ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಮುಳುಗಲಿಲ್ಲ. ಅದರ ಬದಲು 18.46 ಕೋಟಿ. ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಚನ್ನವೀರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಪ್ರಗತಿ ಕುರಿತು ಮಾತನಾಡಿ, ಡಿಸಿಸಿ ಬ್ಯಾಂಕ್ ಇನ್ನೇನು ಮುಳುಗಿ ಹೋಯಿತು ಎಂದು ಹೇಳುವ ಹೊತ್ತಿನಲ್ಲಿಯೇ ಬ್ಯಾಂಕ್ ಇದೇ ಮೊದಲ ಬಾರಿಗೆ ಠೇವಣಿ ಸಂಗ್ರಹದಲ್ಲಿ ಸಾವಿರ ಕೋಟಿಯನ್ನು ದಾಟಿದೆ. ಮಾರ್ಚ್ ಅಂತ್ಯಕ್ಕೆ 107835 ಕೋಟಿ ಠೇವಣಿ ಸಂಗ್ರಹವಾಗಿದೆ. ಒಂದು ಕಾಲದಲ್ಲಿ ಠೇವಣಿದಾರರು ದಾಖಲೆಯ ಮಟ್ಟದಲ್ಲಿ ವಾಪಸು ತೆಗೆದುಕೊಂಡಿದ್ದರು. ಆದರೆ ಇಂದು ಠೇವಣಿಯೂ ಹೆಚ್ಚಾಗಿದೆ. ಬ್ಯಾಂಕಿನ ವಾರ್ಷಿಕ ವ್ಯವಹಾರ 2161 ಕೋಟಿ ತಲುಪಿದೆ. ಹಾಗಾಗಿ 2014ರಿಂದ ನಷ್ಟದಲಿದ್ದ ಬ್ಯಾಂಕ್ 2021ರ ಒತ್ತಿಗೆ ಲಾಭಗಳಿಸಿ ಸದಸ್ಯರಿಗೆ ಡಿವಂಡೆಟ್ ಕೊಡುವ ಮಟ್ಟಕ್ಕೆ ಬಂದಿದೆ ಎಂದರು.
ಲೆಕ್ಕ ಪರಿಶೋಧಕರು ಬ್ಯಾಂಕಿನ ಸಾಧನೆಯನ್ನು ಗುರುತಿಸಿ ಆಡಿಟ್ ವರ್ಗೀಕರಣದಲ್ಲಿ ಎ ಗ್ರೇಡ್ ನೀಡಿದ್ದಾರೆ. ಇದು ಕೂಡ ಇತ್ತೀಚಿನ ದಿನಗಳಲ್ಲಿ
ದಾಖಲೆಯಾಗಿದೆ. ಅಷ್ಟೆ ಅಲ್ಲ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 101970 ರೈತರಿಗೆ 943.19 ಕೋಟಿ ಬೆಳೆಸಾಲ ನೀಡಿದ್ದಾರೆ. ಅದರಲ್ಲಿ 9700 ಹೊಸ ರೈತರಿಗೆ 91.06 ಕೋಟಿ ಹಾಗೂ 31547 ರೈತರಿಗೆ ಹೆಚ್ಚುವರಿ 149.74 ಕೋಟಿಯಷ್ಟು ಬೆಳೆಸಾಲ ನೀಡಲಾಗಿದೆ. 748 ರೈತರಿಗೆ 38.61
ಕೋಟಿ ಮಧ್ಯಮವಾದಿ ಸಾಲ ನೀಡಲಾಗಿದೆ ಎಂದರು.
ಇದಲ್ಲದೆ 2700 ಸ್ವಸಹಾಯ ಗುಂಪುಗಳಿಗೆ 86 ಕೋಟಿ ಸಾಲ ನೀಡಲಾಗಿದೆ. ಸರ್ಕಾರದ ಕಾಯಕ ಯೋಜನೆಯಡಿ ರೂ.120ಲಕ್ಷಗಳವರೆಗೆ ಸಾಲ ನೀಡುತ್ತಿದ್ದು, 44 ಗುಂಪುಗಳಿಗೆ 3.21 ಕೋಟಿ ಸಾಲ ನೀಡಲಾಗಿದೆ. ಇದರ ವಾಸೂಲಾತಿ ಕೂಡ ಶೇ99.32ರಷ್ಟಿದೆ. ಸುಮಾರು 144 ಬೀದಿ ಬದಿ ವ್ಯಾಪಾರಿಗಳಿಗೆ 11.12 ಲಕ್ಷಗಳಷ್ಟು ಅಸಲು ಹಾಗೂ ಬಡ್ಡಿ ಮನ್ನಾ ಮಾಡುತ್ತಿರುವುದು ವಿಶೇಷವಾಗಿದೆ. ರಾಜ್ಯ ಸರ್ಕಾರದ ಬಡವರ ಬಂಧು ಮನ್ನಾ ಯೋಜನೆಯಡಿ ಇದನ್ನು ಮಾಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸುಮಾರು 1156 ಸದಸ್ಯರಿಗೆ 174.63ಲಕ್ಷ ಕೆಸಿಸಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.
2020-21ನೇ ಸಾಲಿನಲ್ಲಿ ಬ್ಯಾಂಕಿನಿಂದ ಜಿಲ್ಲೆಯ ಜನರಿಗೆ 4 ಚಕ್ರ ವಾಹನ ಖರೀದಿಸಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಸುಮಾರು 420 ಜನರಿಗೆ 31.02 ಕೋಟಿ ಸಾಲ ನೀಡಲಾಗಿದೆ. ದೀಪಾವಳಿ ಮತ್ತು ದಸರಾ ಅಂಗವಾಗಿ ವಿಶೇಷ ವಾಹನ ಸಾಲ ನೀಡಲಾಗುತ್ತಿದ್ದು, ಕೇವಲ 75 ಪೈಸೆ ಬಡ್ಡಿ ವಿಧಿಸಲಾಗುತ್ತದೆ. ಈ ಅವಕಾಶವನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಬ್ಯಾಂಕಿನ ಸಾಧನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಮುಂದೆ 1250 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. 25 ಕೋಟಿ ನಿವ್ವಳ ಲಾಭಗಳಿಸಬೇಕೇಂಬುದು ನಮ್ಮ ಅಭಿಲಾಶೆಯಾಗಿದೆ. ಮೊಬೈಲು ಬ್ಯಾಂಕಿಗ್, ಮೊಬೈಲ್ ಅಪ್ಲಿಕೇಷನ್, ರೂಪೇ ಡೆಬಿಟ್ ಕಾರ್ಡ್ ಮೈಕ್ರೋ ಎಟಿಎಂ ಮಿಷನ್ ಸೌಲಭ್ಯಗಳನ್ನು ಕೃಷಿಪತ್ತಿನ ಸಹಕಾರ ಸಂಘಗಳಿಗೆ ನೀಡಲಾಗುವುದು. ಸೊರಬ, ಶಿಕಾರಿಪುರ,
ಭದ್ರಾವತಿ ತಾಲ್ಲೂಕಿನ ಜಡೆ, ಸುಣ್ಣದಕೊಪ್ಪ, ಕಲ್ಲಿಹಾಳದಲ್ಲಿ ರೈತರ ಅನುಕೂಲಕ್ಕಾಗಿ ಹೊಸ ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಕಿಸನ್ ಕ್ರೆಡಿಟ್ ಕಾರ್ಡ್ಗಿಳನ್ನು ಹೊಂದಿರುವ ರೈತರಿಗೆ 50000ದವರೆಗೆ ಅಪಘಾತ ವಿಮೆ ಯೋಜನೆ ಈಗಾಗಲೇ ಜಾರಿಯಲ್ಲಿದ್ದು, 15 ರೈತರಿಗೆ 7.50 ಲಕ್ಷ ವಿಮಾ ಪರಿಹಾರ ದೊರೆತಿದೆ ಎಂದರು.
ಒಟ್ಟಾರೆ ಡಿಸಿಸಿ ಬ್ಯಾಂಕ್ ಎಲ್ಲಾ ಕಷ್ಟಗಳನ್ನು ದಾಟಿ ಈಗ ಮತ್ತೆ ತಲೆ ಎತ್ತಿ ನಿಂತಿದೆ ಮತ್ತು ದೇಶದಲ್ಲಿಯೇ ಮಾದರಿ ಎನಿಸಿದೆ. ಇದು ನಮಗೆ ಅತ್ಯಂತ ಸಂಭ್ರಮ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ, ನಿರ್ದೇಶಕರಾದ ಯೋಗೀಶ್ ಜೆ.ಪಿ., ಎಸ್.ಪಿ.ದಿನೇಶ್, ಶ್ರೀಧರ್, ಎನ್.ಎಸ್.ಶ್ರೀಪಾದರಾವ್, ಎಂ.ಡಿ.ಮಂಜಪ್ಪ, ಜಿ.ಎಸ್.ಸುಧೀರ್ ಸೇರಿದಂತೆ ಹಲವರಿದ್ದರು.
ತನಿಖೆ ನಡೆಸಿ ಕ್ರಮ
ಜಾವಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ನಡೆದ ಘಟನೆಗೂ ಡಿಸಿಸಿ ಬ್ಯಾಂಕಿಗೂ ಯಾವ ಸಂಬಂಧಯಿಲ್ಲ. ಅಲ್ಲಿ ದಾಸ್ತಾನು ಇಲ್ಲದ ಅಡಿಕೆಗೆ 30 ಲಕ್ಷ ರೂ. ಸಾಲ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಡಿಕೆ ಅಡಮಾನ ಇಟ್ಟುಕೊಳ್ಳದೆ ಈ ಸಾಲ ನೀಡಲಾಗಿದೆ. ಇದನ್ನು ನೀಡಿದವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಡಿಸಿಸಿ ಬ್ಯಾಂಕ್ ವತಿಯಿಂದಲೂ ತನಿಖೆ ನಡೆಸಲಾಗುತ್ತಿದೆ. ನಿಯಮ 65ರ ಅಡಿಯಲ್ಲಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ಮೇಲೆ ಖಂಡಿತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.