ಶಿವಮೊಗ್ಗ, ಅ.21:
ಶಿವಮೊಗ್ಗ ನಗರದ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಅವರು ಜನರ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು, ಈ ಪ್ರಶ್ನೆಗಳಿಗೆ ಜನರ ಪರವಾಗಿ ಉತ್ತರಿಸುವಂತೆ ಒತ್ತಾಯಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರೂ ಆಗಿರುವ ಈಶ್ವರಪ್ಪನವರೇ ಆ ಸ್ಥಾನಗಳ ಬಗ್ಗೆ ಹಾಗೂ ಅಲ್ಲಿನ ಅಭಿವೃಧ್ದಿಯ ಬಗ್ಗೆ ಪ್ರಶ್ನೆ ಕೇಳುತ್ತಿಲ್ಲ. ಕೇವಲ ಶಿವಮೊಗ್ಗ ಶಾಸಕರಾಗಿ ಜನಸಾಮಾನ್ಯರಿಂದ ಹುಟ್ಟಿಕೊಂಡಿರುವ ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಶಿವಮೊಗ್ಗ ನಗರದಾದ್ಯಂತ ಗಾಂಜಾ ಎಗ್ಗಿಲ್ಲದೇ ಮಾರಾಟವಾಗುತ್ತಿದೆ. ಗಾಂಜಾ ಸೇದುವವರ ಸಂಖ್ಯೆ ಹೆಚ್ಚಾಗಿದ್ದು, ಅಪರಾಧಗಳು ನಿತ್ಯ ನಡೆಯುತ್ತಲೇ ಇವೆ. ನಿಮ್ಮನ್ನು ಇಲ್ಲಿ ಗಾಂಜಾ ಪ್ಲೇಡರ್ ಎನ್ನುವುದಿಲ್ಲ. ನಿಯಂತ್ರಿಸಲು ನಿಮ್ಮಿಂದ ಆಗಿಲ್ಲವಲ್ಲವೇ ಎಂದು ಪ್ರಶ್ನಿಸಿದರು.
ದೊಡ್ಡವರ ಬಗ್ಗೆ ಮಾತನಾಡಿದ ಕ್ಷಣ ದೊಡ್ಡವರಾಗುವುದಿಲ್ಲ. ಕೇವಲ ನಿಮ್ಮ ಕ್ಷೇತ್ರದಲ್ಲಿ ತಾವು ಶಾಸಕರಾಗಿ ಮಾಡಿರುವ ಕೆಲಸವೇನು.? ಆಡಳಿತಾತ್ಮಕ ನಿಯಂತ್ರಣ ಸಾಧ್ಯವಾಗಿದೇಯೇ.? ಸಿದ್ದರಾಮಯ್ಯ ವಿರುದ್ದ ಮಾತನಾಡಿದಾಕ್ಷಣ ದೊಡ್ಡವರಾಗುವುದಿಲ್ಲ. ನಿಮ್ಮ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವವರೆಗೂ ಮಾತನಾಡಿರುವುದನ್ನು ಜನ ಮರೆತಿಲ್ಲ ಎಂದರು.
ಜನರ ತೆರಿಗೆ ಹಣದಿಂದ ನಿರ್ಮಾಣವಾಗುತ್ತಿರುವ ಸ್ಮಾರ್ಟ್‌ಸಿಟಿ ಶಿವಮೊಗ್ಗದಲ್ಲಿ ಏನಾಗಿದೆ ನಿಮ್ಮಗೆ ಗೊತ್ತೆ..? ಚನ್ನಾಗಿರುವ ಸ್ಲ್ಯಾಬ್‌ಗಳನ್ನು ಹೊಡೆದು ಕಳಪೆ ವಸ್ತುಗಳನ್ನು ಹಾಕುತ್ತಿದ್ದೀರಿ. ಫುಟ್‌ಪಾತ್ ರೆಡಿ ಮಾಡಿ ಇನ್ನೂ ಮುಗಿದಿಲ್ಲ. ಆರೇ ತಿಂಗಳಲ್ಲಿ ಟೈಲ್ಸ್‌ಗಳು ಕುಸಿದು ಹೋಗುತ್ತಿವೆ. ಇದು ನಿಮಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಆಶ್ರಯ ಮನೆ ಸಿಗುತ್ತೆ ಎಂಬ ಕಾರಣಕ್ಕೆ ಹಿಂದೆ ಹಣ ಕಟ್ಟಿದ್ದವರಿಗೆ ಇಷ್ಟು ವರ್ಷವಾದರೂ ಮನೆ ಕೊಡುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಬರೀ 24 ಮನೆಯನ್ನು ಕಟ್ಟಿದ್ದೀರಿ. ಇನ್ನೂ ಎಷ್ಟು ದಿನ ಬೇಕು.? ಸ್ಲಂನವರಿಗೆ ಮನೆ ಕಟ್ಟಿಕೊಡುತ್ತೇವೆ ಎಂದು ಹಣ ಕಟ್ಟಿಸಿಕೊಂಡು ಹಳೆಯ ಮನೆ ಹೊಡೆಸಿ ಅತ್ತ ತಿರುಗಿ ನೋಡಿಲ್ಲ. ಹಳೆಯ ಮನೆಯೂ ಇಲ್ಲದೇ ಹೊಸದಾಗಿ ಕಟ್ಟಿಕೊಳ್ಳದೇ ಪರಿತಪಿಸುತ್ತಿದ್ದಾರೆ ಅವರ ಶಾಪ ನಿಮಗೆ ಸುಮ್ಮನೇ ಬಿಡುವುದಿಲ್ಲ ಎಂದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ಇಲಾಖೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಕೆಲಸ ಮಾಡಿ ಎಂದು ಹೇಳುತ್ತಾರೆ ಎಂದರೆ ನಿಮ್ಮ ಆಡಳಿತ ಹೇಗಿದೆ ನೋಡಿಕೊಳ್ಳಿ. ಆರ್‌ಟಿಓ ಕಛೇರಿಯ ಅಧಿಕಾರಿಗಳಿಗೆ ಮೂರ‍್ನಾಲ್ಕು ಜಿಲ್ಲೆಗಳ ಜವಾಬ್ದಾರಿ ಹೆಸರು ಹೇಳಿ ಅಲ್ಲಿ ಹಣ ಮಾಡಲು ಬಿಟ್ಟಿದ್ದೀರಾ.. ನಾವು ಹಿಂದೆ ಶಿವಮೊಗ್ಗ ನಗರದಲ್ಲಿ ಓಡಾಡುವ ೬೨ ಬಸ್‌ಗಳಿಗೆ ಅನುಮತಿ ಪಡೆದು 30 ಬಸ್ ಬಿಡಿಸಿದ್ದೇವು. ತಾವು ಉಳಿದ ಬಸ್‌ಗಳನ್ನು ಬಿಡಿಸಿ ತಂದರಾ..? ಒಟ್ಟಾರೆ ನಿಮ್ಮ ಬಗ್ಗೆ ಜನ ಎತ್ತಿರುವ ಇಂತಹ ಸಾವಿರಾರು ಪ್ರಶ್ನೆಗಳಿಗೆ ನೀವು ಉತ್ತರಿಸಬೇಕು. ಇನ್ನೂ ಒಂದು ವರ್ಷ ಮೂರ‍್ನಾಲ್ಕು ತಿಂಗಳು ಅಧಿಕಾರ ಇದೆ ಅಷ್ಟರಲ್ಲಾದರೂ ಸಮರ್ಪಕ ಆಡಳಿತ ನೀಡಿ. ಜನರ ಪ್ರಶ್ನೆಗಳಿಗೆ ಉತ್ತರಿಸಿದ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ದೀಪಕ್‌ಸಿಂಗ್, ಆರ್.ಕೆ.ಉಮೇಶ್, ಶಮೀರ್ ಅಹಮದ್, ಶ್ಯಾಮ್‌ಸುಂದರ್, ರಘು ಬಿ., ಮಂಜುನಾಥ್ ಇದ್ದರು.