ಶಿವಮೊಗ್ಗ: ಮಾನ ಮುಚ್ಚುವ ಬಟ್ಟೆಗೂ ತೆರಿಗೆ ಹೆಚ್ಚಳ ಮಾಡುವುದು ಯಾವ ನ್ಯಾಯ? ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಆರ್. ವಾಸುದೇವ್ ಹಾಗೂ ಜವಳಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ ಮೂರ್ತಿ ಪ್ರಶ್ನಿಸಿದರು.
ಅವರು ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜವಳಿ ಮೇಲೆ ಜಿ.ಎಸ್.ಟಿ. ಹೆಚ್ಚಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘ ಹಾಗೂ ಜವಳಿ ವರ್ತಕರ ಸಂಘ ಅಂಚೆ ಕಾರ್ಡ್ ಚಳವಳಿ ಹಮ್ಮಿಕೊಂಡಿದ್ದು, ಈ ಚಳವಳಿಗೆ ಸಾರ್ವಜನಿಕರ ಸಹಕಾರ ಇದೆ ಎಂದು ತಿಳಿಸಿದರು.
ಜನವರಿ 1, 2022 ರಿಂದ ಕೇಂದ್ರ ಸರ್ಕಾರ ಜವಳಿ ಮೇಲೆ ಶೇ. 12 ರಷ್ಟು ಜಿ.ಎಸ್.ಟಿ. ಹೆಚ್ಚಳ ಮಾಡುತ್ತಿದೆ. ಈಗ ಶೇ. 5 ರಷ್ಟು ಜಿ.ಎಸ್.ಟಿ. ಇದ್ದು, ಅದು ಶೇ. 7 ರಷ್ಟು ಹೆಚ್ಚಳವಾಗುವುದರಿಂದ ವರ್ತಕರಲ್ಲದೇ, ಗ್ರಾಹಕರಿಗೂ ಕೂಡ ತುಂಬಾ ಹೊರೆಯಾಗುತ್ತದೆ ಎಂದರು.
ಈಗಾಗಲೇ ಶೇ. 5 ರಷ್ಟು ತೆರಿಗೆ ಕಟ್ಟಲಾಗದೇ ಅನೇಕ ಜವಳಿ ಅಂಗಡಿಗಳು ಮುಚ್ಚಿವೆ. ಮತ್ತು ಜಿ.ಎಸ್.ಟಿ.ಯಿಂದ ತಪ್ಪಿಸಿಕೊಳ್ಳಲು ಕೆಲವು ವರ್ತಕರು ಕೂಡ ಬೇರೆ ಬೇರೆ ಹಾದಿ ಹಿಡಿಯುವ ಸಾಧ್ಯತೆ ಇದೆ. ಯಾವುದೇ ಸರ್ಕಾರಗಳು ಜನರ ಅತ್ಯಗತ್ಯ ಮತ್ತು ದಿನನಿತ್ಯ ಬಳಕೆಯ ವಸ್ತುಗಳ ಮೇಲೆ ತೆರಿಗೆಯನ್ನು ಹೆಚ್ಚಿಸುವುದು ಸರಿಯಲ್ಲ ಎಂದರು.
ಸರ್ಕಾರ ಜಿ.ಎಸ್.ಟಿ. ಏರಿಸುವುದನ್ನು ಬಿಟ್ಟು ತೆರಿಗೆ ಸೋರಿಕೆ ನಿಲ್ಲಿಸಲಿ. ಇದರಿಂದ ದೇಶಕ್ಕೂ ಆದಾಯ ಹೆಚ್ಚಳವಾಗುತ್ತದೆ. ಅದನ್ನು ಬಿಟ್ಟು ಮಾನ ಮುಚ್ಚುವ ಬಟ್ಟೆಗೂ ತೆರಿಗೆ ಹೆಚ್ಚಳ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ಜವಳಿ ವರ್ತಕರ ಸಂಘದ ಅಧ್ಯಕ್ಷ ಟಿ.ಆರ್. ವೆಂಕಟೇಶ್ ಮೂರ್ತಿ ಮಾತನಾಡಿ, ಜವಳಿ ಮೇಲೆ ಜಿ.ಎಸ್.ಟಿ. ಹೆಚ್ಚಿಸುತ್ತಿರುವುದನ್ನು ವಿರೋಧಿಸಿ ಇಡೀ ದೇಶಾದ್ಯಂತ ಈಗಾಗಲೇ ಚಳವಳಿಗಳು ಆರಂಭವಾಗಿವೆ. ಸರ್ಕಾರ ಯಾವುದೇ ತೆರಿಗೆ ಹೆಚ್ಚಿಸಲಿ ಅದು ಜನಸಾಮಾನ್ಯರ ಕಿಸೆಗೆ ಕೈಹಾಕುತ್ತವೆ. ಹಾಗಾಗಿ ಜಿ.ಎಸ್.ಟಿ. ಇಳಿಕೆಗೆ ಆಗ್ರಹಿಸಿ ಎರಡೂ ಸಂಘಟನೆಗಳು ಅಂಚೆ ಕಾರ್ಡ್ ಚಳವಳಿ ಕೈಗೆತ್ತಿಕೊಂಡಿವೆ. ಈಗಾಗಲೇ ನಗರದ ಜವಳಿ ವರ್ತಕರು ಸುಮಾರು ಎರಡು ಸಾವಿರ ಕಾರ್ಡ್ ಗಳನ್ನು ಪೋಸ್ಟ್ ಮಾಡಿ ಸರ್ಕಾರದ ಗಮನಸೆಳೆದಿದ್ದಾರೆ. ಹಾಗೆಯೇ ಜಿಲ್ಲೆಯ ಸುಮಾರು 5 ಸಾವಿರಕ್ಕೂ ಹೆಚ್ಚು ವರ್ತಕರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆಯ ಸಂಕೇತವಾಗಿ ಜವಳಿ ಅಂಗಡಿಗಳಲ್ಲಿ ಪ್ಲೇಕಾರ್ಡ್ ಗಳನ್ನು ಹಾಕಲಾಗುವುದು ಎಂದರು.
ಸಾರ್ವಜನಿಕರಿಗೆ ಇದು ನೇರ ಹೊರೆಯಾಗುವುದರಿಂದ ಪ್ರತಿಯೊಬ್ಬ ಸಾರ್ವಜನಿಕರು ಕನಿಷ್ಟ 10 ಪೋಸ್ಟ್ ಕಾರ್ಡ್ ಗಳನ್ನು ಪ್ರಧಾನಿ ಕಚೇರಿಗೆ ಪೋಸ್ಟ್ ಮಾಡುವ ಮೂಲಕ ನಮಗೆ ಬೆಂಬಲ ನೀಡಬೇಕು. ಸರ್ಕಾರ ಎಚ್ಚೆತ್ತುಕೊಂಡು ತನ್ನ ನಿರ್ಧಾರ ಬದಲಿಸಿ ಈಗಿರುವ ಶೇ. 5 ರಷ್ಟು ಮಾತ್ರ ಜಿ.ಎಸ್.ಟಿ.ಯನ್ನು ಮುಂದುವರೆಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಸುರೇಶ್, ಪ್ರಭಾಕರ್, ಹರೀಶ್, ಸಂತೋಷ್, ಜಿ. ವಿಜಯಪಕುಮಾರ್ ಇದ್ದರು.