ಪೊಲೀಸರ ಕಾರ್ಯಕ್ಕೆ ಶ್ಲಾಘನೆ, ವೇಗ ಇನ್ನಷ್ಟು ಹೆಚ್ಚಲಿ
ಶಿವಮೊಗ್ಗ, ಡಿ.೧೨:
ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ನಿತ್ಯ ನಿರಂತರವಾಗಿ ಪೊಲೀಸರ ಕೈಯಲ್ಲಿ ಗಾಂಜಾ ಗಿರಾಕಿಗಳು ಸಿಗುತ್ತಿದ್ದಾರೆ. ಅವರ ಜೊತೆ ಗಾಂಜಾ ಸಹ ಪತ್ತೆಯಾಗುತ್ತಿದೆ. ಕಳೆದ ತಿಂಗಳಿನಿಂದ ನಿತ್ಯ ಕನಿಷ್ಠ ನಾಲ್ಕೈದು ಪ್ರಕರಣಗಳು ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ನಗರದಲ್ಲಿ ವರದಿಯಾಗುತ್ತಿವೆ. ಇಲ್ಲಿ ಪೊಲೀಸರ ಕಾರ್ಯವನ್ನು ಕಂಡು ಅಭಿನಂದಿಸಿ ಶ್ಲಾಘಿಸಬೇಕೋ ಅಥವಾ ನಗರದ ತುಂಬೆಲ್ಲಾ ಹೆಚ್ಚಿರುವ ಗಾಂಜಾ ಪ್ರಮಾಣದ ಕುರಿತು ಆತಂಕ ವ್ಯಕ್ತಪಡಿಸಬೇಕೋ..?
ಅಂದರೆ ಪೊಲೀಸ್ ಇಲಾಖೆ ಅದರಲ್ಲೂ ತುಂಗಾ ನಗರ, ದೊಡ್ಡಪೇಟೆ, ವಿನೋಬನಗರ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ದೀಪಕ್, ಹರೀಶ್ ಪಟೇಲ್, ರವಿ ಅವರ ಕಾರ್ಯ ಗ್ರಾಮಾಂತರ ಇನ್ಸ್‌ಪೆಕ್ಟರ್ ಸಂಜೀವ್ ಅವರ ಕಾರ್ಯವನ್ನು ಶ್ಲಾಘಿಸಬೇಕು. ಅದರೆ ಶಿವಮೊಗ್ಗ ನಗರದಲ್ಲಿ ನಿರೀಕ್ಷೆ ಮೀರಿದ ಪ್ರಮಾಣದ ಗಾಂಜಾ ಸರಬರಾಜಾಗುತ್ತಿದೆ ಎಂಬ ಆತಂಕ ಇಲ್ಲಿ ಭಯಕ್ಕೆ ಕಾರಣವಾಗಿದೆ.
ಇದೇ ಪೊಲೀಸ್ ಮೂಲಗಳ ಪ್ರಕಾರ ಪೊಲೀಸರಿಗೆ ದೊರಕುತ್ತಿರುವ ಮಾಹಿತಿ ಹಾಗೂ ಸಿಗುತ್ತಿರುವ ಗಾಂಜಾ ಪ್ರಕರಣಗಳು ಶೇ.೧೦ರಷ್ಟಿರಬಹುದು. ಅಂದರೆ ಇನ್ನೂ ಶೇ.೯೦ರಷ್ಟು ಪ್ರಕರಣಗಳು ಸದ್ದಿಲ್ಲದೇ ಸಾಗುತ್ತಿವೆ. ಶಿವಮೊಗ್ಗ ನಗರದಲ್ಲಿ ಗಾಂಜಾದಂತಹ ಮಾದಕ ವಸ್ತು ಇಂದಿನ ಯುವಪೀಳಿಗೆಯನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ಸೆಳೆಯುವತ್ತಾ ಯಶಸ್ವಿಯಾಗುತ್ತಿದೇಯೇ ಎಂಬ ಅನುಮಾನ ಕಾಡುತ್ತಿದೆ.
ಕಾರು, ಬೈಕ್‌ದಂತಹ ವಾಹನಗಳ ಮೂಲಕ ನಿರಂತರವಾಗಿ ಕೆ.ಜಿ.ಗಟ್ಟೆಲೆ ಗಾಂಜಾ ಸರಬರಾಜಗುತ್ತಿದ್ದು, ಅದರ ನಿಯಂತ್ರಣಕ್ಕೆ ಪೊಲೀಸರ ದಾಳಿ, ಕೈಗೊಂಡಿರುವ ಕ್ರಮಗಳು ಅಷ್ಟು ಪರಿಣಾಮಕಾರಿಯಾಗಿಲ್ಲವೆಂದು ಹೇಳಲಾಗುತ್ತಿದೆ. ಏಕೆಂದರೆ ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಹಿತಕರ ಚಟುವಟಿಕೆಗಳೇ ಕಾರಣವೆಂದು ಹೇಳಲಾಗುತ್ತಿದೆ.
ಪತ್ತೆಯಾದ ಪ್ರಕರಣಗಳ ಒಂದಿಷ್ಟು ಮಾಹಿತಿ
ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್‌ಸ್ಪೆಕ್ಟರ್ ದೀಪಕ್ ಅವರ ತಂಡ ಖಚಿತ ಮಾಹಿತಿ ಮೇರೆಗೆ ಆಂಧ್ರ ಮೂಲದ ಇನೋವಾ ಕಾರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರಲ್ಲಿ ಸುಮಾರು ೬.೫೦ ಲಕ್ಷ ರೂ.ಮೌಲ್ಯದ ೨೧ ಕೆಜಿ ೩೧೫ ಗ್ರಾಂ ತೂಕದ ಒಣ ಗಾಂಜಾ ಪತ್ತೆಯಾಗಿದೆ.
ಶಿವಮೊಗ್ಗ ಮಳಲಿಕೊಪ್ಪದ ದೌಲತ್, ಇಂದಿರಾ ನಗರದ ಮುಜೀಬ್‌ಖಾನ್, ಕಡೆಕಲ್‌ನ ಶೋಯೇಬ್ ಹಾಗೂ ಮೊಹಮ್ಮದ್ ಜಾಫ್ರುಲ್ಲಾ ಅವರನ್ನು ಬಂಧಿಸಿದ್ದು, ಅವರು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಮಾರುವ ಉದ್ದೇಶದಿಂದ ಆರೋಪಿಗಳು ಲಕ್ಕಿನಕೊಪ್ಪ ಕ್ರಾಸ್ ಬಳಿ ಲಕ್ಕವಳ್ಳಿ ಕಡೆ ಹೋಗುತ್ತಿದ್ದರು.
ಇತ್ತೀಚೆಗೆ ಪತ್ತೆಯಾದ ಶಿವಮೊಗ್ಗ ತಾಲ್ಲೂಕು ಕೋಟೆಗಂಗೂರು ಬಳಿ ಶಕ್ತಿಧಾಮ ಬಡಾವಣೆಯಲ್ಲಿನ ಗಾಂಜಾ ಪ್ರಕರಣ ಅಲ್ಲಿ ಪತ್ತೆಯಾದ ಸುಮಾರು ೫೦ ಸಾವಿರ ಮೌಲ್ಯದ ಗಾಂಜಾವನ್ನು ಬೈಕ್‌ನೊಂದಿಗೆ ಗ್ರಾಮಾಂತರ ಇನ್ಸ್‌ಸ್ಪೆಕ್ಟರ್ ಸಂಜೀವ್ ಅವರ ತಂಡ ವಶಪಡಿಸಿಕೊಂಡಿದ್ದರು.
ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರದ ಪುರಲೆ, ತುಂಗಾ ನಗರ ವ್ಯಾಪ್ತಿಯ ಪುಟ್ಟಪ್ಪ ಕ್ಯಾಂಪ್ ಬಳಿ, ಮಾಳೂರು ಪೊಲೀಸ್ ಠಾಣೆ, ದೊಡ್ಡಪೇಟೆ ಪೊಲೀಸ್ ಠಾಣೆಯ ಗಂಧರ್ವ ನಗರ ಸೇರಿದಂತೆ ಹಲವೆಡೆ ಈ ಗಾಂಜಾ ಪ್ರಕರಣಗಳು ಪತ್ತೆಯಾಗಿವೆ. ಶಿವಮೊಗ್ಗ ನಗರದ ಪ್ರಖ್ಯಾತ ಕಾಲೇಜುಗಳ ಆವರಣದಲ್ಲಿ ಗಾಂಜಾ ಸಲೀಸಾಗಿ ಮಾರಾಟವಾಗುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಗಾಂಜಾದಂತಹ ಮಾದಕ ವಸ್ತು ಸೇವನೆಯಿಂದ ಮನುಷ್ಯ ತನ್ನ ಮಾನಸಿಕ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿರುವುದರಿಂದ ಅಫರಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಅಮಾಯಕರ ಅಸಬಲರ ಬದುಕಿಗೆ ಛಡಿಯೇಟು ನೀಡುತ್ತಿದೆ.
ಹಿಡಿಯುತ್ತಿರುವ, ದಾಳಿನಡೆಸುತ್ತಿರುವ ಪೊಲೀಸರ ಕಾರ್ಯವನ್ನು ಸಾರ್ವಜನಿಕರ ಪರವಾಗಿ ಶ್ಲಾಘಿಸುತ್ತಲೇ, ಮಿತಿಮೀರಿದ ಗಾಂಜಾ ಹಾವಳಿಯನ್ನು ಸಂಪೂರ್ಣವಾಗಿ ಸದೆಬಡೆಯಲು ತುಂಗಾ ತರಂಗ ವಿನಂತಿಸುತ್ತಿದೆ. ಹಿರಿಯ ಅಧಿಕಾರಿಗಳು ಇತ್ತ ಹೆಚ್ಚು ಗಮನ ನೀಡುವ ಅಗತ್ಯವಂತೂ ಇದೆ.