Site icon TUNGATARANGA

ಮಕ್ಕಳ ದೌರ್ಜನ್ಯ ಮುಚ್ಚಿಡಬೇಡಿ: ಶೀಲಾ ಸುರೇಶ್


ಶಿವಮೊಗ್ಗ: ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಹಾಗೂ ಮಹಿಳೆಯರು ಹೆದರದೇ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮಾಹಿತಿ ನೀಡುವಂತೆ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಶೀಲಾ ಸುರೇಶ್ ಹೇಳಿದರು.

ತಾಲ್ಲೂಕಿನ ಸೋಗಾನೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಡೆದ ಮಕ್ಕಳ ದೌರ್ಜನ್ಯ ತಡೆಗಟ್ಟುವಿಕೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗೆ ನೂರೆಂಟು ಕಾನೂನುಗಳು ಇದ್ದರೂ ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಳದಲ್ಲಿ ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿರುವುದು ಆತಂಕದ ಸಂಗತಿ. ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ತಡೆಗಟ್ಟುವುದು ಪ್ರತಿಯೊಬ್ಬರ ಜವಬ್ದಾರಿ. ಇದನ್ನು ಮುಚ್ಚಿಡುವ ಪ್ರಯತ್ನವನ್ನು ಯಾರೊಬ್ಬರೂ ಮಾಡಬಾರದು ಎಂದು ಹೇಳಿದರು.

ಮಕ್ಕಳ ಮನಸ್ಸು ಮೊಗ್ಗು ಅರಳುವಂತಹ ಕಾಲಘಟ್ಟ. ಈ ಕಾಲಘಟ್ಟದಲ್ಲಿ ಮಕ್ಕಳ ಮೇಲೆ ನಿಗಾ ವಹಿಸುವುದು ಅತ್ಯಗತ್ಯ. ಮಕ್ಕಳ ಭವಿಷ್ಯ ಮುದುಡಿ ಹೋಗದಂತೆ ನೋಡಿಕೊಳ್ಳಬೇಕು. ಪೋಷಕರು, ಶಿಕ್ಷಕರು ಮಕ್ಕಳಿಗೆ ‘ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೋಹಕ್ಕೆ ಒಳಗಾಗುತ್ತಿರುವ ಮಕ್ಕಳು ಹಾದಿ ತಪ್ಪುತ್ತಿದ್ದು, ಈ ಬಗ್ಗೆ ಎಚ್ಚರಿಕೆ ನೀಡಬೇಕು. ವಿಕೃತ ಮನಸ್ಸುಗಳಿಂದ ಮಕ್ಕಳನ್ನು ದೂರವಿಡಬೇಕು. ಟಿಕ್ಟಾಕ್ ಸಂಸ್ಕೃತಿಯಿಂದ ಮಕ್ಕಳನ್ನು ದೂರವಿಡಬೇಕು ಎಂದು ಸಲಹೆ ನೀಡಿದರು.

ಪಂಚಾಯಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಮಾತನಾಡಿ, ‘ನಾವಿಂದು ಸಂಬಂಧಗಳಿಗೆ ಬೆಲೆಯೇ ಇಲ್ಲದ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ. ಪರಿಣಾಮವಾಗಿ ಹಲವೆಡೆ ತಂದೆ, ಅಣ್ಣ, ಚಿಕ್ಕಪ್ಪಂದಿರಿಂದಲೇ ಮಕ್ಕಳು ಲೈಂಗಿಕ ದೌರ್ಜನ್ಯ ಒಳಗಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಲವೆಡೆ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಿದ್ದರೂ ಅನೇಕರು ಈ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದು ಅತ್ಯಂತ ಆತಂಕಕಾರಿ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಹೇಮೇಶ್ ನಾಯ್ಕ್, ರಾಜಶೇಖರಪ್ಪ, ಪಿಡಿಒ ದಿವಾಕರ್, ರವಿಚಂದ್ರ, ಸುನಿತಾ, ಹಾಲೇಶ್, ನವೀನ್ಕುಮಾರ್, ಕೀರ್ತಿ, ಪರಮೇಶ್ವರಪ್ಪ, ರವಿ, ಯೋಗೇಶ್ ಹಾಗೂ ಅಂಗವನಾಡಿ, ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘಗಳ ಸದಸ್ಯರು ಇದ್ದರು.

Exit mobile version