Site icon TUNGATARANGA

ಶಿವಮೊಗ್ಗದಲ್ಲಿ ಇಂದು ಹಾಗೂ ನಾಳೆ ಏಸೂರ ಕೊಟ್ಟರು ಈಸೂರ ಕೊಡೆವು ನಾಟಕ.., ತೋರಿಸಿ!


ಈಸೂರು.. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜರಾಮರವಾಗಿರುವ ಹೆಸರು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವಿರುವವರಿಗೆ ಈ ಹೆಸರೇ ಮೈ ರೋಮಾಂಚನ ಗೊಳಿಸುತ್ತದೆ. ದೇಶ ಭಕ್ತಿಯ ಹಿರಿಮೆಯನ್ನು ಎತ್ತಿ ಹಿಡಿದ ಈ ಪುಟ್ಟ ಊರು ಶಿವಮೊಗ್ಗ ಜಿಲ್ಲೆಯಲ್ಲಿರುವುದೇ ಹೆಮ್ಮೆ. ಇಂತಹ ಹಿರಿಮೆ- ಗರಿಮೆಯನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೂ ರವಾನಿಸಬೇಕಿದೆ. ಈ ನಿಟ್ಟಿನಲ್ಲಿ ರೂಪುಗೊಂಡಿರುವ ನಾಟಕವೇ ಏಸೂರ ಕೊಟ್ಟರು ಈಸೂರ ಕೊಡೆವು.


ಆಧುನಿಕ ಜಗತ್ತಿನಲ್ಲಿ ಮನೋರಂಜನೆಯ ಪರಿಕಲ್ಪನೆಯೇ ಬದಲಾಗಿದೆ. ಸಾರ್ಟ್ ಫೋನ್‌ಗಳು ಅಂಗೈಯಲ್ಲೇ ಜಗತ್ತನ್ನು ಅನಾವರಣಗೊಳಿಸಿವೆ. ಮಕ್ಕಳ ಕೈಗೂ ಸುಲಭವಾಗಿ ಸಾರ್ಟ್ ಫೋನ್‌ಗಳು ಎಟುಕುತ್ತಿವೆ. ಮೊಬೈಲ್ ಎಂಬ ಮಾಯಾಂಗನೆ ಮನಸ್ಸನ್ನು ಆವರಿಸಿ ಬಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ನಾಟಕ ಮಾಡುವವರು ಮತ್ತು ನೋಡುವವರು ಇದ್ದಾರೆಯೇ? ಎಂಬ ಪ್ರಶ್ನೆ ಕಾಡುವುದು ಸಹಜ.


ಮಲೆನಾಡಿನ ಮಣ್ಣಲ್ಲಿ ಬಲವಾಗಿ ಬೇರೂರಿರುವ ಹವ್ಯಾಸಿ ನಾಟಕದ ಪ್ರಕಾರ ತನ್ನ ಚಲನಶೀಲತೆಯ ಮೂಲಕ ಈ ಪ್ರಶ್ನೆಗೆ ಉತ್ತರ ನೀಡುತ್ತಲೇ ಬಂದಿದೆ. ಸಾಂಸ್ಕೃತಿಕ ನಗರಿಯ ಹಿರಿಮೆಯಾಗಿರುವ ಡಾ. ಸಾಸ್ವೆಹಳ್ಳಿ ಸತೀಶ್ ಅಂತಹ ರಂಗಕರ್ಮಿಗಳು ಹಾಗೂ ರಂಗಾಸಕ್ತರ ಕ್ರಿಯಾಶೀಲತೆಯಿಂದಾಗಿ ರಂಗಭೂಮಿ ಚಲನಶೀಲತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ.
ಕಷ್ಟ- ನಷ್ಟ, ನೋವು- ನಲಿವು, ಸೋಲು- ಗೆಲುವಿನ ನಡುವೆಯೂ ರಂಗಭೂ ಮಿಯ ಆಸಕ್ತಿಯನ್ನು ಸತೀಶ್ ಕಾಪಿಟ್ಟುಕೊಂಡಿದ್ದಾರೆ. ಇದರ ಭಾಗವಾಗಿ ಈಸೂರಿನ ಸ್ವಾತಂತ್ರ್ಯ ಹೋರಾಟದ ನೈಜ ಘಟನೆಯನ್ನು ತಿಳಿಸುವ ಉದ್ದೇಶದಿಂದ ಏಸೂರ ಕೊಟ್ಟರು ಈಸೂರ ಕೊಡೆವು ಎಂಬ ನಾಟಕ ನಿರ್ದೇಶಿಸಿದ್ದಾರೆ.


ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಅಂತಿಮ ಘಟ್ಟ. ಈ ಹೋರಾಟವೇ ರೋಮಾಂಚನವನ್ನು ಉಂಟು ಮಾಡುತ್ತದೆ. ಈ ಅಂತಿಮ ಹೋರಾಟದಲ್ಲಿ ಈಸೂರು ಎಂಬ ಪುಟ್ಟ ಊರಿಗೆ ಊರೇ ತೊಡಗಿಸಿಕೊಂಡಿತು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಳವಳಿಯ ಕಾವು ತೀವ್ರವಾಗುವಂತೆ ನೋಡಿಕೊಂಡಿತು.
ಈಸೂರಿನ ಘಟನೆ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಏಸೂರು ಕೊಟ್ಟರು ಈಸೂರು ಕೊಡೆವು ಎಂಬ  ಘೋಷಣೆಯೇ ಹೋರಾಟಕ್ಕೆ ಕಿಚ್ಚು ಹಚ್ಚುವಂತಾದ್ದು. ಪೂರ್ಣ ಭಾರತ ದೇಶದಲ್ಲಿ ಸ್ವಾತಂತ್ರ್ಯ ಗ್ರಾಮ ಎಂದು ಮೊದಲು ಘೋಷಿಸಿಕೊಂಡ ಊರಿದು.
ತನ್ನದೇ ಆದ ಅಧಿಕಾರಿಗಳನ್ನ ನೇಮಕ ಮಾಡಿಕೊಂಡ ಹೆಗ್ಗಳಿಕೆ ಈಸೂರಿನದು. ಕಂದಾಯ ವಸೂಲಿಗೆ ಬಂದ ಅಧಿಕಾರಿಗಳ ಜೊತೆ ನಡೆದ ಸಂಘರ್ಷ ತೀವ್ರ ಮಟ್ಟಕ್ಕೆ ಹೋಗಿ ಇಬ್ಬರು ಅಧಿಕಾರಿಗಳನ್ನ ಹೊಡೆದು ಹಾಕುವ ಮೂಲಕ ಈಸೂರಿನಂತಹ ಸಣ್ಣ ಗ್ರಾಮಕ್ಕೆ ಮಿಲಿಟರಿ ಪಡೆ ನುಗ್ಗಿ ಹಾನಿ ಮಾಡುವಂತಾಗುತ್ತದೆ. ಈಸೂರಿನ ಐದು ಜನ ಸ್ವಾತಂತ್ರ್ಯ ಹೋರಾಟಗಾರರಿಗೆ ಗಲ್ಲು ಶಿಕ್ಷೆ ಖಾಯಂ ಆಗುತ್ತದೆ. ಆ ಮೂಲಕ ಈಸೂರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅಜರಾಮರವಾಗಿ ಉಳಿಯುತ್ತದೆ.


ಇಂತಹ ಭವ್ಯ ಇತಿಹಾಸವನ್ನು ಪಠ್ಯ ದೊಂದಿಗೆ ಪಠ್ಯೇತರವಾಗಿಯೂ ಮಕ್ಕಳ ಮನಸ್ಸಿನಲ್ಲಿ ಬಿತ್ತ ಬೇಕಿದೆ. ಆಗ ದೇಶ ಪ್ರೇಮ ಎಂಬುದು ಮೊಳಕೆ ಒಡೆದು ಹೆಮ್ಮರವಾಗಿ ಬೆಳೆಯಲು ಸಾಧ್ಯ. ಪೋಷಕರು ತಮ್ಮ ಮಕ್ಕಳೊಂದಿಗೆ ನಾಳೆ ಭಾನುವಾರ ಮತ್ತು ಸೋಮವಾರ ಸಂಜೆ ೭ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿರುವ ಏಸೂರ ಕೊಟ್ಟರು ಈಸೂರ ಕೊಡೆವು ಎಂಬ ನಾಟಕವನ್ನು ವೀಕ್ಷಿಸಬಹುದಾಗಿದೆ.

ಶಿವಮೊಗ್ಗ ರಂಗಭೂಮಿ ಚಟುವಟಿಕೆಗಳಲ್ಲಿ ಉಪನ್ಯಾಸಕ ಸಾಸ್ವೇಹಳ್ಳಿ ಸತೀಶ್ ಯಾವಾಗಲೂ ವಿಶೇಷ ಹಾಗೂ ವಿಭಿನ್ನವಾದ ಹೊಸತನದ ಪ್ರಕ್ರಿಯೆಗಳ ಮೂಲಕ ಗುರುತಿಸಿಕೊಂಡಂತವರು.

ಈ ನಾಟಕದ ರಚನೆ, ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಸಾಸ್ವೆಹಳ್ಳಿ ಸತೀಶ್ ಈ ರಂಗಚಟುವಟಿಕೆಯ ಮೂಲಕ ಹೊಸ ಮುಖಗಳನ್ನು ಪಾತ್ರಧಾರಿಯನ್ನಾಗಿಸಿದಾರೆ. ವಾಸವಿ ಶಾಲೆಯ ಎಸ್.ಕೆ.ಶೇಷಾಚಲ, ಪತ್ರಕರ್ತ ಚಂದ್ರಹಾಸ್ ಹಿರೇಮಳಲಿ, ಸಾಹಾಸಿ ಅ.ನಾ. ವಿಜಯೇಂದ್ರರಾವ್, ಹನುಮಂತಾಪುರದ ಎಸ್.ಎನ್.ರುದ್ರೇಶ್, ಉದ್ಯಮಿ ಹಾಗೂ ಓಂಗಣೇಶ್ ಟ್ರಾಕ್ಟರ‍್ಸ್ ನ ಮಾಲೀಕ ಭಾಸ್ಕರ್ ಜಿ.ಕಾಮತ್, ಹೊತ್ತಾರೆ ಶಿವು ಅವರ ಮಕ್ಕಳಾದ ಲಿಪಿತ ಹಾಗೂ ಕೌಶಿಕ್ ಸೇರಿದಂತೆ ಒಟ್ಟು ೩೨ ಪಾತ್ರಧಾರಿಗಳು ನಾಟಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಂಗದ ಹಿಂದೆ ಬೆಳಕನ್ನು ಹರಿಗೆ ಗೋಪಾಲಸ್ವಾಮಿ, ಸಂಗೀತವನ್ನು ಉಮೇಶ್ ಆಚಾರ್ಯ ನೀಡಲಿದ್ದಾರೆ. ಉಮೇಶ್ ಪಿಳ್ಳಂಗೆರೆ ಗಾಯನದ ನಾಟಕದಲ್ಲಿ ಚಂದ್ರಶೇಖರ ಹಿರೆಗೋಣಿಗೆರೆ, ಅಜಯ್ ನಿನಾಸಂ ಪ್ರಸಾದನವಿದೆ. ಪ್ರಶಾಂತ್ ಹಾಗೂ ತಮಟೆ ಜಗದೀಶ್ ರಂಗಸಜ್ಜಿಕೆ ಇರುತ್ತದೆ.

Exit mobile version