ಶಿವಮೊಗ್ಗ: ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ, ಕೆಲಸದ ಒತ್ತಡ ಮತ್ತಿತರೆ ಕಾರಣಗಳಿಂದಾಗಿ ಮನುಷ್ಯ ನಾನಾ ಬಗೆಯ ಖಾಯಿಲೆಗಳಿಗೀಡಾಗುತ್ತಿದ್ದಾನೆ. ಈ ಖಾಯಿಲೆಗಳನ್ನು ಗುಣಪಡಿಸಲು ವಿವಿಧ ವೈದ್ಯಕೀಯ ಚಿಕಿತ್ಸಾ ಪದ್ಧತಿ ಅನುಸರಿಸಲಾಗುತ್ತಿದೆ. ಇವುಗಳಲ್ಲಿ ಒಂದಾಗಿರುವ ಆಯುರ್ವೇದವು ವಿಶ್ವದ ಅತ್ಯಂತ ಪುರಾತನ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯಾಗಿದೆ. ಆಯುರ್ವೇದದಿಂದ ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಹಿರೇಮಠ್ ಹೇಳಿದರು.
ವಿಸಿಪಿಇಎಂ ಟ್ರಸ್ಟ್ ವತಿಯಿಂದ ಕರ್ನಾಟಕ ಎಕ್ಸಲೆನ್ಸ್ ಅವಾರ್ಡ್-೨೦೨೧ರ ಅಡಿ ನೀಡಲ್ಪಡುವ ಅತ್ಯುತ್ತಮ ಆಯುರ್ವೇದ ಕೇಂದ್ರ ಪ್ರಶಸ್ತಿಯು ನಿದಿಗೆಯ ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗೆ ಲಭಿಸಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ೦೬-೧೧-೨೦೨೧ರ ಶನಿವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಶತ ಶತಮಾನಗಳಿಂದಲೂ ಆಯುರ್ವೇದವನ್ನು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪರಿಣಾಮಕಾರಿ ಔಷಧಿ ಎಂದು ಪ್ರಶಂಸಿಸಲಾಗಿದೆ. ಆಯುರ್ವೇದದ ಮೂಲಕ ಅನೇಕ ರೋಗಗಳನ್ನು ಗುಣಪಡಿಸುವ ಪದ್ಧತಿ ಪುರಾತನ ಕಾಲದಿಂದಲೂ ಇದೆ. ಈ ಪದ್ಧತಿ ಮನಸ್ಸು ಮತ್ತು ದೇಹ ಎರಡನ್ನೂ ಗುಣಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದರು.
ಕಳೆದೆರೆಡು ವರ್ಷಗಳ ಹಿಂದೆ ಕೋವಿಡ್ ಎಂಬ ಸಾಂಕ್ರಾಮಿಕ ರೋಗಕ್ಕೆ ಇಡೀ ಜಗತ್ತೇ ತತ್ತರಿಸಿತು. ಕಾಯಿಲೆ ನಿಯಂತ್ರಣ ಹಾಗೂ ನಿವಾರಣೆಗೆ ಮದ್ದನ್ನು ಆವಿಷ್ಕರಿಸಲು ಸಮರೋಪಾದಿಯಲ್ಲಿ ಪ್ರಯೋಗಗಳು ಪ್ರಾರಂಭವಾದವು. ಜನರು ತೀವ್ರ ಆತಂಕಕ್ಕೆ ಒಳಗಾದರು. ಆದರೆ ಆಯುರ್ವೇದದಲ್ಲದ್ದ ಮದ್ದುಗಳು ಜನರಲ್ಲಿ ಮಾನಸಿಕ ಸ್ಥೈರ್ಯ ಮೂಡಿಸಿದ್ದರಿಂದ ವಿಷಮ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತೆಂದು ಅಭಿಪ್ರಾಯಿಸಿದರು.
ಹರಪನಹಳ್ಳಿಯ ತೆಗ್ಗಿನಮಠ ಸಂಸ್ಥಾನದ ಪಟ್ಟಾಧ್ಯಕ್ಷರಾದ ಷ||ಬ್ರ|| ಶ್ರೀ ವರಸದ್ಯೋಜಾತ ಶಿವಾಚಾರ್ಯರ ಕೃಪಾಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಟಿಎಂಎಇಎಸ್ ಅಡಿಯಲ್ಲಿ ನಿದಿಗೆ ಸೇರಿದಂತೆ ರಾಜ್ಯದ ೮ ಜಿಲ್ಲೆಗಳಲ್ಲಿ ೬೮ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ವರ್ಷದ ಪ್ರಾರಂಭದಲ್ಲಿ ನಿದಿಗೆಯ ಕಾಲೇಜು ಮತ್ತು ಆಸ್ಪತ್ರೆಗೆ ಯೂಥ್ ಎಫಟ್ಸ್ ಫಾರ್ ಸೊಸೈಟಿ ಟ್ರಸ್ಟ್‌ನಿಂದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಪ್ರಶಸ್ತಿ ಲಭಿಸಿತ್ತು. ಇದೇ ವರ್ಷಾಂತ್ಯದಲ್ಲಿ ಅತ್ಯುತ್ತಮ ಆಯುರ್ವೇದ ಕೇಂದ್ರ
ಪ್ರಶಸ್ತಿಯು ಲಭಿಸಿದ್ದು, ಒಂದೇ ವರ್ಷದಲ್ಲಿ ೨ ಪ್ರಮುಖ ಪ್ರಶಸ್ತಿಗಳನ್ನು ಪಡೆಯಲು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಪರಿಶ್ರಮ ಕಾರಣವಾಗಿದೆ ಎಂದರು.
ಶಾಸಕ ಜಮೀರ್ ಅಹಮದ್ ಖಾನ್, ಚಿತ್ರ ನಟಿ ಭವ್ಯ ಗೌಡ, ವಿಸಿಪಿಇಎಂ ಟ್ರಸ್ಟ್‌ನ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.