ಶಿವಮೊಗ್ಗ: ರೋಟರಿ ಜಿಲ್ಲೆ 3182ರ ಎಲ್ಲ ರೋಟರಿ ಕ್ಲಬ್‌ಗಳ 2020-21ರ ಅವಧಿಯ ಸೇವಾ ಕಾರ್ಯಕ್ರಮಗಳನ್ನು ಪರಿಗಣಿಸಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ರೋಟರಿ ಸೂಪರ್ ಸ್ಟಾರ್ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಬ್ರಹ್ಮಾವರದಲ್ಲಿ ನಡೆದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಸೂಪರ್ ಸ್ಟಾರ್ ಕ್ಲಬ್, ಸ್ಕಿಲ್ ಡೆವಲಪ್‌ಮೆಂಟ್ ಇನ್ ಯೂತ್, ಟೀಚರ್ ಸಪೋರ್ಟ್ ಈ ಲರ್ನಿಂಗ್ ಹಾಗೂ ವೊಕೇಷನಲ್ ಸರ್ವಿಸ್ ಪ್ರಶಸ್ತಿಗಳು ದೊರೆತಿವೆ.
2020-21ನೇ ಸಾಲಿನ ಸೇವೆಗಳನ್ನು ಪರಿಗಣಿಸಿ ರೋಟರಿ ಜಿಲ್ಲೆ 3182 ವಲಯ 11 ಅತ್ಯುತ್ತಮ ಕ್ಲಬ್ ಎಂದು ಗುರುತಿಸಿ ಪ್ರಶಸ್ತಿ ಪಡೆದಿದೆ. 2020-21ನೇ ಸಾಲಿನ ಅಧ್ಯಕ್ಷ ಗಣೇಶ್.ಎಸ್ ಅವರ ಪರಿಶ್ರಮದಿಂದ ಪ್ರಶಸ್ತಿ ದೊರಕಲು ಅನುಕೂಲವಾಗಿದೆ ಎಂದು ಪ್ರಸ್ತುತ 2021-22ರ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ರೋಟರಿ ಶಿವಮೊಗ್ಗ ಪೂರ್ವದಿಂದ ಸಮಾಜಕ್ಕೆ ಅನುಕೂಲವಾಗುವಂತಹ ಅನೇಕ ಸೇವೆಗಳನ್ನು ಮಾಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಪ್ರತಿಷ್ಠಿತ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ನಿಕಟಪೂರ್ವ ಅಧ್ಯಕ್ಷ ಗಣೇಶ್.ಎಸ್ ಅವರ ಅವಧಿಯ ಸೇವೆಯನ್ನು ಗುರುತಿಸಿ ಬ್ರಹ್ಮಾವರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿರುವುದು ಹೆಮ್ಮೆ ತಂದಿದೆ ಎಂದು ತಿಳಿಸಿದರು.
ಪ್ರಸ್ತಕ ಸಾಲಿನಲ್ಲಿಯು ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಉಪಯುಕ್ತ ಆಗುವಂತೆ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರಿಯಾಗುವಂತೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಆರೋಗ್ಯ ಶಿಬಿರ ಸೇರಿದಂತೆ ಮಹತ್ತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.
ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ, ಜಿಲ್ಲಾ ಮಾಜಿ ಗವರ್ನರ್ ರಾಜಾರಾಮ್ ಭಟ್, ಸಹಾಯಕ ಗವರ್ನರ್ ಡಾ. ನಂದಕಿಶೋರ್, ವಲಯ ಸಹಾಯಕ ಮಾಜಿ ಗವರ್ನರ್ ಜಿ.ವಿಜಯ್ ಕುಮಾರ್, ಪ್ರಸ್ತುತ ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ರೋಟರಿ ಜಿಲ್ಲೆ ಸಂಪಾದಕ ವಸಂತ್ ಹೋಬಳಿದಾರ್, ಡಾ. ಗುಡದಪ್ಪ ಕಸಬಿ ಉಪಸ್ಥಿತರಿದ್ದರು.