Site icon TUNGATARANGA

ಬೆವರು ಸುರಿಸಿ ದುಡಿಯುವ ಶ್ರಮ ಜೀವನವೇ ಶ್ರೇಷ್ಠ: ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ ಜಿ

ಶಿವಮೊಗ್ಗ: ನಮ್ಮ ದೈನಂದಿನ ಜೀವನದಲ್ಲಿ ಕನಿಷ್ಠ ದೈಹಿಕ ಶ್ರಮವಾದರೂ ಬೇಕಾಗುತ್ತದೆ. ಬೆವರು ಸುರಿಸಿ ದುಡಿಯುವ ಶ್ರಮ ಜೀವನವೆ ಶ್ರೇಷ್ಠ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ ಜಿ ಹೇಳಿದರು.

ನಗರದ ಸಹ್ಯಾದ್ರಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ, ಮೂರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಸಂಯುಕ್ತ ಆಶ್ರಯದಲ್ಲಿ 52ನೇ ಎನ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡುತ್ತಾ, ಎನ್.ಎಸ್.ಎಸ್. ಶ್ರಮ ಜೀವನಕ್ಕೆ ಜಯವಾಗಲಿ ಎಂಬ ಧ್ಯೇಯವಾಕ್ಯ ಹೊಂದಿದೆ. ನನಗಲ್ಲ ನಿನಗೆ ಎನ್ನುವ ಸಮಾಜಮುಖಿ ಚಿಂತನೆಯ ಮೂಲಕ ಸದೃಢ ರಾಷ್ಟ್ರ ನಿರ್ಮಾಣದ ಕನಸು ಯುವ ಜನತೆಯ ಮೇಲಿz ಎಂದರು.
ಪ್ರಾಚಾರ್ಯ ಡಾ. ಧನಂಜಯ ಕೆ.ಬಿ. ಮಾತನಾಡುತ್ತಾ, ಎನ್‌ಎಸ್‌ಎಸ್ ನಮ್ಮನ್ನು ಕ್ರಿಯಾಶೀಲಗೊಳಿಸುವ ಒಂದು ವೇದಿಕೆ. ಮನುಷ್ಯತ್ವ ಮಾನವೀಯತೆಯನ್ನು ಬೆಳೆಸಲು ಸಹಕಾರಿ. ಇಂದಿನ ಜಗತ್ತಿಗೆ ಹಣಕ್ಕಿಂತ ಒಳ್ಳೆಯ ಗುಣಯುಕ್ತ ವ್ಯಕ್ತಿಗಳು ಅವಶ್ಯಕವಾಗಿದ್ದಾರೆ. ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ಎನ್.ಎಸ್.ಎಸ್. ಸೇರಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.


ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ. ವೀಣಾ ಎಂ.ಕೆ., ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ವಾಗ್ದೇವಿ ಎಚ್.ಎಂ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ಕಾರ್ಯಕ್ರಮಾಧಿಕಾರಿಗಳಾದ ಡಾ. ಹಾಲಮ್ಮ ಎಂ., ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ.ಪ್ರಕಾಶ ಬಿ.ಎನ್., ಪರಶುರಾಮ., ಡಾ.ವೆಂಕಟೇಶ್, ಡಾ. ಶುಭಾ ಮರವಂತೆ ಮತ್ತಿತರರಿದ್ದರು.

Exit mobile version