ಶಿವಮೊಗ್ಗ, ನ.೨೫:
ಪೌಷ್ಠಿಕಾಂಶಯುಕ್ತ ಹಾಗೂ ಹಸಿವು ಮುಕ್ತ ರಾಷ್ಟ್ರನಿರ್ಮಾಣ ಇಂದಿನ ತುರ್ತು ಅಗತ್ಯ ಇದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಪೌಷ್ಠಿಕಾಂಶಯುಕ್ತ ಆಹಾರ ಲಭಿಸಬೇಕು. ದೇಶದಲ್ಲಿನ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸುವಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಜಾಗತಿಕವಾಗಿ ದೇಶವನ್ನು ಗುರುತಿಸಿಕೊಳ್ಳುವ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದ ಅವರು ಈ ವಿಷಯವನ್ನು ಎಲ್ಲರೂ ಸವಾಲಾಗಿ ಸ್ವೀಕರಿಸಬೇಕು ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾ ನಿರ್ದೇಶಕ ಡಾ|| ಆರ್.ಸಿ.ಅಗರ್ವಾಲ್ ಹೇಳಿದರು.
ದೇಶದಲ್ಲಿ ಲಭಿಸುತ್ತಿರುವ ನೀರಿನಲ್ಲಿ ಶೇ.೨೫ರಷ್ಟು ನೀರನ್ನು ಮಾತ್ರ ಬಳಸಲಾಗುತ್ತಿದ್ದು, ಶೇ.೭೫ರಷ್ಟು ನೀರನ್ನು ವ್ಯರ್ಥವಾಗಿ ಸಾಗರ ಸಮುದ್ರಗಳಿಗೆ ಹರಿಸಲಾಗುತ್ತಿದೆ. ಈ ನೀರನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಹಾಗೂ ಇಳುವರಿಯನ್ನು ಪಡೆದು, ಆಹಾರೋತ್ಪಾದನೆಯಲ್ಲಿ ಹಾಗೂ ಆಹಾರ ಸಂಸ್ಕರಣೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಬೇಕು. ಬಹುಸಂಖ್ಯೆಯ ಜನರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ವಿಮುಖರಾಗಿರುವ ಯುವಕರು ಕೃಷಿ ಕ್ಷೇತ್ರದಲ್ಲಿನ ಸಮಸ್ಯೆ ಸವಾಲುಗಳನ್ನು ಎದುರಿಸಿ, ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಬೇಕು. ಅಲ್ಲದೇ ತಂತ್ರಜ್ಞಾನದ ಅಳವಡಿಕೆಯಿಲ್ಲದೇ ಕೃಷಿಯಲ್ಲಿ ನಿರೀಕ್ಷಿತ ಪ್ರಗತಿ ಕಷ್ಟಸಾಧ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಆವಿಷ್ಕಾರಗೊಂಡಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದುವರೆಯಬೇಕು ಎಂದರು.
ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತಂದಿರುವ ಹೊಸ ಶಿಕ್ಷಣ ನೀತಿಯನ್ನು ದೇಶದ ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳಬೇಕು. ಈ ಶಿಕ್ಷಣ ನೀತಿಯನ್ನು ಬೈಬಲ್ನಂತೆ ಜತನದಿಂದ ಕಾಪಾಡಿಕೊಳ್ಳಬೇಕಲ್ಲದೆ ಅಧ್ಯಯನ ಮಾಡಬೇಕು. ಈ ನೀತಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇದರಿಂದಾಗಿ ಯುವಸಮೂಹಕ್ಕೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿದೆ ಎಂದರು.