Site icon TUNGATARANGA

ಶಿವಮೊಗ್ಗ ಕೃಷಿ ವಿವಿ ಘಟಿಕೋತ್ಸವದಲ್ಲಿ ಹಬ್ಬದ ವಾತಾವರಣ, ಸಮಗ್ರ ಸುದ್ದಿ ಓದಿ…


ಶಿವಮೊಗ್ಗ, ನ.೨೫:
ಶಿವಮೊಗ್ಗದ ಕೆಳದಿ ಶಿವಪ್ಪನಾಯ್ಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಇಂದು ನಡೆದ ೬ನೇ ಘಟಿಕೋತ್ಸವದಲ್ಲಿ ಪದವಿ, ಡಾಕ್ಟರೇಟ್ ಪಡೆದ ವಿದ್ಯಾರ್ಥಿಗಳದು ಸಂಭ್ರಮವಾದರೆ ಇಡೀ ವಿವಿ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕೃಷಿ ವಿಶ್ವ ವಿದ್ಯಾಲಯದ ೬ನೇ ಘಟಿಕೋತ್ಸವವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಆರಂಭಿಸಿದರು. ಸಮಯ ಹಾಗೂ ಶಿಸ್ತು ಬದ್ಧವಾಗಿ, ವ್ಯವಸ್ಥಿತವಾಗಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ೩೫ ಪದಕಗಳನ್ನು ೨೮ ವಿದ್ಯಾರ್ಥಿಗಳು ಪಡೆದು ಸಂಭ್ರಮಿಸಿದರು. ಘಟಿಕೋತ್ಸವದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪಮಹಾನಿರ್ದೇಶಕ ಡಾ.ಆರ್.ಸಿ.ಆಗರ್‌ವಾಲ್ ಘಟಿಕೋತ್ಸವದ ಬಾಷಣ ಮಾಡಿ ವಿದ್ಯಾರ್ಥಿಗಳ ಮುಂದಿನ ಬದುಕು ಕೇವಲ ತಮಗೆ ಹಾಗೂ ತಮ್ಮ ಮನೆ ಸೀಮಿತವಾಗದೇ ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ಕಾಣಿಕೆಯಾಗಬೇಕೆಂದು ವಿವರಿಸಿದರು.


ಇದೇ ಸಮಾರಂಭದಲ್ಲಿ ಮೊಟ್ಟ ಮೊದಲಬಾರಿಗೆ ಶಿವಮೊಗ್ಗ ವಿಶ್ವವಿದ್ಯಾಲಯ ಕೊಡಮಾಡಿರುವ ಪ್ರಪ್ರಥಮ ಗೌರವ ಡಾಕ್ಟರೇಟ್ ಪದವಿಯನ್ನು ಹೈದಾರಬಾದ್ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಅವರಿಗೆ ಕೊಡಲಾಯಿತು. ವಿವಿ ಕುಲಪತಿ ಡಾ.ಎಂ.ಕೆ. ನಾಯ್ಕ್ ಸ್ವಾಗತ ಹಾಗೂ ಘಟಿಕೋತ್ಸವದ ಮಾಹಿತಿ ನೀಡಿದರು.
ಘಟಿಕೋತ್ಸವ ಸಮಾರಂಭದಲ್ಲಿನ ವಿಶ್ವ ವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸದ್ಯರುಗಳು, ಶೈಕ್ಷಣಿಕ ಪರಿಷತ್ತಿನ ಸದಸ್ಯರುಗಳು, ವಿಶ್ರಾಂತ ಕುಲಪತಿಗಳು, ಡೀನ್‌ಗಳು, ಕುವೆಂಪು ವಿವಿ ಕುಲಪತಿ ಡಾ.ವೀರಭದ್ರಪ್ಪ ಸೇರಿದಂತೆ ಆಹ್ವಾನಿತ ಗಣ್ಯರು ಹಾಜರಿದ್ದರು.
ಈ ಘಟಿಕೋತ್ಸವದಲ್ಲಿ ಸ್ನಾತಕ ಪದವಿಯಲ್ಲಿ ೨೩೮ ವಿದ್ಯಾರ್ಥಿಗಳಿಗೆ (ಬಿ.ಎಸ್ಸಿ.ಕೃಷಿ, ತೋಟಗಾರಿಕೆ ಮತ್ತು ಅರಣ್ಯ), ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ ೧೦೫ ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ ಹಾಗೂ ೧೫ ಪಿಹೆಚ್.ಡಿ.ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ ೯ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ೧೫ ಚಿನ್ನದ ಪದಕಗಳನ್ನು, ೧೪ ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ ೧೫ ಚಿನ್ನದ ಪದಕಗಳನ್ನು ಮತ್ತು ೫ ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ ೫ ಚಿನ್ನದ ಪದಕಗಳನ್ನು, ಒಟ್ಟಾರೆ ೩೫ ಚಿನ್ನದ ಪದಕಗಳನ್ನು ೨೮ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
೨೦೨೦-೨೧ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಐ.ಸಿ.ಎ.ಆರ್. ಜೆ.ಆರ್.ಎಫ್. ಪರೀಕ್ಷೆಯಲ್ಲಿ ನಮ್ಮ ವಿಶ್ವವಿದ್ಯಾಲಯದ ಒಟ್ಟು ೧೪ ವಿದ್ಯಾರ್ಥಿ ಗಳು ರ‍್ಯಾಂಕ್ ಪಡೆದಿದ್ದಾರೆ ಹಾಗೂ ಅಖಿಲ ಭಾರತ ಐ.ಸಿ.ಎ.ಆರ್. ಸ್ಪರ್ಧಾ ತ್ಮಕ ಪರೀಕ್ಷೆಯಲ್ಲಿ ೨ ವಿದ್ಯಾರ್ಥಿಗಳು ಎಸ್.ಆರ್.ಎಫ್.ಗಳಾಗಿ ಆಯ್ಕೆಯಾಗಿ ರುತ್ತಾರೆ ಹಾಗೂ ೧೫ ವಿದ್ಯಾರ್ಥಿಗಳು ಎನ್.ಟಿ.ಎಸ್. (ಸ್ನಾತಕೋತ್ತರ) ಪ್ರವೇಶ ಪಡೆದುಕೊಂಡಿರುತ್ತಾರೆ. ೨೦೨೦-೨೧ರ ಸಾಲಿನಲ್ಲಿ ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಒಟ್ಟು ೩೯೯ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಜೊತೆಗೆ ಶಿವಮೊಗ್ಗ, ಮೂಡಿಗೆರೆ ಮತ್ತು ಪೊನ್ನಂಪೇಟೆ ಕಾಲೇಜುಗಳಲ್ಲಿ ೧೨೨ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಹಾಗೂ ಕತ್ತಲಗೆರೆ ಮತ್ತು ಬ್ರಹ್ಮಾವರದಲ್ಲಿ ೪೫ ವಿದ್ಯಾರ್ಥಿಗಳು ಡಿಪ್ಲೊಮಾ ಕೃಷಿಗೆ ಪ್ರವೇಶ ಪಡೆದಿರುತ್ತಾರೆ. ಅಲ್ಲದೆ ಇರುವಕ್ಕಿಯ ವಿಶ್ವವಿದ್ಯಾಲಯದ ಆವರಣದಲ್ಲಿ ೫೭ ವಿದ್ಯಾರ್ಥಿಗಳಿಗೆ ಕೃಷಿ ಪದವಿ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಚಿನ್ನದ ಪದಕ ಪುರಸ್ಕೃತರು

ಅಂಬರೀಶ್ ಎಸ್., ಅರುಣ ಕೆ., ಅಮೋಘ ವರ್ಷ ಚಿತ್ತರಗಿ, ವಿಪಿ ದಿವ್ಯ, ವಿವೇಕ್ ಎಂ.ಸಿ., ಸುಮಿತ್ರ ಬಿ.ಎಸ್., ಎಂ.ಇ.ಕಾವ್ಯ, ಪೂಜಾ ಪಿ.ಎಸ್., ಶ್ರೇಷ್ಮಾ ಸಿ.ಕೆ., ಸಿಂಚನಾ ಕೆ.ಎಸ್, ಸಿ.ಎನ್.ನಿಧಿ, ಸಿಂಧೂ, ನಿತೀನ್, ಸಚಿನ್ ಎನ್.ಹೆಳವರ, ರಾಣಿ ಜಯದುರ್ಗಾನಾಯಕ್, ಎಂ.ಎಲ್.ಶಿಲ್ಪಾ, ಅಶ್ವತ್, ಅಕ್ಷತಾ ಹೆಚ್.ಎಲ್, ಶ್ವೇತಾ, ಕ್ಷಮಾ ಕೋರ್ಪಡೆ, ರಮೇಶ್, ವನಿತಾ, ಪಾವನ ಡಿಸಿಂಗ್, ಸಂದೀಪ್ ಅವರುಗಳು ಪಿಹೆಚ್‌ಡಿ ಹಾಗೂ ಚಿನ್ನದ ಪದಕ ಭಾಜಿತರಾಗಿದ್ದು, ಬಿಎಸ್‌ಸಿಯಲ್ಲಿ ಎನ್.ಸ್ಫೂರ್ತಿ ೪ ಚಿನ್ನದ ಪದಕ ಪಡೆದಿದ್ದಾರೆ.

ಪದಕ ವಿಜೇತರ ಮನದಾಳದ ಮಾತು…

ಕೂಲಿ ಮಾಡುತ್ತಿರುವ ತಂದೆ-ತಾಯಿಯರ ಮಗನಾಗಿ ಕೃಷಿ ವಿವಿಯಲ್ಲಿ ಚಿನ್ನದ ಪದಗಳನ್ನು ಪಡೆದಿರುವುದಕ್ಕೆ ಚಿಂತಾಮಣಿ ತಾಲೂಕಿನ ಪಾಲೇನಹಳ್ಳಿಯ ಎಸ್.ಅಂಬರೀಶ್ ಸಂತಸ ವ್ಯಕ್ತಪಡಿಸಿದ್ದು, ಹೀಗಿತ್ತು. ಕಷ್ಟದ ಬದುಕನ್ನು ಕಂಡಿದ್ದೇನೆ. ಇಲ್ಲಿ ಡಾ.ಸಿ.ಎನ್.ಕಲ್ಲೇಶ್ವರಿ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ವಿಶ್ವ ವಿದ್ಯಾಲಯದ ಚಿನ್ನದ ಪದಕ ಹಾಗೂ ಡಾ.ಜಿ.ಪಿ.ಚನ್ನಬಸವಣ್ಣ ಚಿನ್ನದ ಪದಕ ಪಡೆದಿರವುದು ಅತ್ಯಂತ ಆನಂದದ ವಿಷಯ. ತಂದೆ-ತಾಯಿಯರ ಹಾರೈಕೆಯು ಮೊದಲ ಹಂತದಲ್ಲಿ ಈಡೇರಿದೆ. ಇದೇ ವಿವಿಯಲ್ಲಿ ಗುತ್ತಿಗೆ ಆಧಾರದ ಕೆಲಸ ಮಾಡುತ್ತಿದ್ದೇನೆ. ಕೃಷಿ ಸಂಶೋಧನೆ ಮಾಡುವ ಯೋಚನೆ ಇದೆ.
-ಅಂಬರೀಷ್ ಎಸ್.

ಸೈಕಲ್ ಶಾಪ್ ಇಟ್ಟುಕೊಂಡು ನಮ್ಮನ್ನು ಸಾಕುತ್ತಿರುವ ನಮ್ಮ ತಂದೆಯ ಆಶೀರ್ವಾದದ ಫಲವಾಗಿ ಕೃಷಿ ವಿವಿಯ ಚಿನ್ನದ ಪದಕಗಳೆರಡನ್ನು ಪಡೆದಿರುವ ನನಗೆ ತುಂಬಾ ಸಂತೋಷವಾಗುತ್ತಿದೆ. ಚಿಕ್ಕಮಗಳೂರು ತಾಲೂಕು ತರೀಕೆರೆ ಬಳಿಯ ಬಾವಿಕೆರೆ ಬಳಿಯ ಸಿದ್ದೇಶ್ವರ ಎಂಬ ಚಿಕ್ಕಹಳ್ಳಿಯಿಂದ ಬೆಳೆದು ಬಂದ ನನಗೆ ಕೃಷಿ ವಿವಿ ಭರವಸೆಯ ಬಾಗಿಲು ತೆರೆದಿದೆ. ಪ್ರಸ್ತುತ ಇದೇ ವಿಷಯಾಧರಿತವಾಗಿ ಶಿವಮೊಗ್ಗ ಜಿಪಂನಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡತ್ತಿದ್ದೇನೆ.
-ಭವ್ಯ ವಿ.ಪಿ

ಬಾಗಲಕೋಟೆ ಬಳಿಯ ಬನಹಟ್ಟಿ ನಿವಾಸಿಯಾದ ನಾನು ಎಂಎಸ್ಸಿಯಲ್ಲಿ ಟಾಟಾ ಕಾಫಿ ಲಿಮಿಟೆಡ್ ಚಿನ್ನದ ಪದಕ ಹಾಗೂ ಕೃಷಿ ವಿವಿ ಚಿನ್ನದ ಪದಕ ಪಡೆದಿರುವುದು ಸಂತಸವೆನಿಸುತ್ತಿದೆ. ರಾಷ್ಟ್ರೀಯ ಬಾಕ್ಸರ್ ಪಟುವಾಗಿರುವ ನನಗೆ ಇದೇ ಕೃಷಿ ಸಂಶೋಧನೆಯಲ್ಲಿ ಮುಂದುವರೆಯುವ ಆಸೆಇದೆ.
-ಕ್ಷಮಾ ಕೋರ್ಪಡೆ

ಬಿಎಸ್ಸಿಯಲ್ಲಿ ನಾಲ್ಕು ಚಿನ್ನದ ಪದಕ ಪಡೆದಿರುವುದು ಅತ್ಯಂತ ಹರುಷ ನೀಡಿದೆ. ಶಿಕ್ಷಕರ ಮಗಳಾದ ನನಗೆ ಮೆಡಿಕಲ್ ಬದಲಿಗೆ ಸಿಕ್ಕ ಕೃಷಿ ವಿಜ್ಞಾನದ ಕಲಿಕೆಗೆ ತಂದೆ ತಾಯಿಯರ ಪ್ರೇರಣೆ ಕಾರಣ. ಮಂಗಳೂರು ಕೆಮಿಕಲ್ಸ್, ಕಂಚಾನ ಮಾರಮ್ಮ, ಮಂಜುಳಾ ಹರೀಶ್, ಲೆಫ್ಟಿನೆಂಟ್ ಪ್ರಭಾಕರ ರೆಡ್ಡಿ ಹೆಸರಿನ ನಾಲ್ಕು ಚಿನ್ನದ ಪದಕಗಳು ಬಂದಿವೆ. ಮುಂದೆ ಯುಪಿಎಸ್‌ಸಿ ಓದುವ ಕನಸ್ಸಿದೆ.
-ಸ್ಫೂರ್ತಿ ಎನ್.

ಬಾಗಲಕೋಟೆ ಬಳಿಯ ಬನಹಟ್ಟಿ ನಿವಾಸಿಯಾದ ನಾನು ಎಂಎಸ್ಸಿಯಲ್ಲಿ ಟಾಟಾ ಕಾಫಿ ಲಿಮಿಟೆಡ್ ಚಿನ್ನದ ಪದಕ ಹಾಗೂ ಕೃಷಿ ವಿವಿ ಚಿನ್ನದ ಪದಕ ಪಡೆದಿರುವುದು ಸಂತಸವೆನಿಸುತ್ತಿದೆ. ರಾಷ್ಟ್ರೀಯ ಬಾಕ್ಸರ್ ಪಟುವಾಗಿರುವ ನನಗೆ ಇದೇ ಕೃಷಿ ಸಂಶೋಧನೆಯಲ್ಲಿ ಮುಂದುವರೆಯುವ ಆಸೆಇದೆ.
-ಕ್ಷಮಾ ಕೋರ್ಪಡೆ

ಬಿಎಸ್ಸಿಯಲ್ಲಿ ನಾಲ್ಕು ಚಿನ್ನದ ಪದಕ ಪಡೆದಿರುವುದು ಅತ್ಯಂತ ಹರುಷ ನೀಡಿದೆ. ಶಿಕ್ಷಕರ ಮಗಳಾದ ನನಗೆ ಮೆಡಿಕಲ್ ಬದಲಿಗೆ ಸಿಕ್ಕ ಕೃಷಿ ವಿಜ್ಞಾನದ ಕಲಿಕೆಗೆ ತಂದೆ ತಾಯಿಯರ ಪ್ರೇರಣೆ ಕಾರಣ. ಮಂಗಳೂರು ಕೆಮಿಕಲ್ಸ್, ಕಂಚಾನ ಮಾರಮ್ಮ, ಮಂಜುಳಾ ಹರೀಶ್, ಲೆಫ್ಟಿನೆಂಟ್ ಪ್ರಭಾಕರ ರೆಡ್ಡಿ ಹೆಸರಿನ ನಾಲ್ಕು ಚಿನ್ನದ ಪದಕಗಳು ಬಂದಿವೆ. ಮುಂದೆ ಯುಪಿಎಸ್‌ಸಿ ಓದುವ ಕನಸ್ಸಿದೆ.
-ಸ್ಫೂರ್ತಿ ಎನ್.

Exit mobile version