Site icon TUNGATARANGA

ಶಿವಮೊಗ್ಗದಲ್ಲಿ ದಸರಾಗೆ ವೈಭವದ ಆರಂಭ, ಸಮಗ್ರ ಚಿತ್ರ ಮಾಹಿತಿ ನೋಡಿ

ಶಿವಮೊಗ್ಗ;
ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವ – 2021’ಕ್ಕೆ ಇಂದು ಅಧಿಕೃತವಾಗಿ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಕೊರೋನಾ ಕಾರಣದಿಂದ ಕಳೆದ ವರ್ಷ ಕಳೆಗುಂದಿದ್ದ ಶಿವಮೊಗ್ಗ ದಸರಾಕ್ಕೆ ಅದ್ದೂರಿ ಚಾಲನೆ ದೊರೆಯಿತು.
ಮಹಾನಗರ ಪಾಲಿಕೆ ಆವರಣದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಿವಮೊಗ್ಗ ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ತೆರೆದ ವಾಹನದಲ್ಲಿ ಬೆಳ್ಳಿಯ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ನಡೆಯಿತು. ಮಂಗಳವಾದ್ಯಗಳು, ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.


ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದ ವರೆಗೂ ಸಾಗಿದ ಮೆರವಣಿಗೆಯಲ್ಲಿ ಮೇಯರ್, ಉಪ ಮೇಯರ್ ಸೇರಿದಂತೆ ದಸರಾ ಸಮಿತಿಯ ಸದಸ್ಯರು, ಪಾಲಿಕೆ ಸದಸ್ಯರು, ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿದ್ದರು.
ದೇವಿಯನ್ನು ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿ, ಪ್ರತಿದಿನ ವಿಶೇಷ ಅಲಂಕಾರದೊಂದಿಗೆ ಪೂಜಿಸಲಾಗುವುದು.


ಒಂಭತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪರಿಸರ ದಸರಾ, ಯುವ ದಸರಾ, ಮಹಿಳಾ ದಸರಾ, ಸಾಂಸ್ಕೃತಿಕ ದಸರಾ, ಮಕ್ಕಳ ದಸರಾ, ಯೋಗ ದಸರಾ, ರೈತದಸರಾ, ರಂಗದಸರಾ, ಆಹಾರದಸರಾ, ದಸರಾ ಚಲನಚಿತ್ರೋತ್ಸವ.. ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಶಿವಮೊಗ್ಗ ದಸರಾ ಮಹೋತ್ಸವ ಆಚರಿಸಲಾಗುವುದು.


ಮಹಾನಗರ ಪಾಲಿಕೆ ವತಿಯಿಂದ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಿದರೆ, ರವೀಂದ್ರನಗರದ ಶ್ರೀ ಪ್ರಸನ್ನ ಬಲಮುರಿ ಗಣಪತಿ ದೇವಾಲಯ, ಬೊಮ್ಮನಕಟ್ಟೆಯ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ, ಕೋಟೆ ಮಾರಿಕಾಂಬ ದೇವಾಲಯ, ಅಂಬಾಭವಾನಿ ಜೈನಮಂದಿರ, ಶುಭಮಂಗಳ ಶನೈಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ಶಕ್ತಿ ದೇವತೆಯ ವಿಶೇಷ ಅಲಂಕಾರಗಳಲ್ಲಿ ಪ್ರತಿಷ್ಠಾಪಿಸಿ ಆರಾಧನೆ ಮಾಡಲಾಗುತ್ತದೆ.
ಅದೇರೀತಿ ನಗರದ ವಿವಿಧೆಡೆ ಮನೆಗಳಲ್ಲಿ ದಸರಾ ಬೊಂಬೆ ಪ್ರದರ್ಶನಗಳನ್ನು ಕೂಡ ಏರ್ಪಡಿಸಲಾಗಿದೆ.
ನವರಾತ್ರಿ ಆರಂಭವಾದ ಹಿನ್ನೆಲೆಯಲ್ಲಿ ಹೂವು, ಹಣ್ಣು. ತರಕಾರಿಗಳ ಮಾರಾಟ ಕೂಡ ಭರ್ಜರಿಯಾಗಿತ್ತು. ಒಟ್ಟಾರ ನಾಡಹಬ್ಬ ದಸರಾ ಅತ್ಯಂತ ಸಡಗರ ಸಂಭ್ರಮದಿಂದ ನಡೆಯುತ್ತಿದೆ.

Exit mobile version