Site icon TUNGATARANGA

ಶರಣ್ಯ ಸಂಸ್ಥೆಯ ಮಾನವೀಯ ಕಾರ್ಯಕ್ಕೆ ಕೈ ಜೋಡಿಸಿ

ಶಿವಮೊಗ್ಗ,ಟಿ.೩೦:
ಕ್ಯಾನ್ಸರ್, ಸಂಪೂರ್ಣ ಪಾರ್ಶ್ವವಾಯು, ಮೆದುಳಿನ ರಕ್ತಸ್ರಾವದಂತಹ ಕಾಯಿಲೆಗಳಿಗೆ ತುತ್ತಾಗಿ ಯಾವ ಚಿಕಿತ್ಸೆಗೂ ಗುಣಮುಖ ರಾಗದೇ ಬಳಲುತ್ತಿರುವವರಿಗೆ ಆಶ್ರಯ ನೀಡಿ ಅವರ ಅಂತಿಮ ದಿನಗಳನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುವ ಶಿವಮೊಗ್ಗ ಬಳಿಯ ಗಾಜನೂರಿನಲ್ಲಿರುವ ಶರಣ್ಯ ಸಂಸ್ಥೆಯು ಮಾನವೀಯ ಕಾರ್ಯಗಳಿಗೆ ಕೈ ಜೋಡಿಸಿ ಉದಾರ ನೆರವು ನೀಡುವಂತೆ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಿ.ಎಲ್. ಮಂಜುನಾಥ್ ಹಾಗೂ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶ್ರೇಷ್ಟಿ ಇಂದಿಲ್ಲಿ ವಿನಂತಿಸಿದರು.


ಇಂತಹ ಮಾನವೀಯ ನೆಲೆಗಟ್ಟಿನ ಸಂಸ್ಥೆಗಳಲ್ಲಿ ಇದು  ರಾಜ್ಯದಲ್ಲಿಯೇ ಎರಡನೇಯದಾಗಿದೆ. ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಡಿ.ಎಸ್.ಎಲ್. ಟ್ರಸ್ಟ್ ವತಿಯಿಂದ ಗಾಜ ನೂರು ಬಳಿ ರೋಗಿಗಳ ಸೇವೆಗಾಗಿಯೇ ಕಂಕಣಬದ್ಧವಾಗಿರುವ ಶರಣ್ಯ ಸಂಸ್ಥೆಯು ಮತ್ತಷ್ಟು ಸೇವೆ ನೀಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಅವರು ಇಂದು ಮದ್ಯಾಹ್ನ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಡಿ.ಎಲ್. ಮಂಜುನಾಥ್  ಅವರು ಮಾತನಾಡುತ್ತಾ ಡಿ.ಎಸ್.ಎಲ್. ಸಂಸ್ಥೆಯು ೨೦೦೨ರಲ್ಲಿ ಸ್ಥಾಪನೆಗೊಂಡಿತು. ಮೊದ ಮೊದಲು ಕ್ಯಾನ್ಸರ್ ರೋಗಿಗಳಿಗೆ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಗಾಜನೂರಿನ ಅಗ್ರಹಾರದಲ್ಲಿ ಸುಮಾರು ೧೦.೫ ಎಕರೆ ಜಾಗ ಖರೀದಿಸಿ ರೋಗಿಗಳ ಸೇವೆಗಾಗಿಯೇ ಎರಡು ವಾರ್ಡ್ ಗಳನ್ನು ನಿರ್ಮಿಸಿ ಅತಿ ಹೆಚ್ಚು ಉಲ್ಬಣಿಸಿದ ರೋಗಿಗಳನ್ನು ನೋಡಿಕೊಳ್ಳುವ, ಆಶ್ರಯ ನೀಡುವ, ಆರೈಕೆ ಮಾಡುವ ಜವಾಬ್ದಾರಿ ಯನ್ನು ಹೊತ್ತಿದೆ. ಮಾನವೀಯ ಹಿನ್ನಲೆಯಲ್ಲಿ ಶರಣ್ಯ ಸಂಸ್ಥೆ ಈ ಎಲ್ಲಾ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ದಾನಿಗಳ ನೆರವಿನಿಂದ ನಡೆಯುತ್ತಿದೆ. ಪ್ರತಿತಿಂಗಳು ಸುಮಾರು ೩ ಲಕ್ಷ ರೂ. ಖರ್ಚು ಬರುತ್ತಿದೆ. ಇದುವರೆಗೂ ಹೇಗೋ ಇದನ್ನು ಹೊಂದಿಸಿಕೊಂಡು ಹೋಗುತ್ತಿದ್ದೇವೆ. ರೋಗಿಗಳ ಶುಶ್ರೂಷೆ ಜೊತೆಗೆ ಇದನ್ನು ಮತ್ತಷ್ಟು ಅಭಿವೃದ್ದಿಪಡಿಸಬೇಕಾಗಿದೆ. ಈಗ ಇನ್ನೂ ೧೬ ರೋಗಿಗಳು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಹೊಸ ವಾರ್ಡ್ ವೊಂದನ್ನು ನಿರ್ಮಿಸಲಾಗುತ್ತಿದೆ ಅದರ ಖರ್ಚು ಕೂಡ ನಿಭಾಯಿಸಬೇಕಾಗಿದೆ. ಆದ್ದರಿಂದ ದಾನಿಗಳು ಈ ಸಂಸ್ಥೆಗೆ ಹೆಚ್ಚು ಹೆಚ್ಚು ನೆರವು ನೀಡಬೇಕು ಎಂದರು.


ಔಷಧಿ ವನ:


ಶರಣ್ಯ ಸಂಸ್ಥೆ ವತಿಯಿಂದ ಸುಮಾರು ಒಂದು ಎಕರೆಗೂ ಹೆಚ್ಚಿನ ಜಾಗದಲ್ಲಿ ಔಷಧಿ ವನ ನಿರ್ಮಿಸಲಾಗಿದೆ. ಆಲ, ಸರ್ಪವರ್ಣಿ, ಬಿಳಿ ಎಕ್ಕೆ, ಅಶ್ವತ್ಥ, ಅರಳಿ, ಬನ್ನಿ, ಗರಿಕೆ, ರಂಜಲು ಹೀಗೆ ಹಲವು ಬಗೆಯ ಸಸ್ಯ, ಗಿಡಗಳನ್ನು ಬೆಳೆಸಲಾಗಿದ್ದು, ೧೨ ರಾಶಿ, ೯ ಗ್ರಹ, ೨೭ ನಕ್ಷತ್ರಗಳಿಗೆ ಅನುಗುಣವಾಗಿ ಯಾವ ರಾಶಿಯವರಿಗೆ ಯಾವ ಔಷಧಿ ಗಿಡ ಎಂಬುದನ್ನು ಕೂಡ ಸೂಚಿಸಲಾಗಿದೆ. ಈ ಔಷಧಿಯ ವನದಲ್ಲಿ ಕುಳಿತರೆ ಸಾಕು, ಒಂದು ವಿಶೇಷ ಶಕ್ತಿ ಉಂಟಾಗುತ್ತದೆ. ಪರಿಸರವೂ ಕೂಡ ಸ್ವಚ್ಛವಾಗಿರುತ್ತದೆ. ಈ ಅಮೂಲ್ಯ ಸಸ್ಯಗಳನ್ನು ನಾವು ವಿವಿಧೆಡೆಯಿಂದ ತಂದು ಬೆಳೆಸಿದ್ದೇವೆ ಎಂದು ಹೇಳಿದರು.

ನೆರವಿಗೆ ಮನವಿ
ದಾನಿಗಳು ತಮ್ಮ ದೇಣಿಗೆಯನ್ನು ಡಿಎಸ್‌ಎಲ್ ಟ್ರಸ್ಟ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ನಂ. 095431043000018, ಐ.ಎಫ್.ಎಸ್.ಸಿ. ಕೋಡ್ UBIN089543, ಲಕ್ಷ್ಮಿ ವಿಲಾಸ್ ಬ್ಯಾಂಕ್ ನಂ 067260000000750, ಐಎಫ್ ಎಸ್ ಸಿ ಕೋಡ್ DBSS0IN0672 ಗೆಸಂದಾಯ ಮಾಡಬಹುದು. ಮತ್ತು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9945776583ಗೆ ಸಂಪರ್ಕಿಸುವಂತೆ ಕೋರಿದರು.


ಒಬ್ಬ ರೋಗಿ ಯಾವ ಕಾರಣಕ್ಕೂ ಗುಣವಾಗುವುದಿಲ್ಲ ಎಂದು ವೈದ್ಯರು ತಿಳಿಸಿದ ಮೇಲೆ ಅಂತಹ ರೋಗಿಗೆ ನಿರಂತರವಾದ ವೈದ್ಯಕೀಯ ಆರೈಕೆ ಅವರು ಬದುಕಿರವ ತನಕ ಬೇಕಾಗುತ್ತದೆ. ಮತ್ತು ಅವರನ್ನು ಮನೆಗಳಲ್ಲಿ ನೋಡಿಕೊಳ್ಳುವುದು ಕಷ್ಟವಾಗುತ್ತದೆ. ರೋಗಿಯ ಕುಟುಂಬದವರಿಗೂ ಸಾಂತ್ವನ ನೀಡುವ ಪರಿಸ್ಥಿತಿ ಬರುತ್ತದೆ. ಈ ಸೇವೆ ಬಡವ, ಬಲ್ಲಿದ, ಜಾತಿ, ಧರ್ಮಗಳನ್ನು ಮೀರಿ ನಿಂತಿದೆ. ಹಾಗಾಗಿ ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮುಖ್ಯ ಎನ್ನುವ ಹಿನ್ನಲೆಯಲ್ಲಿ ಈ ಸಂಸ್ಥೆ ಒಂದು ಅದ್ಭುತ ಕೆಲಸ ಮಾಡುತ್ತಿದೆ ಎಂದರು.


ಸಂಸ್ಥೆಯ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣಶೆಟ್ಟಿ ಮಾತನಾಡಿ, ಇಂತಹ ಮಾನವೀಯ ಅಂತಃಕರಣದ ಸಂಸ್ಥೆಯಲ್ಲಿ ಹಲವರು ಕೆಲಸ ಮಾಡುತ್ತಿದ್ದಾರೆ. ಇವರ ಸೇವೆ ಅಸಾಧಾರಣವಾದುದು ಎಂದು ಬಣ್ಣಿಸಿದರಲ್ಲದೇ ಸತ್ಯನಾರಾಯಣ ಉಷಾ, ಶಾರದಾ, ಇಂದಿರಾ, ಪ್ರೇಮಾ, ಲಕ್ಷ್ಮಿ, ರಮೇಶ್, ಮುಸ್ತಾಫ್, ಟಿ.ಕೆ. ರಾಮನಾಥ್, ಜಯಶ್ರೀ ಮುಂತಾದ ಸಿಬ್ಬಂದಿಗೆ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶರಣ್ಯ ಸಂಸ್ಥೆಯ ಟ್ರಸ್ಟಿಗಳಾದ ರಾಮಚಂದ್ರ ಗುಣಾರಿ, ಡಿ.ಎಂ.ಅರ್ಜುನ್, ಮಂಜುನಾಥ್ ಉದಯ ಕುಮಾರ್, ಸಂದೀಪ್, ಟಿ.ಆರ್. ವೆಂಕಟೇಶ್ ಶ್ರೇಷ್ಠಿ, ಸೆಂಥಿಲ್ ಹಾಗೂ ಸಿಬ್ಬಂದಿಗಳು ಹಲವರಿದ್ದರು.

Exit mobile version