ಶಿವಮೊಗ್ಗ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚಿದ್ದು, ಇದುವರೆಗೂ 79 ಗರ್ಭಿಣಿಯರು ಸೇರಿದಂತೆ 2 ಸಾವಿರಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದು, ಸೋಂಕಿತರ ಪಟ್ಟಿಯಲ್ಲಿ ರಾಜ್ಯದಲ್ಲೇ ಶಿವಮೊಗ್ಗ 14ನೇ ಸ್ಥಾನ ಪಡೆದುಕೊಂಡಿದೆ.
ಡಿಸೆಂಬರ್ 1ರಂದು ಅಂದರೆ ನಾಳೆ ಏಡ್ಸ್ ದಿನದ ನಿಮಿತ್ತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿಯಂತೆ ದೇಶದಲ್ಲೇ ಕರ್ನಾಟಕ ರಾಜ್ಯ 6 ಸ್ಥಾನದಲ್ಲಿದ್ದರೆ, ರಾಜ್ಯದಲ್ಲಿ ಶಿವಮೊಗ್ಗ ೧೪ನೇ ಸ್ಥಾನದಲ್ಲಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 2015-16ರಿಂದ 2021 ರ ಅಕ್ಟೋಬರ್‌ವರೆಗೆ 4,24,017 ಜನರು ಎಚ್‌ಐವಿ ಪರೀಕ್ಷೆ ಮಾಡಿಸಿಕೊಂಡಿದ್ದು, 2,054 ಜನರಿಗೆ ಸೋಂಕು ತಗುಲಿದೆ. 2,21,600 ಗರ್ಭಿಣಿಯರು ಪರೀಕ್ಷೆಗೆ ಒಳಪಟ್ಟಿದ್ದು, 79 ಮಂದಿಗೆ ಸೋಂಕು ತಗುಲಿದೆ. ಇದುವರೆಗೂ 2,089 ಮಂದಿ ಎಚ್‌ಐವಿ ಸೋಂಕಿನಿಂದ ಮೃತಪಟ್ಟಿದ್ದಾರೆ.
6,249 ಮಂದಿ ಎಆರ್‌ಟಿ (ಆಂಟಿ ರೆಟ್ರೋ ವೈರಲ್ ಚಿಕಿತ್ಸೆ) ಕೇಂದ್ರದಲ್ಲಿ ಚಿಕಿತ್ಸೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 3,169 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.131 ಮಕ್ಕಳು ಕೂಡ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಿ.ಸಿಇ.ದಿನೇಶ್ ತಿಳಿಸಿದ್ದಾರೆ.