Site icon TUNGATARANGA

ಕಿಮ್ಮನೆ ನನಗಿಂತ ದೊಡ್ಡವರೆನ್ನುತ್ತಲೇ ಕಿಕ್ ನೀಡಿದ ಮಂಜುನಾಥ ಗೌಡ್ರು..!


ಶಿವಮೊಗ್ಗ, ಸೆ.26:
ಮಾಜಿ ಸಚಿವರು ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಅವರು ಬರೆದಿರುವ ಬಹಿರಂಗ ಪತ್ರದ ಬಗ್ಗೆ ಆರ್.ಎಂ. ಮಂಜುನಾಥ್ ಗೌಡರು ದೊಡ್ಡವರು ಎನ್ನುತ್ತಲೇ ಜೋಕಿನೆಳೆಯ ಸಣ್ಣ ಕಿಕ್ ನೀಡಿದ್ದಾರೆ.
ಕಲ್ಲುಕೊಪ್ಪದಿಂದ ತೀರ್ಥಹಳ್ಳಿಯವರೆಗೆ ಶರಾವತಿ ಸಂತ್ರಸ್ತರಿಗಾಗಿ ಹಕ್ಕುಪತ್ರ ನೀಡಲು ಒತ್ತಾಯಿಸಿ ಹಮ್ಮಿಕೊಳ್ಳಲಾದ ಪಾದಯಾತ್ರೆಗೂ ಮುನ್ನ ತಮ್ಮನ್ನ ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಪತ್ರ ನೀಡುವ ಪುಣ್ಯದ ಕೆಲಸದ ವೇಳೆ ನನ್ನದು ಮತ್ತು ಕಿಮ್ಮನೆ ನಡುವಿನ ಬಹಿರಂಗ ಪತ್ರದ ಬಗ್ಗೆ ಮಾತನಾಡುವುದು ಬೇಡ ಎಂದು ಮೊದಲಿಗೆ ನಿರಾಕರಿಸಿದರು.


ಕಿಮ್ಮನೆ ರತ್ನಾಕರ್ ಅವರಿಗೆ ನನ್ನ ಮೇಲೆ ಪ್ರೀತಿ. ಅವರು ನನಗಿಂತ ಎರಡು ವರುಷ ದೊಡ್ಡವರು. ಅದಕಾಗಿ ನನ್ನ ಮೇಲಿನ ಬಹಿರಂಗ ಪತ್ರ ಬರೆದಿರುವುದು. ಅವರಿಗೆ ನನ್ನ ಮೇಲೆ ಆವಾಗವಾಗ ಪ್ರೀತಿ ಹುಟ್ಟುತ್ತದೆ. ಹಾಗಾಗಿ ಪತ್ರ ಬರೆಯುತ್ತಾರೆ. ಅದನ್ನ ನಾವು ಆಶೀರ್ವಾದ ಎಂದು ತಿಳಿದುಕೊಳ್ಳೋಣವೆಂದು ಹೇಳಿದರು.
ತಾವುಗಳು ಏನಾದರು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್.ಎಂ.ಎಂ ಸರಿಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ನಿರಾಕರಿಸಿದ ಅವರು, ಸರಿಪಡಿಸಿಕೊಳ್ಳಲು ನಾನಂತು ಜಗಳವಾಡಿಲ್ಲ ಹಾಗಾಗಿ ಸರಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ನಮ್ಮ ಮನಸ್ಸುಗಳನ್ನ ಸರಿಪಡಿಸಿಕೊಳ್ಳೋಣ ವೆಂದರು.


ನಾವು ಕಾಂಗ್ರೆಸ್ ನವರು ವಿಪಕ್ಷದ ಕೆಲಸ ಮಾಡಬೇಕಿದೆ. ಸರ್ಕಾರದ ತಪ್ಪುಗಳನ್ನ ಜನರಿಗೆ ತಲುಪಿಸಬೇಕಿದೆ. ಜನರಿಗೆ ಎಚ್ಚೆತ್ತಿಸಬೇಕಿದೆ. ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕಿದೆ. ಈ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪನವರ‌ ಜೊತೆಗೆ ಹೋರಾಡುವುದೇ ಸಂತೋಷದ ಕೆಲಸವಾಗಿದೆ.
ನಾವು ಅವರಂತೆ ಹೋರಾಡಲು ಸಾಧ್ಯವಾಗದಿದ್ದರು ಅವರು ಹಾಕಿಕೊಟ್ಟ ದಾರಿಯಲ್ಲಿಯಾದರೂ ಹೋರಾಡಬೇಕಿದೆ. ಎಂ ಎಲ್ ಎ ಚುನಾವಣೆ ಹಾಗೂ ಪಕ್ಷದಲ್ಲಿನ ಸ್ಥಾನಮಾನಗಳಿಗಾಗಿ ನಾನು ಹೋರಾಡುವುದಿಲ್ಲ. ನಮ್ಮ ಪಕ್ಷ ರಾಷ್ಟ್ರೀಯ ಪಕ್ಷ ಏನು ಹೇಳುತ್ತದೆಯೋ ಅದನ್ನ ಮಾಡುತ್ತೇನೆಂದರು.
ಆರ್.ಎಂ ಮಂಜುನಾಥ್ ಗೌಡರು ಯಾವ ಪಕ್ಷಕ್ಕೆ ಹೋಗುತ್ತಾರೋ ಆ ಪಕ್ಷದಲ್ಲಿ ಟಿಕೇಟ್ ಗಿಟ್ಟಿಸಿಕೊಳ್ಳಲು ಶ್ರಮಿಸುತ್ತಾರೆ ಎಂದು ಕಿಮ್ಮನೆ ರತ್ನಾಕರ್ ಬಹಿರಂಗ ಪತ್ರದಲ್ಲಿ ಒತ್ತಿ ಒತ್ತಿ ಹೇಳಿದ್ದಾರೆ ಎಂಬ ಪ್ರಶ್ನೆಗೂ ಪ್ರತಿಕ್ರಿಯಿಸಿದ ಮಂಜುನಾಥ್ ಗೌಡರು, 2001 ರಲ್ಲಿ ಕಾಂಗ್ರೆಸ್ ಸೇರಿದೆ. 2004 ರವರೆಗೆ ಪಕ್ಷ ಕಟ್ಟಿದೆ. 2004 ರಲ್ಲಿ ನಡೆದ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ ಅವರಿಗೆ ಪಕ್ಷ ಟಿಕೇಟ್ ಕೊಟ್ಟಿತು. ಆಗ ಅವರ ಪರವಾಗಿ ಕೆಲಸಮಾಡಿದೆ. ಆ ಚುನಾವಣೆಯಲ್ಲಿ ಕಿಮ್ಮನೆ ಸೋತರು. 2008ರವರೆಗೆ ಕಾಂಗ್ರೆಸ್ ನಲ್ಲಿಯೇ ಇದ್ದೆ. 2008 ರಲ್ಲೂ ಪಕ್ಷ ಅವರಿಗೆ ಟಿಕೇಟ್ ಕೊಟ್ಟಿತು. ಆಗ ಗೆಲ್ಲಿಸಿದ್ದು ನಾವೇ. ಚುನಾವಣೆ ನಡೆದು 6 ತಿಂಗಳ ನಂತರ ಪಕ್ಷ ಬಿಟ್ಟೆ. ಅಗಲೇ ಟಿಕೇಟಿಗಾಗಿ ಹೋರಾಡಲಿಲ್ಲ. ಈಗಲೂ ಟಿಕೆಟ್ ಗಾಗಿ ಹೋರಾಡುತ್ತಿಲ್ಲ ಮುಳುಗಡೆ ಸಂತ್ರಸ್ತ್ರರ ವಿಷಯ ಕೈಗೆತ್ತಿಕೊಂಡಿದ್ದೇನೆ. ಅವರಿಗೆ ನ್ಯಾಯಕೊಡಿಸಬೇಕಿದೆ ಎಂದರು.

Exit mobile version