ಶಿವಮೊಗ್ಗ:
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಶಿವಮೊಗ್ಗ ನಗರದ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ಅಸಂಪೂರ್ಣವಾಗಿದ್ದು, ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಆರೋಪಿಸಿದ್ದಾರೆ.
ಈ ಕುರಿತಾಗಿ ಹೇಳಿಕೆ ನೀಡಿರುವ ಅವರು, ನಗರದಲ್ಲಿ ಸುಮಾರು 1590 ಮನೆಗಳು 2018 ರ ಮೇ 28 ರಂದೇ ಅನುಮೋದನೆಗೊಂಡಿರುತ್ತವೆ. ಫಲಾನುಭವಿಗಳಿಂದ ಗೃಹ ನಿರ್ಮಾಣಕ್ಕಾಗಿ ಯೋಜನೆಯ ಸೂಚಿತ ಹಣವನ್ನು ಈಗಾಗಲೇ ಡಿಡಿ ರೂಪದಲ್ಲಿ ಪಡೆಯಲಾಗಿದೆ. ಸುಮಾರು 658.38 ಲಕ್ಷ ರೂ. ಸಂಗ್ರಹಿಸಲಾಗಿದೆ. ಟೆಂಡರ್ ಅನುಮೋದನೆ ಕೂಡ ಆಗಿದೆ. ಆದರೆ, ಮೂರು ವರ್ಷಗಳು ಕಳೆದರೂ ಕೂಡ ಯೋಜನೆಯ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಮನೆಗಾಗಿ ಹಣ ಪಾವತಿಸಿರುವ ಫಲಾನುಭವಿಗಳು ಕೂಲಿ ಕಾರ್ಮಿಕರಾಗಿದ್ದು, ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಬಾಡಿಗೆ ಕಟ್ಟುವುದೇ ಕಷ್ಟವಾಗುತ್ತಿದೆ. ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು ಒಟ್ಟು 757 ಮನೆಗಳ ಕಾಮಗಾರಿಯಲ್ಲಿ ಕೇವಲ 343 ಮನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಇನ್ನು 414 ಮನೆಗಳ ಕಾಮಗಾರಿಗಳು ಅಪೂರ್ಣವಾಗಿಯೇ ಉಳಿದಿವೆ ಎಂದು ದೂರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ವಸತಿ ಸಚಿವರು ಎಚ್ಚೆತ್ತುಕೊಂಡು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಮನೆ ನೀಡಬೇಕು ಎಂದು ಯಮುನಾ ರಂಗೇಗೌಡ ಆಗ್ರಹಿಸಿದ್ದಾರೆ