Site icon TUNGATARANGA

ಸಕ್ರೆಬೈಲ್ ಆನೆ ಬಿಡಾರದ ಹಿರಿಯಜ್ಜಿ ಗಂಗೆ ಇನ್ನಿಲ್ಲ..,

ರಾಜ್ಯದ ಆನೆ ಬಿಡಾರಗಳಲ್ಲಿನ ಹಿರಿಯ ಗಜರಾಣಿ ಎಂಬ ಹಿರಿಮೆ

ಶಿವಮೊಗ್ಗ, ಸೆ.26:
ರಾಜ್ಯದ ಎಂಟು ಆನೆ ಬಿಡಾರಗಳಲ್ಲಿನ ಹಿರಿಯ ಆನೆ ಎಂದೇ ಗುರುತಿಸಿಕೊಂಡಿದ್ದ ಶಿವಮೊಗ್ಗ ಸಕ್ರೇಬೈಲಿನ ಹಿರಿಯಜ್ಜಿ ಎಂದೇ ಕರೆಸಿಕೊಳ್ಳುತ್ತಿದ್ದ ಗಂಗೆ ಇಂದು ಸಾವನ್ನಪ್ಪಿದ್ದಾಳೆ.
ಸುಮಾರು 80ರಿಂದ 85 ವರುಷ ವಯಸ್ಸಾದ ಹಿನ್ನಲೆಯಲ್ಲಿ ಗಂಗೆ ಸಹಜವಾದ ಸಾವು ಕಂಡಿದ್ದಾಳೆ. ಕಳೆದ ಎರಡು ವರುಷಗಳಿಂದ ಇಲ್ಲಿನ ವೈದ್ಯರಾದ ಡಾ. ವಿನಯ್ ನೇತೃತ್ವದಲ್ಲಿ ಮಾವುತರು ಚಿಕಿತ್ಸೆ ನೀಡುತ್ತಿದ್ದರು. ಅಜ್ಜಿಯಷ್ಟೇ ಪ್ರೀತಿಯ ಅಕ್ಕರೆಯಿಂದ ಗಂಗೆ ವಯೋಸಹಜ ಬದುಕಲ್ಲೂ ಹರುಷದಿಂದ ಇದ್ದದ್ದು ವಿಶೇಷ.
ಸಕ್ರೇಬೈಲಿನ ಬಿಡಾರಕ್ಕೆ 1971 ರಲ್ಲಿ ಕಾಕನಕೋಟೆಯಿಂದ ತರಲಾಗಿತ್ತು.

ಶಿವಮೊಗ್ಗ ದಸರಾ, ಸಾಗರದ ಮಾರಿಕಾಂಬಾ ಜಾತ್ರೆಯ ಹತ್ತಾರು ಕಾರ್ಯಕ್ರಮಗಳಲ್ಲಿ ಮೌನಸ್ವರೂಪಿಯಾಗಿ ವಿಜೃಂಬಿಸಿದ್ದ ಗಂಗೆ ಅನುಭವಿ ಎಂಬ ಕಾರಣಕ್ಕೆ ರಾಜ್ಯದ ಯಾವುದೇ ಖೆಡ್ಡಾ ಆಪರೇಷನ್ ನಡೆದರೂ ಬಳಸಿಕೊಳ್ಳ ಲಾಗುತ್ತಿತ್ತು. ಎಂತಹ ಖೆಡ್ಡಾ ಆಪರೇಷನ್, ವೀಲಿಂಗ್ ಆಪರೇಷನ್ ಆದರೂ ಗಂಗೆಳನ್ನ ಬಳಸಿಕೊಂಡು ಆನೆಯನ್ನ ಹಿಡಿಯಲಾಗುತ್ತಿತ್ತು. ಅಲ್ಲಿಯೂ ಗಂಗೆ ತಾಯಿಯಂತೆ ವರ್ತಿಸುತ್ತಿದ್ದರೆಂದು ಡಾ. ವಿನಯ್ ತಿಳಿಸುತ್ತಾರೆ.

ಗಂಗೆ ಕಳೆದ ಎರಡು ವರ್ಷಗಳಿಂದ ವಯೋ ಸಹಜ ಕಾಯಿಲೆಗೆ ಜಾರಿದ್ದಳು. ಕಳೆದ 15 ದಿನಗಳಿಂದ ಆಹಾರ ಸೇವನೆಯನ್ನ ಕಡಿಮೆ ಮಾಡಿತ್ತು. ಕಾಲಿನಲ್ಲಿ ಬಾವು ಕಾಣಿಸಿಕೊಂಡಿತ್ತು.
ಆದರೆ ಇಂದು ಬೆಳಿಗ್ಗೆ ನಿಧನಳಾಗಿದ್ದಾಳೆ.
ಬಿಡಾರದ ಕ್ರಾಲ್ ಬಳಿ ಗಂಗಳ ಅಂತ್ಯ ಸಂಸ್ಕಾರವನ್ನ ನಡೆಸಲಾಗಿದೆ ಎಂದು ಡಾ.ವಿನಯ್ ಮಾಹಿತಿ ನೀಡಿದ್ದಾರೆ.
ಗಂಗಾ ಸಾವಿನಿಂದ ಬಿಡಾರದಲ್ಲಿ ಆನೆಯ ಸಂಖ್ಯೆ 21 ಕ್ಕೆ ಇಳಿದಿದೆ. ಹದಿನೇಳು ಗಂಡು ಹಾಗೂ ನಾಲ್ಕು ಹೆಣ್ಣು ಆನೆಗಳಿವೆ. ಭಾನುಮತಿ, ಕುಂತಿ, ನೇತ್ರಾ, ಅವರುಗಳ ಸಾಮ್ರಾಜ್ಯದಲ್ಲಿ ಹೊಸ ಕನಸು ಕಾಣಬೇಕಿದೆ.

ಸುದ್ದಿ ಮಾಹಿತಿ, ಜಾಹೀರಾತು ನೀಡಲು ಸಂಪರ್ಕಿಸಿ 9448256183

Exit mobile version