Site icon TUNGATARANGA

ಪೊಲೀಸರೇ ರಸ್ತೆ ಗುಂಡಿ ಮುಚ್ಚಿದ್ದೇಕೇ ಗೊತ್ತಾ…, ಪಾಲಿಕೆಗೆ ನಾಚಿಯಾಗೊಲ್ವೇ…?

ಹುಡುಕಾಟದ ವರದಿ

ಶಿವಮೊಗ್ಗ ನಗರ ಪಾಲಿಕೆಗೆ ನಾಚಿಕೆಯಾಗಬೇಕು. ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ನನಗರವನ್ನೆಲ್ಲಾ ಗುಂಡಿಗಳ ತವರು ಮನೆಯನ್ನಾಗಿ ಮಾಡಿದೆ. ಜನ ಹಾದಿಬೀದಿ ತುಂಬೆಲ್ಲಾ ಬಯ್ಯುತ್ತಲೇ ಹೋಗುತ್ತಿದ್ದಾರೆ. ಇದರ ನಡುವೆ ಸಂಚಾರಿ ನಿಯಮವೆಂದು ದೂರು ದಾಖಲಿಸುವ ಪೊಲೀಸರಿಗೂ ನಿಂದಿಸುತ್ತಿದ್ದಾರೆ. ರಸ್ತೆ ಸರಿ ಇಲ್ಲ. ಸಂಚಾರಿ ನಿಯಮ ಪಾಲಿಸಿ ಎಂದು ಹೇಳಿದರೆ ಹೇಗೆ ಎಂದು ತಿರುಗುತ್ತರ ನೀಡುತ್ತಿದ್ದಾರೆ.
ಇದೆಲ್ಲದರ ನಡುವೆ, ಶಿವಮೊಗ್ಗ ಜೈಲ್ ಸರ್ಕಲ್‌ನಲ್ಲಿ ಜನರ ವಾಹನಗಳು ಗುಂಡಿಯಲ್ಲಿ ಬಿದ್ದು ಅನಾಹುತ ಮಾಡಿಕೊಳ್ಳುತ್ತಿದ್ದ ಸನ್ನಿವೇಶವನ್ನು ತಪ್ಪಿಸಲು, ಎಚ್ಚೆತ್ತುಕೊಳ್ಳದ ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯವಸ್ಥೆ ವಿರುದ್ಧವಾಗಿ ಅಲ್ಲಿದ್ದ ಸಂಚಾರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ಒಂದಿಬ್ಬರು ಜನರನ್ನು ಸೇರಿಸಿಕೊಂಡು ಗುಂಡಿಮುಚ್ಚುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಮಂಜುನಾಥ್, ಎ.ಆರ್.ಎಸ್.ಐ ಚಾಲಕ ಪ್ರಕಾಶ್ ಹಾಗೂ ಕಾನ್ಸ್‌ಟೇಬಲ್ ಹನುಮಂತಪ್ಪ ಅವರು ತಾವುಗಳು ಪೊಲೀಸರು ಹಾಗೂ ಅಧಿಕಾರಿಗಳು ಎಂದುಕೊಳ್ಳದೇ, ಜನರ ಗೋಳು ನೋಡಲಾಗದೆ ತಾವೇ ರಸ್ತೆಯ ಬದಿಯಲ್ಲಿದ್ದ ಮಣ್ಣನ್ನು ಹಾಕಿ ಸಮತಟ್ಟು ಮಾಡಿದ್ದಾರೆ.


ಜೈಲ್ ಸರ್ಕಲ್‌ನ ಕುವೆಂಪು ರಸ್ತೆಯಲ್ಲಿ ಈ ಸ್ಮಾರ್ಟ್‌ಸಿಟಿ ಹೆಸರಿನ ಕಾಮಗಾರಿ ನೆಪದಲ್ಲಿ ಆಳವಾದ ಗುಂಡಿ ತೆಗೆದು ಅರ್ಧಂಬರ್ಧ ಮುಚ್ಚಿದ್ದರು. ಆಗ ಹೆಲಿಪ್ಯಾಡ್ ಕಡೆಯಿಂದ ಬರುತ್ತಿದ್ದ ವಾಹನಗಳು ಸಿಗ್ನಲ್ ಬಿಟ್ಟಾಕ್ಷಣ ಶಿವಮೂರ್ತಿ ಸರ್ಕಲ್ ಕಡೆಗೆ ಹೋಗುವಾಗ ಒಂದಿಷ್ಟು ವೇಗವಾಗಿ ಬರುತ್ತಿದ್ದರು. ಅದು ಅನಿವಾರ್ಯವೂ ಹೌದು. ಈ ಸಂದರ್ಭದಲ್ಲಿ ಕನಿಷ್ಟ ೪ ಸ್ಕೂಟಿಯಂತಹ ವಾಹನಗಳ ಆಯಿಲ್ ಟ್ಯಾಂಕ್ ಹೊಡೆದು ಹೋಗಿವೆ. ಗುಂಡಿಯ ಆಳದ ಅರಿವಿಲ್ಲದೇ ಇದ್ದುದ್ದರಿಂದ ಇಂತಹ ಅವಾಂತರ ಮದ್ಯಾಹ್ನದವರೆಗೆ ನಡೆದಿತ್ತು.
ಅಗ ಸ್ಥಳದಲ್ಲಿದ್ದ ಎಎಸ್‌ಐ ಮಂಜುನಾಥ್ ಹಾಗೂ ಪ್ರಕಾಶ್ ಅವರು ನಗರ ಪಾಲಿಕೆ ಮೂಲಗಳಿಗೆ ಮಾಹಿತಿ ನೀಡಿದ್ದಾರೆ.

ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ಅಲ್ಲಿಯೇ ಬಿದ್ದಿದ್ದ ಪ್ಲಾಸ್ಟಿಕ್ ವಸ್ತುವನ್ನು ಬಳಸಿಕೊಂಡು ಮಣ್ಣನ್ನು ಈ ಗುಂಡಿಗೆ ಹಾಕುತ್ತಾ ಸಮತಟ್ಟು ಮಾಡಿದ್ದಾರೆ. ನಾಚಿಕೆಯಾರಿಗೆ ಹಾಗಬೇಕು. ಕಂಡು ಕಾಣದಂತಿರುವ ಪಾಲಿಕೆಯ ವ್ಯವಸ್ಥೆಗೆ ಸ್ಮಾರ್ಟ್‌ಸಿಟಿಯ ಹೆಸರಲ್ಲಿ ಎಸಿ ರೂಮಿನಲ್ಲಿ ಕುಳಿತುಕೊಳ್ಳುವ ಇಂಜಿನಿಯರ್‌ಗಳಿಗೆ ಯಾವ ಭಾಷೆಯಲ್ಲಿ ಹೇಳಬೇಕು. ಜನರ ಕಷ್ಟಗಳಿಗೆ ಸ್ಪಂದಿಸಿ ಪೊಲೀಸ್ ಗತ್ತು ಬಳಸದೇ ತಾವೇ ಮುಂದೆ ನಿಂತು ಇಂತಹ ಕಾರ್ಯಮಾಡಿದ ಪೊಲೀಸ್ ಇಲಾಖೆಯ ಎನ್.ಮಂಜುನಾಥ್, ಪ್ರಕಾಶ್, ಹನುಮಂತಪ್ಪ ಹಾಗೂ ಕೈ ಜೋಡಿಸಿದ ಇಬ್ಬರು ಸಾರ್ವಜನಿಕರಿಗೆ ಅಭಿನಂದಿಸಲೇ ಬೇಕು. ಅದು ನಮ್ಮ ಕರ್ತವ್ಯವಲ್ಲವೇ.

Exit mobile version