Site icon TUNGATARANGA

ಜೀವ ತೇಯ್ದು ಹಲವರ ಬದುಕಿಗೆ ಬೆಳಕಾದ ಕವನ, ಮಾನವೀಯತೆ ಮೆರೆದ ಕುಟುಂಬ

ಸಾವಿನಲ್ಲೂ ಸಾರ್ಥಕತೆ ಮೆರೆದ ಶಿಕಾರಿಪುರ ಗಾರ್ಮೆಂಟ್ಸ್, ಹಳ್ಳೂರಿನ ಯುವತಿ

ಎಸ್.ಕೆ.ಗಜೇಂದ್ರ ಸ್ವಾಮಿ
ಶಿವಮೊಗ್ಗ, ಸೆ.೧೪:
ಮಾನವ ಜನ್ಮ ನಮಗೆ ದೊರಕಿದ್ದು, ಹಿಂದಿನ ಜನ್ಮದ ಪುಣ್ಯ ಫಲ ಅದನ್ನು ಸದುಪಯೋಗಪಡಿಸಕೊಳ್ಳಬೇಕು ಎಂಬ ಮಾತು ಸತ್ಯ.
ಪರೋಪಕಾರಂ ಇದಂ ಶರೀರಂ ಎನ್ನುವ ಮಾತಿನಂತೆ ಜೀವನದಲ್ಲಿ ಸ್ವಲ್ಪವಾದರೂ ಪರರಿಗೆ ನೀಡುವ ಮಹಾ ಗುಣವನ್ನು ಬೆಳೆಸಿಕೊಂಡಿರಲೇ ಬೇಕು. ನಾವು ಈ ಜಗತ್ತಿಗೆ ಏನು ನೀಡುತ್ತೇವೆಯೋ ಅದನ್ನೇ ಮತ್ತೆ ಪಡೆಯುತ್ತೇವೆ. ಅಂದರೆ ಪ್ರೀತಿ, ಅನುಕಂಪ, ಸಹಾಯ ಹಸ್ತದ ಜೊತೆ ನಮ್ಮ ದೇಹದ ದಾನ ಅದರೊಳಗಿನ ಅಂಗಾಂಶಗಳ ದಾನ ಸಾವಿನಲ್ಲೂ ಸ್ವರ್ಗವನ್ನು ಕಟ್ಟಿಕೊಡುತ್ತದೆ.


ಇಂತಹದೊಂದು ಉದಾಹರಣೆ ವಿವರಣೆಯ ಪೀಠಿಕೆ ಇಲ್ಲಿ ಸಂದರ್ಭೋಚಿತವಾದ ಹಾಗೂ ಶ್ಲಾಘನೀಯವಾದ ಮನಮುಟ್ಟುವ ಕಾರ್ಯದಿಂದ ಎಂದರೆ ತಪ್ಪಾಗಲಿಕ್ಕಿಲ್ಲ. ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಯುವತಿಯ ದುರಾದೃಷ್ಠ ಅಪಘಾತವೊಂದರಲ್ಲಿ ಸಿಲುಕಿದ್ದು, ನಂತರದ ಸಾವು ಬದುಕಿನ ಹೋರಾಟದ ನಡುವೆ ಮನೆಯವರು, ಸಂಬಂಧಿಕರು ಕೈಗೊಂಡ ನಿರ್ಧಾರದಿಂದ ಆ ಯುವತಿಯ ದೇಹದ ಭಾಗಗಳು ಈಗಲೂ ಮತ್ತೋರ್ವರ ದೇಹದಲ್ಲಿ ಜೀವಂತಿಕೆಯನ್ನು ಉಳಿಸಿಕೊಂಡಿವೆ.


ವಿವರಣೆ:
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಶಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ತಾಲೂಕಿನ ಹಳ್ಳೂರಿನ ಸುಮಾರು ೨೦ ವರ್ಷದ ಕವನ ಈಗ ನಾಲ್ಕೈದು ಜೀವಗಳಿಗೆ ಬದುಕಿನ ಕವನ ಬರೆದು ಕಟ್ಟಿಕೊಟ್ಟಿದ್ದಾಳೆ. ಕವನ ಹಳ್ಳೂರಿನ ದಿವಂಗತ ಮರಳಸಿದ್ದಯ್ಯ ಹಾಗೂ ವಸಂತಮ್ಮ ದಂಪತಿಗಳ ಮೂವರು ಮಕ್ಕಳಲ್ಲಿ ಒಬ್ಬಳು. ಅಮ್ಮ  ಅಂಗನವಾಡಿ ಆಯಾ ಆಗಿ ಕೆಲಸ ಮಾಡುತ್ತಿದ್ದಾರೆ. ಅಕ್ಕನ ಜೊತೆ ಕವನ ಗಾರ್ಮೆಂಟ್ಸ್‌ಗೆ ಹೋಗಿ ದುಡಿದು ಬದುಕು ರೂಪಿಸಿಕೊಂಡಿದ್ದರು. ಈ ನಡುವೆ ದೇಶದೆಲ್ಲೆಡೆ ಗೌರಿಯನ್ನು ಸ್ವಾಗತಿಸುವ ಸಂದರ್ಭದಲ್ಲಿ ನಾಲ್ವರ ಬದುಕಿಗೆ ಅಪಘಾತವೊಂದು ದುರಂತ ತಂದಿತ್ತು. ಸೆ.೦೯ರ ಗುರುವಾರ ಸಂಜೆ ಶಿಕಾರಿಪುರದಿಂದ ಕೆಲಸ ಮುಗಿಸಿಕೊಂಡು ಮಾರುತಿ ಓಮಿನಿಯಲ್ಲಿ ಬರುತ್ತಿದ್ದಾಗ ಎದುರಿಗಿದ್ದ ಎತ್ತಿನಗಾಡಿಗೆ ಜಾಲಕನ ಅಜಾಗರೂಕತೆಯಿಂದ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವು ಕಂಡರು. ಕವನ ಸೇರಿದಂತೆ ಹಲವರು ಗಂಭೀರ ಗಾಯಗೊಂಡರು.


ಹೊನ್ನಾಳಿ ರಸ್ತೆಯ ಸೊರಟೂರು ಬಳಿ ಈ ಅಪಘಾತ ಸಂಭವಿಸಿದ್ದ ಸುದ್ದಿ ಇಡೀ ಹಳ್ಳೂರಿನಲ್ಲಿ ಹಬ್ಬದ ದಿನವೇ ಸೂತಕದ ಛಾಯೆ ಮೂಡಿಸಿತು. ಕವನ ಅವರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಯಿತು. ಇಲ್ಲಿನ ಪ್ರಾಥಮಿಕ ಚಿಕಿತ್ಸೆ ಫಲಪ್ರಧವಾಗಲಿಲ್ಲ. ನಂತರ ನಾರಾಯಣ ಹೃದಯಾಲಯಕ್ಕೆ ಹೋದರು. ಅಲ್ಲಿನ ದುಬಾರಿ ದರ ನಿಭಾಯಿಸುವುದು ಕಷ್ಟವೆನಿಸಿತು. ಅನುಭವಿ ವೈದ್ಯರು ಎಂದೇ ಕರೆಸಿಕೊಳ್ಳುವ ಹೋಮಿಯೋಪತಿ ಔಷಧ ವಿತರಕರಾದ ಶಿವಮೊಗ್ಗ ದುರ್ಗಿಗುಡಿಯ ಪಂಚಾಕ್ಷರಪ್ಪ ಹಾಗೂ ಇತರರು ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿದರು.
ಅಪಘಾತದಲ್ಲಿ ಕವನ ತಲೆಗೆ ಹಾಗೂ ಕಾಲಿಗೆ ಗಂಭೀರವಾದ ಹೊಡೆತ ಬಿದ್ದಿತ್ತು. ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕವನ ಅವರ ಬ್ರೈನ್ ಸಾವು ಕಂಡಿತ್ತು. ಜೀವಂತಿಕೆಯ ಪ್ರಾಣಿಯಂತೆ ಕವನ ಬದುಕಬೇಕಾದ ಅನಿವಾರ್ಯತೆ ಎದುರಾಗಿತ್ತು. ಅಮ್ಮ ಇರುವ ತನಕ ಆಕೆಯನ್ನು ನೋಡಿಕೊಳ್ಳಬಹುದು. ನಂತರದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವವರ‍್ಯಾರು. ದೇಹದ ಇತರ ಭಾಗಗಳು ಸಹ ಬಿದ್ದ ಏಟಿಗೆ ಸರಿಯಾಗುವ ಲಕ್ಷಣಗಳು ಕಂಡು ಬರಲಿಲ್ಲ. ಅಂತಿಮವಾಗಿ ವಸಂತಮ್ಮ ಹಾಗೂ ಕವನ ಸಹೋದರಿಯರನ್ನು ಒಪ್ಪಿಸಿದ ಕೆಲವರು ಹಾಗೂ ಅಲ್ಲಿನ ವೈದ್ಯ ಸಮೂಹ ಕವನ ದೇಹದ ಹೃದಯ, ಲಿವರ್, ಕಿಡ್ನಿ, ಕಣ್ಣುಗಳು ಚರ್ಮ ಸೇರಿದಂತೆ ಇನ್ನೊಬ್ಬರ ಬದುಕಲ್ಲಿ ಬೆಳಕಾಗುವ, ಆ ಬದುಕಲ್ಲಿ ನಕ್ಷತ್ರವಾಗುವ ಎಲ್ಲಾ ಭಾಗಗಳನ್ನು ಝಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಸಾಗಿಸಲಾಯಿತು.
ಕವನ ಬಡತನದಲ್ಲೇ ಬದುಕಿ, ಬಡತನದ ಕಷ್ಟಗಳ ನಡುವೆ ಬದುಕು ಕಟ್ಟಿಕೊಂಡ ಹೆಣ್ಣುಮಗಳು ಸಹೋದರಿಯರ ಜೊತೆ ತಂದೆಯನ್ನು  ಕಳೆದುಕೊಂಡು ತಾಯಿಯ ಆಸರೆಯಲ್ಲಿ ನೂರಾರು ಕನಸ್ಸು ಕಟ್ಟಿಕೊಂಡ ಕವನ ಅವರ ಕನಸ್ಸುಗಳು ಇನ್ನೊಂದು ದೇಹದ ಮನದಂಗಳದಲ್ಲಿ ಅರಳಲಿ, ಚಿಗುರಲಿ, ಹಾಗೆಯೇ ಬದುಕಿನ ಆಸೆಗಳು ಮನವ ಭಾವನೆಗಳು ಝೆಂಕರಿಸಲಿ. ಬಡತನದ ನಡುವೆ ಸ್ವಸ್ಥ ಸಮಾಜದ ಬಾಳಿಗೆ ಪೂರಕವಾಗಿದ್ದ ಕುಟುಂಬದ ಕುಡಿಯೊಂದು ಸಾವಿನಲ್ಲೂ ಸಾರ್ಥಕತೆ ಮೆರೆದದ್ದು, ವಿಶೇಷ. ಇಂತಹ ಘಟನೆಗೆ ಕುಟುಂಬದ ಗಟ್ಟಿ ಹೃದಯದ ಮನಸ್ಸುಗಳು ತೆಗೆದುಕೊಂಡ ಧೈರ್ಯದ ನಿರ್ಧಾರ ಶ್ಲಾಘನೀಯ. ಆ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ.


ಓದುತ್ತಿರುವ ಒಬ್ಬ ಮಗಳನ್ನು ಹೊಂದಿರುವ ಬಡ ಕುಟುಂಬಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ, ಮಾನವೀಯ ಮನಸ್ಸಿನ ವ್ಯಕ್ತಿಗಳು ನೆರವು ನೀಡಲು ಕೋರಲಾಗಿದೆ.  ಸಂಪರ್ಕ ಸಂಖ್ಯೆ: ೯೬೨೦೦೨೩೮೨೦

ಬ್ಯಾಂಕ್ ವಿವರ: ನೆರವಾಗಿ
ವಸಂತಮ್ಮ/ ಮರಳಸಿದ್ದಯ್ಯ ಹಿರೇಮಠ್,
Bank: SBI, ಹಿರೇಕೆರೂರು,
Acc no: 30173677980,
Ifsc: SVIN0000260

Exit mobile version