Site icon TUNGATARANGA

ನಾಳೆ ಕಲ್ಲು ಕೋರೆಗಳ ಅನುಮತಿ ನವೀಕರಣ..?


ಕ್ರಶರ್‌ಗಳಿಗೆ ಅನುಮತಿ ನೀಡಿದವರು ಕೋರೆಗಳ ವಿಚಾರದಲ್ಲೇಕೆ ದಿವ್ಯಮೌನ!

ಅಭಿವೃದ್ಧಿ ಕಾರ್ಯಗಳಿಗೆ ಮರಳು, ಕಲ್ಲಿನ ವ್ಯವಸ್ಥೆ ಅತ್ಯಗತ್ಯ ಅದೇ ಬಗೆಯಲ್ಲಿ ಈ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುವ ಅಯಾ ಜಿಲ್ಲಾಡಳಿತಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವ್ಯಾಪ್ತಿಯನ್ನು ಬಳಸಿಕೊಂಡು ಕಾನೂನು ಬದ್ದವಾಗಿ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಳ್ಳುವುದು ಸತ್ಯವೂ ಹೌದು. ಆದರೆ ಈ ವ್ಯವಸ್ಥೆಯಲ್ಲಿ ಒಟ್ಟಾರೆಯಾಗಿ ಕೆಲ ತೊಡರುಗಳು ವ್ಯವಸ್ಥಿತತೆಗೆ ಧಕ್ಕೆ ತರುತ್ತಿದೆ.
ಇಂತಹದೊಂದು ಪೂರ್ವ ಪೀಠಿಕೆ ಹಾಕಲು ಕಾರಣ ಶಿವಮೊಗ್ಗ ಸರಹದ್ದಿನಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ. ಈ ವಿಚಾರ ಬಂದಾಕ್ಷಣ ಭಾರಿ ಸ್ಫೋಟ, ಐವರ ದುರ್ಮರಣ ಎಂಬ ಮಾತು ಜೊತೆಗೆ ಸೇರಿಕೊಳ್ಳುತ್ತದೆ. ಸ್ಫೋಟಕವನ್ನು ಸಾಗಿಸುವ ಸಂದರ್ಭದಲ್ಲಿ ನಡೆದ ಘಟನೆ ಇಡೀ ಶಿವಮೊಗ್ಗ ಸರಹದ್ದಿನ ಸಕ್ರಮಗಳಿಗೆ ಹೊಡೆತ ಕೊಟ್ಟಿದಲ್ಲದೇ ಅಕ್ರಮಗಳು ಹೇಳ ಹೆಸರಿಲ್ಲದಂತೆ ಮರೆಯಾದವು.
ಈ ನಡುವೆ ಶಿವಮೊಗ್ಗ ಹೊರವಲಯದ ಕಲ್ಲುಗಂಗೂರು, ಗೆಜ್ಜೇನಹಳ್ಳಿ, ಅಬ್ಬಲಗೆರೆ, ದೇವಕಾತಿಕೊಪ್ಪ, ಹುಣಸೋಡು ಮೊದಲಾದ ವ್ಯಾಪ್ತಿಯಲ್ಲಿ ಸುಮಾರು ೪೫ ಕ್ರಶರ್‌ಗಳಿಗೆ ಕಾನೂನುಬದ್ದ ಅನುಮತಿ ಇದೆ. ಆದರೆ ಈ ಭಾಗದಲ್ಲಿನ ಹಿಂದಿನ ಸಕ್ರಮ ಕಲ್ಲುಗಣಿಗಾರಿಕೆಯ ಕೋರೆಗಳ ಪರವಾನಿಗೆ ನವೀಕರಣವಾಗಿಲ್ಲ. ಅಲ್ಲಿ ಈಗ ಕಲ್ಲುಗಣಿಗಾರಿಕೆ ನಡೆಸಿದರೆ ಅದು ಅಕ್ರಮವಾಗುತ್ತಿದೆ. ಇದರ ಜೊತೆಗಿದ್ದ ಅಕ್ರಮ ಕಲ್ಲುಗಣಿಗಾರಿಕೆ ದಂಧೆಯೂ ಸಹ ಕಳ್ಳಾಟ ನಡೆಸುವ ವಿಫಲ ಯತ್ನಮಾಡುತ್ತಿದೆಯಷ್ಟೆ.
ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ನಾನಾ ದೊಡ್ಡ ದೊಡ್ಡ ಕಾಮಗಾರಿಗಳು ಅದರಲ್ಲೂ ಸರ್ಕಾರಿ ಕಾಮಗಾರಿಗಳು ನಡೆಯುತ್ತಿವೆ. ಇವುಗಳಿಗೆ ಮೂಲಭೂತ ಅವಶ್ಯಕತೆಯಾದ ಕಲ್ಲಿನ ವಿಧಗಳು ಬೇಕಿವೆ. ಈ ಭಾಗದಲ್ಲಿ ಕ್ರಶರ್‌ಗಳು ಅನುಮತಿ ಪಡೆದಿದ್ದರೂ ಸಹ ಮೂಲ ಸಂಪನ್ಮೂಲವಾದ ಕೋರೆ ಹಾಗೂ ಕಲ್ಲು ಸಿಗದೇ ಸ್ಥಗಿತಗೊಂಡಿವೆ. ಅಭಿವೃದ್ಧಿ ಪಥದ ಕಾರ್ಯಗಳಿಗೆ ಮೂಲಸಂಪನ್ಮೂಲಗಳು ಅನ್ಯ ಜಿಲ್ಲೆಗಳಿಂದ ಬರುವಂತಹ ಸ್ಥಿತಿ ಬಂದಿದೆ. ಇಲ್ಲಿಯೇ ಇರುವ ಸಂಪನ್ಮೂಲವನ್ನು ಬಳಸಿಕೊಳ್ಳದೇ ದುಬಾರಿ ಹಣ ನೀಡಿ ಹೊರ ಪ್ರದೇಶಗಳಿಂದ ಪಡೆಯುವ ಅಗತ್ಯವಾದರೂ ಏನು..?
ಕಲ್ಲುಗಣಿಗಾರಿಕೆಯಲ್ಲಿ ಜಿಲ್ಲೆಯ ಸುಮಾರು ೯೮ ಕ್ರಶರ್‌ಗಳಿಗೆ ಕಾನೂನು ಬದ್ಧ ಸಿ ಫಾರಂ ಅನುಮತಿ ಇದೆ. ಕಳೆದ ೨೧.೦೧.೨೦೨೧ರಂದು ಹುಣಸೋಡಿನಲ್ಲಿ ದುರ್ಘಟನೆ ನಡೆದ ಮೇಲೆ ಜಿಲ್ಲೆಯ ಬಹಳಷ್ಟು ಕ್ರಶರ್‌ಗಳು ಸಂಪೂರ್ಣ ಸ್ಥಗಿತಗೊಂಡಿವೆ. ೯೮ ಜೆಲ್ಲಿ ಕ್ರಶರ್‌ಗಳಿಗೆ ತಕ್ಕಂತೆ ಕೋರೆಗಳು ಲಭ್ಯವಿಲ್ಲ. ಅನಿವಾರ್ಯವಾಗಿ ಕ್ರಶರ್‌ಗಳು ಬಾಗಿಲು ಹಾಕುವ ಸಂದರ್ಭ ಬಂದಿದೆ. ಕ್ರಶರ್‌ಗೆ ಅನುಮತಿ ನೀಡಿದ ಜಿಲ್ಲಾಡಳಿತ ಕೋರೆಗಳ ಪರವಾನಿಗೆ ನವೀಕರಿಸಲು ಆಗಿರುವ ತೊಂದರೆಯಾದರೂ ಏನು..? ಶೆಟ್ಟಿ ಅಭಯಾರಣ್ಯದಿಂದ ಇಎಸ್‌ಜಡ್ ಕಾನೂನು ತೊಡಕು ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ತೊಡಕನ್ನು ಸರಿಪಡಿಸಿ ಕ್ರಶರ್ ಹಾಗೂ ಕೋರೆಗಳ ಉದ್ಯಮ ನಡೆಯುವಂತೆ ನೋಡಿಕೊಳ್ಳಬೇಕಿದೆ. ಇಲ್ಲವೇ ಅದೇ ಕಾನೂನಡಿ ಲಕ್ಷಾಂತರ ಬಂಡಾವಳ ಸುರಿದು ಸಕ್ರಮ ಕ್ರಶರ್ ನಡೆಸುತ್ತಿರುವವರಿಗೆ ಪರ್ಯಾಯ ಜಾಗ ಹಾಗೂ ಅಲ್ಲಿನ ಕ್ರಶರ್‌ಗಳಿಗೆ ಮೂಲಸಂಪನ್ಮೂಲ ಕೊಡಿಸುವ ಕೆಲಸ ಮಾಡಬಹುದಲ್ಲವೇ..?
ಇಲ್ಲಿ ಅಧಿಕಾರಿಗಳು ೨ ಗೋಡೆಯ ಮೇಲೆ ದೀಪವಿಡುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗದೆ. ಕ್ರಶರ್‌ಗಳಿಗೆ ಅನುಮತಿ ಕೊಟ್ಟ ಮೇಲೆ ಕೋರೆಗಳಿಗೆ ಅನುಮತಿ ಕೊಡದಿದ್ದರೆ ಕ್ರಶರ್‌ಗಳ ಅಗತ್ಯವಾದರೂ ಏನಿತ್ತು. ಸೂಕ್ತ ಸಮಂಜಸ ಪರಿಹಾರವನ್ನು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ರಕ್ಷಣಾ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಜೊತೆ ಚರ್ಚಿಸಿ ಅಗತ್ಯದ ಸಂಪನ್ಮೂಲಗಳು ದೊರಕುವಂತೆ ಮಾಡಬೇಕಿದೆ.

ಜಿಲ್ಲಾ ಸಂಘದಿಂದ ಭಾರಿ ಪ್ರತಿಭಟನೆ: ಹೊರಗಿನಿಂದ ಬರುವ ಕಲ್ಲುಗಳಿಗೆ ಮಾನವೀಯ ತಡೆ


ಶಿವಮೊಗ್ಗ ಜಿಲ್ಲಾ ಸ್ಟೋನ್ ಕ್ರಶರ್ ಹಾಗೂ ಕ್ವಾರಿ ಮಾಲೀಕರ ಸಂಘ ಕಳೆದ ಸೆ.1ರಿಂದ ಸದ್ದುಮಾಡದೇ ಕ್ರಶರ್‌ಗಳನ್ನು ನಡೆಸಲು ಕ್ವಾರೆಗಳ ಅನುಮತಿ ನವೀಕರಿಸಿ ಕೊಡಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿವಮೊಗ್ಗ ವ್ಯಾಪ್ತಿಗೆ ಹೊರ ಜಿಲ್ಲೆಗಳಿಂದ ಬರುವ ಕಲ್ಲುಗಳ ಲಾರಿಗಳನ್ನು ತಡೆದು ನಮಗೆ ನ್ಯಾಯ ದೊರಕಬೇಕಾಗಿದೆ. ದಯಮಾಡಿ ತಾವು ನೀಡಬೇಡಿ ಎಂದು ಅವರ ಮನವೊಲಿಸುವ ಮೂಲಕ ಸಂಪನ್ಮೂಲದ ಕೊರತೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಸಂಘ ಕಳೆದ ಆ.30ರಂದು ಸಭೆ ಸೇರಿ ಶೇ.೭೫ರಷ್ಟು ಕ್ರಶರ್‌ಗಳು ಕಲ್ಲುಸಿಗದೇ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ, ಇದನ್ನೇ ನಂಬಿಕೊಂಡಿರುವ ಮಾಲೀಕರು ಹಾಗೂ ಸಾವಿರಾರು ಕಾರ್ಮಿಕ ಕುಟುಂಬಗಳು ಹಿತದೃಷ್ಠಿಯಿಂದ ಸೆ.೦೧ರಿಂದ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಈಗಾಗಲೇ ಸಂಸದ ಬಿ.ವೈ.ರಾಘವೇಂದ್ರ, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ಶಾಸಕರಾದ ಆಯನೂರು ಮಂಜುನಾಥ್, ರುದ್ರೇಗೌಡ, ಅಶೋಕ್‌ನಾಯ್ಕ, ಆರ್.ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಸೇರಿದಂತೆ ಬಹುತೇಕ ಪ್ರಮುಖರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್.ಮಂಜುನಾಥ, ಪ್ರಧಾನಕಾರ್ಯದರ್ಶಿ ಎಸ್.ಮಂಜುನಾಥ್, ಉಪಾಧ್ಯಕ್ಷರಾದ ಡಿ.ಸೋಮಸುಂದರಂ, ಜಿ.ರಂಗನಾಥ್, ಖಜಾಂಚಿ ಎಸ್.ರವಿಶಂಕರ್ ಸೇರಿದಂತೆ ಮಾಲೀಕರು ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿದ್ದರು.


ನಾಳೆ ಸಭೆ..?
ಶಿವಮೊಗ್ಗ ಜಿಲ್ಲಾಡಳಿತ ನಾಳೆ ಇದೇ ಕಲ್ಲುಗಣಿಗಾರಿಕೆ ವಿಚಾರ ಕುರಿತು ಜನಪ್ರತಿನಿಧಿಗಳು ಹಾಗೂ ಕ್ರಶರ್ ಮಾಲೀಕರೊಂದಿಗೆ ಸೆ.೦೫ರ ಭಾನುವಾರ ನಾಳೆ ವಿಶೇಷ ಸಭೆ ಕರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಡಳಿತದಿಂದ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಭೆಯಲ್ಲಿ ಸಂಸದರು, ಸಚಿವರು, ಶಾಸಕರುಗಳು ಮತ್ತು ಎಲ್ಲಾ ಇಲಾಖಾ ಅಧಿಕಾರಿಗಳು ಗಣಿಗಾರಿಕೆ ಮಾಲೀಕರ ಜೊತೆ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಹೇಳಲಾಗುತ್ತಿದೆ.

Exit mobile version