ಶಿವಮೊಗ್ಗ,
ಮನುಷ್ಯನ ಅಂತರಂಗ ಶುದ್ಧಿಗೆ ಆಧ್ಯಾತ್ಮ ಅಗತ್ಯ. ಆಧ್ಯಾತ್ಮಿಕ ಸಾಧನೆಯಿಂದ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬಹುದು. ಬದುಕಿನಲ್ಲಿ ನೆಮ್ಮದಿ, ಸಂತೋಷ ಪಡೆಯಬಹುದು. ಮನಸ್ಸು ಮತ್ತು ದೇಹದ ಸ್ವಾಸ್ಥ್ಯದಿಂದ ಆಧ್ಯಾತ್ಮಿಕ ಸಾಧನೆ ಸಾಧ್ಯ. ಆದ್ದರಿಂದ ಶ್ರೀ ಸಿದ್ಧಲಿಂಗ ಶ್ರೀಗಳ ಆಶಯದಂತೆ ಕಾಳೇನಹಳ್ಳಿಯಲ್ಲಿ ಆಧ್ಯಾತ್ಮಿಕ ಸಂಶೋಧನಾ ಕೇಂದ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿಯ ಶಿವಯೋಗಾಶ್ರಮದಲ್ಲಿ ೨೬-೧೦-೨೦೨೧ರ ಇಂದು ಮಂಗಳವಾರ ಬೆಳಿಗ್ಗೆ ಕಾಳೇನಹಳ್ಳಿಯ ಶಿವಯೋಗಾಶ್ರಮದ ಪೀಠಾಧ್ಯಕ್ಷರೂ ಆಗಿರುವ ಗೋಣಿಬೀಡಿನ ಶ್ರೀ ಶೀಲಸಂಪಾದನಾ ಮಠದ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದು ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಗೋಣಿಬೀಡಿನಲ್ಲಿ ೨೩ ತಿಂಗಳ ಅನುಷ್ಠಾನ (ಮೌನ ವ್ರತ)ದ ನಂತರ ಶಿವಯೋಗ ಸಾಧಕರು ಧಾರ್ಮಿಕಾನುಷ್ಠಾನ ನಡೆಸುತ್ತಿದ್ದಾರೆ. ಆಧ್ಯಾತ್ಮವು ನಂಬಿಕೆ ಮತ್ತು ಆಚರಣೆಗಳಿಂದ ಕೂಡಿರುವಂತಹ ಒಂದು ಶಿಸ್ತು ಆಗಿದ್ದು, ಇದರಿಂದ ಮನುಷ್ಯನಿಗೆ ತನ್ನ ಆಂತರಿಕ ಶಾಂತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಸಿದ್ಧಲಿಂಗ ಶ್ರೀಗಳು ಮಾತನಾಡಿ ಜೀವಾತ್ಮ ಮತ್ತು ಶಿವಾತ್ಮಗಳಿಗೆ ಆಧ್ಯಾತ್ಮಿಕ ಸಾಧನೆ ಮಾಡಿದ ನಂತರ ಬಂದ ಅನುಭೂತಿಗಳ ಸ್ಮರಣೆಯು ಮುಂದಿನ ಜನ್ಮದಲ್ಲಿಯೂ ಇರುತ್ತದೆ. ಅಲ್ಲಿಂದಲೇ ನಮ್ಮ ಮುಂದಿನ ಆಧ್ಯಾತ್ಮಿಕ ಸಾಧನೆಯ ಪ್ರಯಾಣವು ಆರಂಭವಾಗುತ್ತದೆ. ಬುದ್ಧಿಗೆ ತಿಳಿಯುವ ಮಾಹಿತಿಯು ಮೆದುಳಿನ ಜೀವಕೋಶಗಳಲ್ಲಿ ಶೇಖರಿಸಲ್ಪಡುತ್ತದೆ.
ಮುಪ್ಪು ಬರತೊಡಗಿದಾಗ ಮೆದುಳಿನ ಜೀವಕೋಶಗಳು ನಾಶವಾಗುತ್ತವೆ. ಆಗ ಅನೇಕ ವಿಷಯಗಳು ನೆನಪಿನಲ್ಲಿ ಉಳಿಯುವುದಿಲ್ಲ. ಇದಕ್ಕೆ ವಿರುದ್ಧವಾಗಿ ಅನುಭೂತಿಯು ಜೀವಾತ್ಮ ಮತ್ತು ಶಿವಾತ್ಮಗಳಿಗೆ ಬರುವುದರಿಂದ ಅದು ಯಾವಾಗಲೂ ನೆನಪಿನಲ್ಲಿರುತ್ತದೆ. ಮುಂದಿನ ಜನ್ಮದಲ್ಲಿಯೂ ಇದೇ ಜೀವಾತ್ಮವು ಹೊಸ ದೇಹವನ್ನು ಧರಿಸಿಬರುತ್ತದೆ. ಆದರೆ ಮೆದುಳು ಮಾತ್ರ ಹೊಸದಾಗಿರುತ್ತದೆ. ಹಾಗಾಗಿ ಲೌಕಿಕದ ಎಲ್ಲವನ್ನೂ ಹೊಸದಾಗಿ ಕಲಿಯಬೇಕಾಗುತ್ತದೆ ಎಂದು ಹೇಳಿದರು.
ಸಂಸದ, ಶಿವಯೋಗಾಶ್ರಮದ ಕಾರ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಹಿರೇಮಠ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಜಿಪಂ ಮಾಜಿ ಸದಸ್ಯೆ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.