Site icon TUNGATARANGA

ಕಿತ್ತೂರು ರಾಣಿ ಚೆನ್ನಮ್ಮ ಸ್ತ್ರೀ ಸಮುದಾಯಕ್ಕೆ ಪ್ರೇರಣ ಶಕ್ತಿ

ಶಿವಮೊಗ್ಗ: ಕಿತ್ತೂರು ರಾಣಿ ಚೆನ್ನಮ್ಮ ಸ್ತ್ರೀ ಸಮುದಾಯಕ್ಕೆ ಒಂದು ಪ್ರೇರಣಾತ್ಮಕ ಶಕ್ತಿ. ಪ್ರಚಲಿತ ಮತ್ತು ಆಧುನಿಕ ಯುಗದ ಸ್ತ್ರೀ ತಲ್ಲಣದ ಒಂದು ಸಂವೇದನೆಯಾಗಿ ರಾಣಿ ಚೆನ್ನಮ್ಮ ನಿಂತಿದ್ದು, ಅವರ ಜಯಂತಿಯ ಸಂಭ್ರಮ ಕೇವಲ ಸಾಂಕೇತಿಕವಾಗಿರದೇ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಭಾಗವಹಿಸಿ ಚೆನ್ನಮ್ಮನ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಬಸವೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರತಿಭಾ ಡಿ.ಪಿ. ಹೇಳಿದ್ದಾರೆ.

ಅವರು ಇಂದು ಕುವೆಂಪು ರಂಗಮಂದರಿದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರ ಪಾಲಿಕೆ, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

1824 ರಲ್ಲಿ ಬ್ರಿಟೀಷರ ವಿರುದ್ಧದ ದಂಗೆಯಿಂದ ಚೆನ್ನಮ್ಮ ಪ್ರಚಾರಕ್ಕೆ ಬಂದಿರಬಹುದು. ಆದರೆ, ಕಿತ್ತೂರಿನ ಇತಿಹಾಸ ಅದಕ್ಕಿಂತ ಮುಂಚಿನಿಂದಲೂ ಪ್ರಾರಂಭವಾಗಿ 12 ಜನ ರಾಜರು ಯಶಸ್ವಿಯಾಗಿ ಆಳಿದ್ದಾರೆ. ಚೆನ್ನಮ್ಮ ರಾಜ ವೈಬವದಲ್ಲಿರುವಾಗ ಪತಿ, ಮಗನನ್ನು ಕಳೆದುಕೊಂಡು ದತ್ತು ಮಗನನ್ನು ಸ್ವೀಕಾರ ಮಾಡಿ, ಆತನನ್ನು ಪಟ್ಟದಲ್ಲಿ ಕೂರಿಸಿ ಅಧಿಕಾರ ಮಾಡಿ ಆಳ್ವಿಕೆ ನಡೆಸುತ್ತಿರುವಾಗ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಬೇಕೆಂಬ ದುರಾಸೆಯಿಂದ ಬ್ರಿಟೀಷರು ದತ್ತು ಮಕ್ಕಳಿಗೆ ಅಧಿಕಾರದ ಹಕ್ಕಿಲ್ಲ ಎಂಬ ಕರಾಳಶಾಸನವನ್ನು ಜಾರಿಗೆ ತರುತ್ತಾರೆ ಎಂದರು.

ಈ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ವಿರೋಧಿಸಿ ಬ್ರಿಟೀಷರ ವಿರುದ್ಧ ಉಗ್ರ ಹೋರಾಟ ನಡೆಸಿದ ಚೆನ್ನಮ್ಮ ಅವರ ಯಾವ ಆಮಿಷಕ್ಕೂ ಬಲಿಯಾಗದೇ ತನ್ನ ರಾಜ್ಯ ಸಂಸ್ಥಾನವನ್ನು ಉಳಿಸಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಬ್ರಿಟೀಷರು 12 ಕ್ಕೂ ಹೆಚ್ಚು ಸುತ್ತಲಿನ ರಾಜರ ನೆರವು ಪಡೆದು ಕಿತ್ತೂರು ಸಂಸ್ಥಾನದ ಮೇಲೆ ದಾಳಿ ನಡೆಸುತ್ತಾರೆ. ಆ ಸಂದರ್ಭದಲ್ಲಿ ರಾಣಿ ಚೆನ್ನಮ್ಮನ ಎಡಗೈ ಮತ್ತು ಬಲಗೈ ಬಂಟರಾದ ವೆಂಕಟರಾವ್ ಮತ್ತು ಮಲ್ಲಪ್ಪಶೆಟ್ಟಿ ಎಂಬ ನಾಡದ್ರೋಹಿಗಳು ಬ್ರಿಟೀಷರೊಂದಿಗೆ ಸೇರಿ ರಾತ್ರೋರಾತ್ರಿ ಚೆನ್ನಮ್ಮ ಯುದ್ಧಕ್ಕಾಗಿ ಸಂಗ್ರಹಿಸಿಟ್ಟಿದ್ದ ಮದ್ದುಗುಂಡುಗಳನ್ನು ಸ್ಥಳಾಂತರಿಸಿ ಆ ಜಾಗದಲ್ಲಿ ಸಗಣಿಯ ಗುಂಡುಗಳನ್ನು ಇರಿಸುತ್ತಾರೆ. ಇದರಿಂದ ಬ್ರಿಟೀಷರ ಗುಂಡಿನ ದಾಳಿಗೆ ಚೆನ್ನಮ್ಮ ಮದ್ದುಗುಂಡುಗಳಿಲ್ಲದ ವೀರಾವೇಶದ ಸೈನಿಕರಿದ್ದರೂ ಸಹ ಸೋಲಬೇಕಾಗುತ್ತದೆ. ಬೈಲಹೊಂಗಲದಲ್ಲಿ ಬ್ರಿಟೀಷರು ಚೆನ್ನಮ್ಮನನ್ನು ಗೃಹಬಂಧನದಲ್ಲಿರಿಸುತ್ತಾರೆ. ತನ್ನವರ ಪಿತರೂರಿಯಿಂದಲೇ ಕಿತ್ತೂರು ಸಾಮ್ರಾಜ್ಯ ಬ್ರಿಟೀಷರ ವಶವಾಯಿತು. ಇಲ್ಲವಾದಲ್ಲಿ ಚೆನ್ನಮ್ಮನನ್ನು ಯುದ್ಧದಲ್ಲಿ ಸೋಲಿಸಲು ಬ್ರಿಟೀಷರಿಗೆ ಕಷ್ಟವಾಗುತ್ತಿತ್ತು ಎಂದು ಹೇಳಿದರು. 

ಕೊನೆಯವರೆಗೂ ಬ್ರಿಟೀಷರಿಗೆ ಬಗ್ಗದ, ಅವರ ಯಾವುದೇ ಷರತ್ತಿಗೂ ಮಣಿಯದ ಚೆನ್ನಮ್ಮ 52 ನೇ ವಯಸ್ಸಿನಲ್ಲಿ ವೀರಮಣವನ್ನುಪ್ಪುತ್ತಾರೆ. ಆದರೆ, ಆಕೆಯ ಆಡಳಿತಾವಧಿಯಲ್ಲಿ ಕೈಗೊಂಡ ಸುಧಾರಣೆ ಮತ್ತು ಜನಪ್ರಿಯ ಆಡಳಿತ ಇಂದಿಗೂ ನೆನಪಿಸಿವಂತಹುದು. ಆಕೆಯ ಸಾಧನೆ ಸ್ತ್ರೀ ಸಮಾಜಕ್ಕೆ ಒಂದು ಪ್ರೇರಣೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಸರ್ಕಾರ ಕಿತ್ತೂರು ಚೆನ್ನಮ್ಮನ ಶೌರ್ಯ ಮತ್ತು ಧೈರ್ಯ ಎಲ್ಲ ಮಹಿಳೆಯರಿಗೆ ಆದರ್ಶವಾಗುವ ದೃಷ್ಠಿಯಲ್ಲಿ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಆಯನೂರು ಮುಂಜುನಾಥ್, ಎಸ್. ರುದ್ರೇಗೌಡ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಜೆ. ರಾಜಶೇಖರ್,  ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಮುಖರಾದ ಹೆಚ್.ವಿ. ಮಹೇಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಜಗದೀಶ್, ಮಂಡೇನಕೊಪ್ಪ ದೇವರಾಜ್, ಚೆನ್ನಪ್ಪ, ಮಮತಾ ಸೇರಿದಂತೆ ಹಲವರಿದ್ದರು.

Exit mobile version