Site icon TUNGATARANGA

ಹುತಾತ್ಮ ಪೊಲೀಸರ ಸ್ಮರಣೆ ಸ್ತುತ್ಯಾರ್ಹ : ನ್ಯಾ. ಮುಸ್ತಫಾ ಹುಸೇನ್

ಶಿವಮೊಗ್ಗದಲ್ಲಿ ಪೊಲೀಸ್ ಸಂಸ್ಮರಣ ದಿನಾಚರಣೆ

ಶಿವಮೊಗ್ಗ, ಅ.21:

ಅಪರಾಧ ತಡೆ, ಕಾನೂನು ಮತ್ತು ಸುವ್ಯವಸ್ಥೆ, ಶಿಸ್ತುಪಾಲನೆ, ಸಂಚಾರ ಸುರಕ್ಷತೆಯಂತಹ ಜವಾಬ್ದಾರಿಯುತ ಕರ್ತವ್ಯದಲ್ಲಿ ತಮ್ಮ ಅಮೂಲ್ಯ ಜೀವವನ್ನೇ ತ್ಯಾಗ ಮಾಡಿದ ಆರಕ್ಷಕ ಸಿಬ್ಬಂಧಿಗಳ ತ್ಯಾಗ ಸ್ಮರಣೀಯವಾದುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ. ಅವರು ಹೇಳಿದರು.
ಅವರು ಇಂದು ಪೊಲೀಸ್ ಇಲಾಖೆಯು ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಸಂಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ತಮ್ಮನ್ನೇ ಸಮರ್ಪಿಸಿಕೊಂಡ ಹಾಗೂ ನಾಗರೀಕರ ಸುರಕ್ಷತೆ ಮತ್ತು ಸಂರಕ್ಷಣೆಯಲ್ಲಿ ಪೊಲೀಸರ ಪಾತ್ರ ಪ್ರಮುಖವಾದುದ್ದು ಎಂದ ಅವರು ದೇಶದ ರಕ್ಷಣೆಗಾಗಿ ಸೇವಾನಿರತರಾಗಿರುವಾಗಲೇ ಬಲಿದಾನಗೈದ ಪೊಲೀಸರನ್ನು ಸ್ಮರಿಸುವುದು ಗೌರವ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


ದೈನಂದಿನ ಕರ್ತವ್ಯದ ಸಂದರ್ಭದಲ್ಲಿ ಅನಿರೀಕ್ಷಿತವಾದ ಅನೇಕ ಸಮಸ್ಯೆ-ಸವಾಲುಗಳನ್ನು ಎದುರಿಸಿ ಕಾರ್ಯನಿರ್ವಹಿಸಬೇಕಾಗುವುದು. ಕೊರೋನ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪರಿವಾರವನ್ನು ಮರೆತು, ಸಾರ್ವಜನಿಕರ ನೆಮ್ಮದಿಯ ಬದುಕಿಗಾಗಿ ಹಗಲಿರುಳು ಶ್ರಮಿಸಿದ ಪೊಲೀಸರ ಕಾರ್ಯ ಅಭಿನಂದನೀಯವಾದುದು ಎಂದರು.


ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಮಾತನಾಡಿ, ಸಂಸತ್ತಿನ ದಾಳಿ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವೇ ಪೊಲೀಸ್ ಸಿಬ್ಬಂಧಿಗಳ ಕಾರ್ಯ ದೇಶದ ಇತಿಹಾಸದಲ್ಲಿ ಸ್ಮರಣೀಯವಾದುದು. ಅಂದು ಹುತಾತ್ಮ ಪೊಲೀಸರು ಕ್ಷಣಕಾಲ ಮೈಮರೆತಿದ್ದರೂ ಈ ದುರ್ಘಟನೆ ದೇಶದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯುತ್ತಿತ್ತು ಎಂದರು.


ಭಯೋತ್ಪಾದನೆ, ಸಮಾಜ ವಿದ್ರೋಹಿಗಳ ದುಷ್ಕೃತ್ಯಗಳು ದೇಶದೆಲ್ಲೆಡೆ ಕಂಡುಬರುತ್ತಿವೆ. ಅದರ ನಿಯಂತ್ರಣಕ್ಕಾಗಿ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ-ಸಿಬ್ಬಂಧಿಗಳನ್ನು ಗೌರವಿಸುವುದು, ಬಲಿದಾನ ಮಾಡಿದ ರಕ್ಷಣಾ ಸಿಬ್ಬಂಧಿಗಳ ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


ಕರ್ತವ್ಯನಿರತ ಪೊಲೀಸರ ಮರಣಾ ನಂತರ ಅವರ ಕುಟುಂಬದ ಸ್ಥಿತಿಗತಿ, ತೊಳಲಾಟ ಅಸಹನೀಯವಾದುದು. ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಎಲ್ಲರೂ ಋಣಿಕರಾಗಿರಬೇಕು ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಅವರು ಸ್ವಾಗತಿಸಿ, ಹುತಾತ್ಮ ಪೊಲೀಸರ ನಾಮವಾಚನ ಮಾಡಿದರು. ಅದಕ್ಕೂ ಮುನ್ನ ಹುತಾತ್ಮ ಪೋಲಿಸ್ ಪುತ್ಥಳಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಮವಸ್ತ್ರಧಾರಿ ಸಶಸ್ತ್ರ ಪೊಲೀಸ್ ಮೂರು ಬಾರಿ ಕುಶಾಲ ತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಡಾ|| ಶೇಖರ್ ಹೆಚ್.ತೆಕ್ಕಣ್ಣನವರ್, ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂಧಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.

Exit mobile version