನಾವು ನೋಡಿದಂತೆ ನಟ “ಕರ್ನಾ ಟಕರತ್ನ” ಪುನೀತ್‌ರಾಜ್‌ಕುಮಾರ್ ಹೃದಯಾ ಘಾತದಿಂದ ಸಾವಿಗೀಡಾದರು. ಈ ಸಮಯದಲ್ಲಿ ಹೃದಯಾಘಾತ, ಹೃದಯ ಸ್ತಂಭನ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಕುರಿತಂತೆ ಸಮೂಹ ಮಾಧ್ಯಮಗಳು ಭಾರೀ ಸದ್ದು ಮಾಡಿದವು. ಇದರಿಂದಾಗಿ ಭಯಭೀತರಾದ ಜನರು ದೌಢಾಯಿಸಿದ್ದು ಹೃದ್ರೋಗ ಆಸ್ಪತ್ರೆಗೆ ಅದರಲ್ಲೂ ಜಗದ್ವಿಖ್ಯಾತಿ ಪಡೆದಿರುವ ಪ್ರತಿಷ್ಠಿತ ಜಯದೇವ ಆಸ್ಪತ್ರೆಗೆ. ಈ ಆಸ್ಪತ್ರೆಯ ಸಾರಥಿ ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು, ಕಾಯಕವನ್ನೇ ತಮ್ಮ ಆರಾಧ್ಯ ದೈವವೆಂದು ಪೂಜಿಸಿ ಕೊಂಡು ಬರುತ್ತಿರುವ, ತಮ್ಮಲ್ಲಿಗೆ ಬರುವ ರೋಗಿಗಳ ವರ್ಗ, ವರ್ಣ, ಧರ್ಮಗಳನ್ನು ದೂರವಿಟ್ಟು ಅತ್ಯಂತ ಗಣ್ಯವ್ಯಕ್ತಿಗಳಿಗೆ, ಶ್ರೀಮಂತರಿಗೆ ಸಿಗುವ ಶುಶ್ರೂಷೆಯೇ ಬಡವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡಿದ ಸರಳತೆಯ ಸಾಕಾರಮೂರ್ತಿ, ಈ ವೈದ್ಯಯುಗದ ಮಹಾನ್ ಮಾನವತಾವಾದಿ ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್‌ರವರು.


‘ಕಾಯಕವೇ ಕೈಲಾಸ’ ಎಂಬ ಬಸವಣ್ಣನ ಆದರ್ಶ, ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎಂಬ ಬುದ್ಧನ ಆದರ್ಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿರು ವವರು. ಸದಾ ಶಾಂತಚಿತ್ತದ, ಮುಗುಳ್ನಗೆಯ, ಮಿತಭಾಷಿ, ಮೃದುಭಾಷಿ, ದಣಿವುಎಂಬುದನ್ನು ಮುಖದಲ್ಲಿ ಕಾಣಗೊಡದ ದುಡಿಮೆಯ ಉತ್ಸಾಹಶಾಲಿ. ಮಾಡು ವ ಕಾಯಕದಲ್ಲಿ ಬಡವ ಬಲ್ಲಿದರೆಂಬ ತಾರತಮ್ಯಕ್ಕೆ ಅವಕಾಶ ಕೊಡದ ನೇರ ಸರಳನಡೆ, ಅಸಹಾಯಕತೆಯ ಕೈಚೆಲ್ಲಿ ಹತಾಶರಾಗಿ ಕುಂತವರ ಪಾಲಿಗೆ ನಿಜವಾದ ಅರ್ಥದಲ್ಲಿ ಸಂಜೀವಿನಿಯಾದ ಡಾ. ಮಂಜುನಾಥ್ ಎಂದಿಗೂ ಅನವಶ್ಯಕವಾಗಿ ಮಾತನಾಡುವವರಲ್ಲ. ಆದರೆ, ಅವರ ಕೆಲಸಗಳೇ ಅವರ ಸಾಧನೆಗಳನ್ನು ಉದ್ಫೋಷಿ ಸುತ್ತವೆ.
ಜಯದೇವ ಆಸ್ಪತ್ರೆಯು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿದ್ದಾಗ ಗೊಂದಲ-ಗದ್ದಲಗಳ ಗೂಡಾಗಿತ್ತು. ಹೇಳ ಹೆಸರಿಲ್ಲದಂತಿದ್ದು, ವೈದ್ಯಕೀಯ ಸೇವೆಗಿಂತಲೂ ವಿವಾದಗಳಿಂದಲೇ ಹೆಸರು ಮಾಡಿತ್ತು. ಆದರೆ, ಬನ್ನೇರು ಘಟ್ಟದ ರಸ್ತೆಯಲ್ಲಿ ತಳಹೂರಿದ ನಂತರ ಡಾ. ಮಂಜುನಾಥ್‌ರವರು ನಿರ್ದೇಶಕರಾದಾಗಿನಿಂದ ಇಲ್ಲಿಯವರೆಗೂ ಅತ್ಯಂತ ತೀವ್ರಗತಿಯಲ್ಲಿ ದಾಪುಗಾಲು ಹಾಕಿಕೊಂಡು ಬೆಳೆದು, ‘ಹೈಟೆಕ್‌ಆಸ್ಪತ್ರೆ’ ಎಂಬ ಹೆಸರಿಗೆ ಪಾತ್ರವಾಗಿ ಇದೀಗ ಜಗದ್ವಿಖ್ಯಾತಿ ಗಳಿಸಿದೆ. ಚಿಕಿತ್ಸೆಗಳಲ್ಲಿ ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಭಾರತದ ‘ನಂಬರ್‌ಒನ್ ಸರ್ಕಾರಿ ಹೃದ್ರೋಗಆಸ್ಪತ್ರೆ’ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಆಸ್ಪತ್ರೆಗೆ ತಮ್ಮ ಬಾಳನ್ನೇ ಮುಡಿಪಾಗಿಟ್ಟಿದ್ದಾರೆ ಡಾ. ಮಂಜುನಾಥ್.


ಚನ್ನರಾಯಪಟ್ಟಣ ತಾಲ್ಲೂಕಿನ ಗ್ರಾಮೀಣ ಮೂಲದ ಪ್ರತಿಭೆಯೊಂದು ತನ್ನ ಪರಿಶ್ರಮದಿಂದ ಮೇಲೆ ಬಂದು ಜಾಗತಿಕ ವ್ಯಾಪ್ತಿಯಲ್ಲಿ ಹೆಸರಾಗಿರು ವುದು ತನ್ನ ಘನವ್ಯಕ್ತಿತ್ವ, ಪ್ರತಿಭೆ ಮತ್ತು ಸೇವಾತತ್ಪರತೆ ಯಿಂದ ಮಾತ್ರ. ತಾನುಆಡುವ ಪ್ರತಿಯೊಂದು ಮಾತಿಗೂ ಸೂತಕದಛಾಯೆತಟ್ಟದ ಹಾಗೆ ನಡೆದು ನುಡಿಯುವ ನುಡಿದು ನಡೆಯುವ ಈ ಸಜ್ಜನ ವೈದ್ಯ, ಅಂತಾರಾಷ್ಟ್ರೀಯಖ್ಯಾತಿಯ ಹೃದಯ ತಜ್ಞಡಾ. ಸಿ. ಎನ್. ಮಂಜುನಾಥ್‌ಎಂದರೆ ಕೇವಲ ಒಂದು ಹೆಸರು ಮಾತ್ರವಲ್ಲ. ಬಡವರ ಪಾಲಿನ ಧರ್ಮಸ್ಥಳದ ಮಂಜುನಾಥಸ್ವಾಮಿ. ಭರವಸೆ, ನಂಬಿಕೆಗಳ ಪ್ರತಿರೂಪ, ಜಯದೇವ ಆಸ್ಪತ್ರೆ ಯನ್ನುತನ್ನ ಸತ್ಯಶುದ್ಧಕಾಯಕದಿಂದ ವಿಶ್ವವಿಖ್ಯಾತಿ ಗೊಳಿಸಿದ ದುಡಿಮೆಗಾರ. ‘ಹೃದಯಗಳ ಮಾಂತ್ರಿಕ’ ಎಂದೇ ಖ್ಯಾತರಾದ ಧನ್ವಂತರಿಗುಣದ ಹೃದಯ ಸ್ಥಾನಿಕ ಪಂಡಿತರಾದ, ನಮ್ಮ ಕರ್ನಾಟಕ ರಾಜ್ಯದ ಕೀರ್ತಿಧ್ವಜವು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸು ವಂತೆ ಮಾಡಿದ ಮಹನೀಯರಲ್ಲೊಬ್ಬರಾದ ಡಾ. ಸಿ. ಎನ್. ಮಂಜುನಾಥ್ ಅವರಿಗೆ ೬೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಘನವ್ಯಕ್ತಿತ್ವವನ್ನುಅಭಿನಂದಿಸಲು “ದವನ” ಎಂಬ ಶೀರ್ಷಿಕೆಯಡಿ ಬೆಂಗಳೂರಿನ ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟ್ ಪ್ರಕಾಶನದಿಂದ ಡಾ. ಡಿ. ಕೆ. ಚೌಟ ಮತ್ತು ನಂಜುಂಡಸ್ವಾಮಿ ತೊಟ್ಟವಾಡಿ ಅವರು ಕೂಡಿ ಸಂಪಾದಿಸಿದ ಗ್ರಂಥವಿದು.


ಈ ಅಭಿನಂದನಾ ಗ್ರಂಥದ ಮೂಲ ಉದ್ದೇಶವೆಂದರೆ ಡಾ. ಮಂಜುನಾಥ್ ಅವರ ದಿಟ್ಟ ನಿಲುವು, ಕಾರ್ಯವೈಖರಿ, ಸಮಾಜಮುಖಿ ಕೆಲಸಗಳು ಸಾಮಾನ್ಯ ಜನರಿಗೂ ಮುಟ್ಟಬೇಕು ಎಂಬ ಸದ್ದುದ್ದೇಶವನ್ನಿಟು ಕೊಂಡು ಹಠಮಾಡಿ ಬರೆದ, ಬರೆಸಿದ ಗ್ರಂಥ ಇದಾಗಿದೆ. ಆದರೆ ಇಲ್ಲಿನ ಲೇಖನಗಳನ್ನು ಓದುವಾಗ ಪ್ರಕಾಶಕರ ಒತ್ತಡಕ್ಕೆ ಕಟ್ಟುಬಿದ್ದು ಬರೆದ ಅಭಿನಂದನಾ ಬರಹ ಅನಿಸು ವುದಿಲ್ಲ. ಬದಲಿಗೆ ಒಬ್ಬ ಘನವ್ಯಕ್ತಿತ್ವದ ಸಮಾಜ ಮುಖಿ ತಜ್ಞ ವೈದ್ಯರೊಬ್ಬರ ಅಂತಃಕರಣದ ಪ್ರತಿಫಲನಗಳಾಗಿ ತೋರುತ್ತವೆ. ‘ದವನ’ ಅಭಿನಂದನಾ ಗ್ರಂಥವು ಒಡಲೊಳಗಿನ ನುಡಿ, ಒಡಲ ಹೃದಯದ ಸಾಲುಗಳು, ಬರಹ ಮತ್ತು ಭಾಷಣ, ಮಾಧ್ಯಮದೊಳಗೆ ಒಂದು ಸುತ್ತು ಮತ್ತು ಮರೆಯಲಾಗದ ಗಳಿಗೆ (ಚಿತ್ರ ಸಂಪುಟ) ಎಂಬ ಅರ್ಥಪೂರ್ಣ ಉಪಶೀರ್ಷಿಕೆಗಳನ್ನೊಳಗೊಂಡ ಐದು ಭಾಗಗಳಾಗಿ ರೂಪುಗೊಂಡಿದೆ.


‘ಒಡಲೊಳಗಿನ ನುಡಿ’ ಎಂಬ ಮೊದಲ ಭಾಗದಲ್ಲಿ ಸುಮಾರು ೩೨ ಲೇಖನಗಳಿದ್ದು, ಡಾ. ಮಂಜುನಾಥ್ ಅವರನ್ನು ಹತ್ತಿರದಿಂದ ಬಲ್ಲ ಅವರ ಆಪ್ತರು, ಅವರ ಜೊತೆ ಕೆಲಸ ಮಾಡಿದ ವೈದ್ಯರು ಗಳು, ಶಿಷ್ಯರು, ಅವರಿಂದ ಚಿಕಿತ್ಸೆ ಪಡೆದ ಕನ್ನಡದ ಖ್ಯಾತ ಲೇಖಕರು, ಕಲಾವಿದರು, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು ಅವರ ಒಡನಾಟವನ್ನು, ವ್ಯಕ್ತಿತ್ವವನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ತಮ್ಮಅನುಭವ ಮತ್ತುಅಭಿಪ್ರಾಯವನ್ನು ದಾಖಲಿಸಿ ರುವವರೆಲ್ಲರೂ ವಸ್ತು ನಿಷ್ಠತೆಗೆ ಮನ್ನಣೆ ಹಾಕುವ ವರೇ ಹೊರೆತು ವ್ಯಕ್ತಿ ನಿಷ್ಠತೆಗಲ್ಲ. ಅವರ ಮಾತು ಗಳೆಲ್ಲ ಹೃದಯಾಳದಿಂದ ಬಂದಿರುವಂತಹವು. ಇವರೆಲ್ಲರಿಂದ ವ್ಯಕ್ತವಾಗುವ ಅಭಿಪ್ರಾಯವೆಂದರೆ ಡಾ. ಮಂಜುನಾಥ್ ಸರಳತೆಯ ಸಾಕಾರಮೂರ್ತಿ ಯಾದ, ಜನಾನುರಾಗಿಯಾದ, ಮಾನವೀಯ ಮೌಲ್ಯಗಳನ್ನು ಗೌರವಿಸುವ ಹೃದಯವಂತ ಹೃದ್ರೋಗ ತಜ್ಞರೆಂಬುದು ಮತ್ತು ಪವಾಡ ಪುರುಷರೆಂಬುದು.‘ಜನಸೇವೆಯೇಜನಾರ್ಧನ ಸೇವೆ’ಎಂದು ನಂಬಿರುವ ಡಾ. ಮಂಜುನಾಥ್ ಅವರು ಇಷ್ಟೆಲ್ಲಾ ಎತ್ತರಕ್ಕೆ ಏರಿದರೂ ಹಮ್ಮು-ಬಿಮ್ಮಿಲ್ಲದೇ, ವಿನಯವಂತಿಕೆ, ಸೇವಾ ಮನೋ ಭಾವಗಳನ್ನು ಕಳೆದುಕೊಳ್ಳದಿರುವ ವೈದ್ಯಲೋಕದ ವಿಸ್ಮಯವಾಗಿ ಹಲವರು ಕಣ್ಣಿಗೆ ಕಾಣುತ್ತಾರೆ. ಅದಕ್ಕೆ ಸಾಕ್ಷಿಯೆಂಬಂತೆ ಅವರನ್ನು ಕುರಿತು ಬರೆದ ಅನುಭವ ಕಥನಗಳಿಗೆ ಅವರುಗಳು ನೀಡಿರುವ ಶೀರ್ಷಿಕೆಗಳು. ಆದರ್ಶ ವೈದ್ಯದೇವಮಾನವ, ಜನ ಮಾನಸ, ಸಮಾನತೆಯ ಹರಿಕಾರ, ಹೃದಯದ ಬೆಳಕು, ಹೃದಯಶೀಲ ಹೃದಯತಜ್ಞ, ಮಿಸ್ಟರ್‌ಕೂಲ್, ಅಂಚಿನವರ ಆಪತ್‌ಬಂಧು, ಬಂಗಾರದ ಮನುಷ್ಯ, ಮಹಾಮನೆಯ ಮಾನವೀ ಯತೆ, ದಕ್ಷತೆಯಲ್ಲಿ ಆತ್ಮೀಯತೆ, ಜ್ಞಾನಜ್ಯೋತಿ, ಜೀವಂತದಂತಕಥೆ, ಮಂಜುನಾಥ್ ಅಭಯ ಜೀವನ ಪರ್ಯಂತ ನಿರ್ಭಯ ಇತ್ಯಾದಿ ಅನುಭವ ದಿಂದ, ಹೃದಯಾಂತರಾಳದಿಂದ ಸ್ಫುರಿಸಿದ ನುಡಿಗೌರವಗಳು, ಮಾತಿನ ದೀವಿಗೆಗಳೆನ್ನಬಹುದು.


ಲಕ್ಷ್ಮಣ್ ಧರ್ಮದರ್ಶಿಗಳು ಬಸವಣ್ಣನವರ ವಚನಗಳ ಸಾಲುಗಳನ್ನು ಹೇಳಿ ಡಾ. ಮಂಜು ನಾಥ್‌ಒಬ್ಬ ಮೃದುಭಾಷಿಯೆಂಬುದು ಅಲ್ಲಿ ಪ್ರತಿಫಲನಗೊಳ್ಳುತ್ತದೆ. ಕೆ. ಎಚ್. ಪುಟ್ಟಸ್ವಾಮಿ ಗೌಡರು ಇವರೊಬ್ಬ ಮಾನವತಾವಾದಿ, ಸಮಾಜ ಸೇವಕ ಎಂಬುದನ್ನು ತಿಳಿಯ ಪಡಿಸುತ್ತಾರೆ. ನಂಜುಂಡಸ್ವಾಮಿ ತೊಟ್ಟವಾಡಿಯವರ ಲೇಖನದಲ್ಲಿ ಸಿಜಿಕೆ ಮತ್ತು ಶ್ರೀನಿವಾಸ ತಾವರಗೇರಿ ಯವರಿಗೆ ಮಂಜುನಾಥ್ ಅವರ ಹಸ್ತದಿಂದ ನಡೆದ ಪವಾಡ ವನ್ನು ವಿವರಿಸಿ ಇವರೊಬ್ಬ “ಪವಾಡ ಪುರುಷ” ಎಂಬುದನ್ನು ಸಾರಿದ್ದಾರೆ. ಹಾಗೆಯೇ ಶ್ರೀನಿವಾಸ ತಾವರಗೇರಿಯವರಿಗೆ ಮಂಜುನಾಥ್ ಅವರು ತಮ್ಮ ಕೈಯಿಂದಲೇ ಹಣ ನೀಡಿ ಸಹಾಯ ಮಾಡಿದ ಸೇವೆಯನ್ನು ಬಿಂಬಿಸಿದ್ದಾರೆ. ಡಾ. ಹೆಚ್. ಕೆ. ಕಾಳಪ್ಪರವರ ಲೇಖನದಲ್ಲಿ ಇವರ ವ್ಯಕ್ತಿತ್ವಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನ್ಯಾಯ ಮೂರ್ತಿ ಎ. ಜೆ. ಸದಾಶಿವ ಅವರ ಹೃದಯದ ಬೆಳಕು ಲೇಖನದಲ್ಲಿ “ಮಂಜುನಾಥ್‌ಟೆಕ್ನಿಕ್” ಬಡವರ, ಕೆಳವರ್ಗದವರ ಕತ್ತಲ ಬದುಕಿನಲ್ಲಿ ಬೆಳಕು ಮೂಡಿಸಿತು ಎಂದು ಹೇಳಿ ಅವರ ವೈಜ್ಞಾನಿಕ ತಂತ್ರಜ್ಞಾನ ಮತ್ತು ಸಂಶೋಧನೆಯ ಸಾಫಲ್ಯತೆಯನ್ನು ತಿಳಿಸಿಕೊಟ್ಟಿದ್ದಾರೆ. ಪ್ರೊ. ಬರಗೂರು ರಾಮಚಂದ್ರಪ್ಪರವರು ಸಾವು-ಬದುಕಿನ ನಡುವೆ ಸಿಲುಕಿ ಡಾ. ಮಂಜುನಾಥ್ ಅವರಿಂದ ಚಿಕಿತ್ಸೆ ಪಡೆದು ಅವರನ್ನು “ಅಂತಃಕರಣ ವೈದ್ಯ ಮತ್ತು ಅವರದು ಅನುಕರಣೆಯೋಗ್ಯ ವ್ಯಕ್ತಿತ್ವ” ಎಂದು ಹೇಳಿ ಅವರ ಅಂತಃಕರಣವನ್ನು ಪರಿಚಯಿಸಿ ಕೊಟ್ಟಿದ್ದಾರೆ. ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಮಂಜುನಾಥ್‌ಅವರನ್ನುಕಾಣುವುದು ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ. ಮಂಜುನಾಥ್ ರವರಒಂದು ನಗುಮೊಗ, ಒಂದೆರೆಡು ಮೆಲುಮಾತು ಎಂಥವರ ಬಿಗಿಯಾದ ಸ್ನಾಯುಗಳನ್ನೂ ಸಡಿಲಗೊಳಿಸಬಲ್ಲವೆಂಬು ದನ್ನು ಹೇಳಿ ರೋಗಿಗಳೊಂದಿಗೆ ನಡೆದುಕೊಳ್ಳುವ ರೀತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಸಿಜಿಕೆ “ಕತ್ತಲೆ ಬೆಳೆದಿಂಗಳೊಳಗೆ” ಕೃತಿಯಿಂದಆಯ್ದ ಲೇಖನ ‘ಅಂದು ಡಾ. ಟೋವಿ ಇಂದುಡಾ. ಮಂಜುನಾಥ್’ಎಂದು ಜೀವರಕ್ಷಕದ್ವಯರಿಬ್ಬರನ್ನು ನೆನೆಯುತ್ತಾರೆ. ಟಿ. ಎನ್. ಸೀತಾರಾಮ್ ರವರು ಡಾ. ಸಿಎನ್‌ಎಂ ರವರ ಪವಾಡ ಮತ್ತು ಸೇವಾ ಮನೋಭಾವವನ್ನು ಮೆಚ್ಚಿ ಬರೆದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್‌ಅವರು “ಮಂಜುನಾಥ್ ಟೆಕ್ನಿಕ್” ಅವರ ಅಸಲಿ ಸಂಶೋಧನೆಯು ಹೃದಯ ರೋಗಿಗಳಿಗೆ ವರದಾನ ಶೇ. ೪೦ರಷ್ಟು ಭಾಗದಷ್ಟು ಚಿಕಿತ್ಸಾ ವೆಚ್ಚವನ್ನು ಕಡಿತಗೊಳಿಸಿ ಲೋಕಸಮ್ಮತಿ ಪಡೆದ ತಾಂತ್ರಿಕ ತಿಳುವಳಿಕೆ ಇವರದ್ದಾಗಿದೆ ಎಂದು ಹೇಳುವ ಮೂಲಕ ಅವರ ಸೇವಾಗುಣ, ಪರಿಶ್ರಮದ ಸಾಫಲ್ಯತೆಯನ್ನು ತಿಳಿಸಿಕೊಟ್ಟಿದ್ದಾರೆ. ಸಾಶಿ ಮರುಳಯ್ಯರವರ ಲೇಖನದಲ್ಲಿ ಡಾ. ಸಿ. ಎನ್. ಮಂಜುನಾಥ್ ಅವರನ್ನು ನೆನಪಿಸಿ ದಾಗಲೆಲ್ಲ ಲೇಖಕರಿಗೆ ಅಮೆರಿಕಾದ ಅಬ್ರಹಾಂ ಲಿಂಕನ್ನರ ಅಭಿಮಾನ ಭರಿತ ನುಡಿ ನೆನಪಿಗೆ ಬರುತ್ತದೆ. ‘ನಾನಿಂಥ ನಾಡಿನವರು ಎಂಬ ಹೆಮ್ಮೆ ವ್ಯಕ್ತಿಯದು. ನನ್ನ ಮಡಿಲಲ್ಲಿ ಇಂಥವನು ಬದುಕಿ ಬೆಳಕಾದನಲ್ಲ ಎಂಬ ಹಿಗ್ಗು ಅವನನ್ನು ಪಡೆದ ನಾಡಿನದು’ ಎಂದು ಉದ್ಗರಿಸಿ ಡಾಕ್ಟರರ ಪ್ರತಿಭೆ ಹಾಗೂ ಪರೋಪಕಾರ ಮನೋಧರ್ಮಗಳನ್ನು ಗೌರಿಶಂಕರಕ್ಕೆ ಏರಿಸಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಎಚ್. ಎಸ್. ದೊರೆಸ್ವಾಮಿಯವರು ಮಂಜುನಾಥ್‌ರವರು ಸಲ್ಲಿಸಿರುವ ಋಣವನ್ನು ಸಮಾಜ ತೀರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಡಾ. ಸಿಎನ್‌ಎಂ ಸಮಾಜಕ್ಕೆ ಎಷ್ಟೊಂದು ಕೊಡುಗೆಯನ್ನು ನೀಡಿದ್ದಾರೆಂಬುದನ್ನು ಮನವರಿಕೆ ಮಾಡಿಕೊಟ್ಟಿ ದ್ದಾರೆ. ಬಿ.ಟಿ. ಲಲಿತಾನಾಯಕ್‌ರವರು ಅವರು ಘನ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಡಾ. ವಸುಂದರಾ ಭೂಪತಿಯವರು ಅಮೆರಿಕಾದ ಒಬಾಮಾಗೆ ಡಾ. ಮಂಜುನಾಥ್ ಪ್ರೇರಣೆಯಾಗಿ ದ್ದನ್ನು ತಿಳಿಸಿದ್ದಾರೆ. ಡಾ. ಸದಾನಂದಗೌಡರು, ಡಾ. ಸಿಎನ್‌ಎಂ ಅವರನ್ನು ಬರಡಾಗಿದ್ದ ಜಯದೇವ ಆಸ್ಪತ್ರೆಯಲ್ಲಿ ಜೀವಜಲವನ್ನು ಉಕ್ಕಿಸಿ, ಹಸಿರು ತುಂಬಿದ ಮಾಂತ್ರಿಕನಂತೆ ನನಗೆ ಕಾಣುತ್ತಾರೆ. ಅವರು ನಿಜವಾದ ಅರ್ಥದಲ್ಲಿ ಈ ಕಾಲದ “ಬಂಗಾರದ ಮನುಷ್ಯ” ಎಂದು ಕರೆದಿದ್ದಾರೆ.ಈ ಎಲ್ಲಾ ಲೇಖನಗಳಲ್ಲಿ ಇಣುಕುವುದು ಡಾ. ಸಿಎನ್‌ಎಂ ಕುರಿತಾದ ಗೌರವ, ಮಾನವೀಯ ಸಂಬಂಧ ಕುರಿತಾದ ಮೆಚ್ಚುಗೆ.
‘ಹೃದಯ’ಎನ್ನುವುದು ದೇಹದ ಒಂದು ಭಾಗ ಅಷ್ಟೇ ಅಲ್ಲ. ಅದುಪ್ರೀತಿ ಮತ್ತು ಅನೇಕ ಭಾವನೆಗಳ ರೂಪಕ. ಹೃದಯ ಆರೋಗ್ಯದಿಂದ ಇರಬೇಕು. ಅದನ್ನು ನೋಡಿ ಕೊಳ್ಳಲು ಮಂಜುನಾಥ್‌ರೀತಿಯ ವೈದ್ಯರುಗಳಿ ದ್ದಾರೆ. ಭಾಗ ಎರಡು ಮತ್ತು ನಾಲ್ಕರಲ್ಲಿ ಹೃದಯರೋಗಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನರಿಗೂ ಅರ್ಥವಾಗುವ ಅನೇಕ ಮಾಹಿತಿಗಳಿವೆ. ‘ಒಡಲ ಹೃದಯದ ಸಾಲುಗಳು’ ಭಾಗ ಎರಡರಲ್ಲಿ ಹೃದಯದ ಪ್ರಾಮುಖ್ಯತೆ, ಅದಕ್ಕೆಒದಗುವ ಆಘಾತಗಳು, ಅದನ್ನು ಅರಿತುಕೊಳ್ಳುವ ಬಗೆ, ಮುನ್ಸೂಚನೆಯನ್ನರಿತು ಅನುಸರಿಸಬೇಕಾದ ಕ್ರಮಗಳ ಬಗ್ಗೆ, ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಈ ಮಾಹಿತಿ ಮತ್ತು ವಿವರಗಳು ಹೃದಯದ ಬಗ್ಗೆ ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.
ಭಾಗ ಮೂರು‘ಬರಹ ಮತ್ತು ಭಾಷಣ’. ಇದರಲ್ಲಿ ಅಮೆರಿಕದ ಒಬಾಮ ಪತ್ರ, ಮನೆಯಂಗಳದಲ್ಲಿ ಮಾತುಕತೆ, ಘಟಿಕೋತ್ಸವ ಭಾಷಣ ಸೇರಿದಂತೆ ಅನೇಕ ಭಾಷಣಗಳಿವೆ.
ಭಾಗ ನಾಲ್ಕು ‘ಮಾಧ್ಯಮದೊಳಗೆ ಒಂದು ಸುತ್ತು’ ಬಹಳ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತದೆ. ವಿಜಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಉದಯ ವಾಣಿ, ಸಂಯುಕ್ತಕರ್ನಾಟಕ, ಮೈಸೂರು ಮಿತ್ರ ದಲ್ಲಿ ಇತ್ಯಾದಿ ವಿವಿಧ ಪತ್ರಿಕೆಗಳಲ್ಲಿ ಸಾಮಾನ್ಯ ಜನರು ಹೃದಯಾ ಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಕೇಳುವ ಪ್ರಶ್ನೆಗಳಿಗೆ ಡಾ. ಮಂಜುನಾಥ್ ಸರಳ ಭಾಷೆಯಲ್ಲಿ ಇಲ್ಲಿ ಉತ್ತರಿಸಿದ್ದಾರೆ. ಈಗಲೂ ಅವರು ಮಾಧ್ಯಮಗಳಲ್ಲಿ ಉತ್ತರಿಸುತ್ತಲೇ ಬಂದಿದ್ದಾರೆ.


ಈ ಪುಸ್ತಕದ ಅತ್ಯಂತ ಸೊಗಸಾದ ಭಾಗವೆಂದರೆ ಅಂತಿಮ ಭಾಗ ‘ಮರೆಯಲಾಗದ ಗಳಿಗೆ’ (ಚಿತ್ರ ಸಂಪುಟ). ಈ ಭಾಗಡಾ. ಸಿ. ಎನ್. ಮಂಜುನಾಥ್ ಅವರ ಬದುಕಿನ ಮುಖ್ಯಘಟ್ಟಗಳನ್ನು ನೆನೆಪಿಸುವ ಭಾವ ಚಿತ್ರಗಳ ಮಾಲಿಕೆಯಾಗಿದೆ. ಇದರಲ್ಲಿ ಚಿತ್ರಗಳ ಮೂಲಕ ಇವರ ಬದುಕಿನಚಿತ್ರಣವನ್ನುಇಡಿಯಾಗಿ ಚಿತ್ರಿಸಿದ್ದಾರೆ. ವಿವಿಧ ವರ್ಣ ಚಿತ್ರಗಳಿಂದ ಕೂಡಿದ ಈ ಸುಂದರ ಮಾಲಿಕೆ ನೆನಪಿನ ದಾಖಲೆಗಳಿಂದ ಕೂಡಿ ಶಬ್ದ ರೂಪದಲ್ಲಿ ಸಂದರ್ಭವನ್ನು ಹೆಸರಿಸುತ್ತಾ ದೃಶ್ಯರೂಪದಲ್ಲಿ ಸಂದರ್ಭವನ್ನು ಮನಗಾಣಿಸುವ ಸುಂದರ ಭಾಗವಾಗಿದೆ.
ಒಟ್ಟಾರೆ, ಈ ಪುಸ್ತಕವು ಡಾ. ಮಂಜುನಾಥ್ ರವರ ವ್ಯಕ್ತಿತ್ವ, ಸೇವೆಯನ್ನು ಸ್ಮರಿಸುವಲ್ಲಿ ಮೌಲಿಕ ವಾಗಿದೆ. ಮಂಜುನಾಥ್ ಕುರಿತಾದ ಸಂಕ್ಷಿಪ್ತ ಚಿತ್ರಣವನ್ನು ಈ ಗ್ರಂಥವು ಓದುಗರ ಕಣ್ಮುಂದೆ ಕಟ್ಟಿಕೊಡುತ್ತದೆ. ದವನ ತನ್ನ ವಸ್ತುನಿಷ್ಠ ಗುಣ ದಿಂದಾಗಿ ಎಲ್ಲರ ಗಮನ ಸೆಳೆಯುತ್ತದೆ. ಬಾಹ್ಯ ನೋಟಕ್ಕಷ್ಟೇ ಮಾತ್ರವಲ್ಲದೇಅಂತರಿಕವಾಗಿಯೂ ಮಹಾನ್ ಮಾನವತಾವಾದಿಯಾದ ಡಾ. ಸಿ ಎನ್ ಮಂಜುನಾಥ್ ರವರಂತಹ ಮಹಾನ್ ಚೇತನಕ್ಕೆ ಇಂತಹ ಬೃಹತ್ ಅಭಿ ನಂದನಾ ಗ್ರಂಥದ ಅರ್ಪಣೆಯು ಅವಶ್ಯಕ. ಹಾಗೂ ಡಾ. ಡಿ. ಕೆ. ಚೌಟ ಮತ್ತು ನಂಜುಂಡಸ್ವಾಮಿ ತೊಟ್ಟುವಾಡಿ ಯವರ ಈ ಕಾರ್ಯ ಅಭಿನಂದನೀಯ.

ಡಾ. ಸುಕನ್ಯಾ ಸೂನಗಹಳ್ಳಿ,
ನೈರೋಬಿ, ಕೀನ್ಯಾ.

Exit mobile version