Site icon TUNGATARANGA

ಮಹಿಳೆಯರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಸುರೇಖಾ ಮುರುಳೀಧರ್ ಕರೆ

ಶಿವಮೊಗ್ಗ: ಮಹಿಳೆಯರು ಸಾಮಾಜಿಕ ಚಟುವಟಿಕೆಗಳ ಜೊತೆಗೆ ಯಾವುದೇ ಹಿಂಜರಿಕೆ ಇಲ್ಲದೇ ರಾಜಕೀಯ ಚಟುವಟಿಕೆಯಲ್ಲೂ ಭಾಗವಹಿಸಬೇಕು ಎಂದು ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸುರೇಖಾ ಮುರಳಿಧರ್ ಹೇಳಿದ್ದಾರೆ. 

ಅವರು ಇಂದು ಶುಭಮಂಗಳ ಸಮುದಾಯ ಭವನದಲ್ಲಿ ಶಿವಮೊಗ್ಗ ನಗರ ಬಿಜೆಪಿ ಮಹಿಳಾಮೋರ್ಚಾ ವತಿಯಿಂದ ನಗರದ ಮಹಿಳೆಯರಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.ರಾಜಕೀಯ ಹೊಲಸು ಹೊಂದ ಭಾವನೆ ಇದೆ. ಆದರೆ, ಮಹಿಳೆಯರು ಕಾಲಿಡದ ಕ್ಷೇತ್ರವಿಲ್ಲ. ಯಾವುದೇ ಕೆಲಸವನ್ನು ಪರಿಪೂರ್ಣವಾಗಿ ಮಾಡುವಂತಹ ಗರಿಮೆ ಇರುವುದು ಮಹಿಳೆಯರಿಗೆ ಮಾತ್ರ. ಪ್ರತಿನಿತ್ಯ ಮನೆಯನ್ನು ಸ್ವಚ್ಛಗೊಳಿಸಿ ಒಪ್ಪ ಓರಣ ಮಾಡುವ ಮಹಿಳೆಯರು ರಾಜಕೀಯದಲ್ಲೂ ಪ್ರತಿನಿಧಿಸಿ ಭ್ರಷ್ಟಾಚಾರ, ಕಳಂಕರಹಿತ ಸಮಾಜವನ್ನು ಕಟ್ಟುವಲ್ಲಿ ತಮ್ಮದೇ ಕೊಡುಗೆ ನೀಡಬೇಕು ಎಂದರು.

ಪ್ರಧಾನಿ ಮೋದಿ ಈ ನಿಟ್ಟಿನಲ್ಲಿ ಅವಿರತವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಬೆಂಬಲ ನೀಡುವುದು ಕೂಡ ನಮ್ಮ ಕರ್ತವ್ಯ ಎಂದು ತಿಳಿಸಿದರು. ತೀರ್ಪುಗಾರರಾದ ಪ್ರತಿಭಾ ಅರುಣ್ ಮಾತನಾಡಿ, ಮಹಿಳೆಯರು ಸಾಂಸ್ಕೃತಿಕ ರಾಯಭಾರಿಗಳು. ರಂಗೋಲಿ ಎನ್ನುವುದು ಶುಚಿತ್ವದ ಸಂಕೇತ. ದೇಶದ ಒಗ್ಗಟ್ಟು ಉಳಿಯಬೇಕಾದರೆ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು ಎಂದರು.

 ತೀರ್ಪುಗಾರರಾಗಿದ್ದ ಶೋಭಾ ಶೇಟ್ ಮಾತನಾಡಿ, ರಂಗೋಲಿ ಎನ್ನುವುದು ಹೆಣ್ಣುಮಕ್ಕಳಿಗೆ ಹುಟ್ಟಿನಿಂದಲೇ ಬರುವ ಕಲೆ. ಹಿಂದಿನ ಕಾಲದಿಂದಲೂ ಹಿರಿಯರು ಹೆಣ್ಣು ತರುವಾಗ ಮನೆ ಬಾಗಿಲಿನ ರಂಗೋಲಿಯನ್ನು ನೋಡಿ ಹುಡುಗಿಯನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ನಿರ್ಧರಿಸುತ್ತಿದ್ದರಂತೆ. ರಂಗೋಲಿ ಕಲೆಯನ್ನು ಬಿಡಬೇಡಿ. ಎಲ್ಲರೂ ಈ ಕಲೆಯನ್ನು ಉಳಿಸಿ ಎಂದು ಮನವಿ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಿಕಾ ಸಮಿತಿಯ ಸ್ವಯಂ ಸೇವಕರಾದ ಅಂಬಿಕಾ ಭಗಿನಿ, ರಂಗೋಲಿ ಕೂಡ ಯೋಗದ ಒಂದು ಭಾಗ. ಮಹಿಳೆಯರು ಎರಡೂ ಕೈಯಲ್ಲಿ ಕೆಲಸ ಮಾಡುವಷ್ಟು ನಿಪುಣರು ಮತ್ತು ಕ್ರಿಯಾಶೀಲರೂ ಆಗಿದ್ದಾರೆ. ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುವ ಯಾವುದೇ ಸಾಂಸ್ಕೃತಿ ಚಟುವಟಿಕೆಯಿರಲಿ ಮಹಿಳೆಯರು ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಯಶೋಧ ಪ್ರಥಮ, ಶುಭಾ ದ್ವಿತೀಯ, ಜಯಶ್ರೀ ತೃತೀಯ, ರಮಾ ಸಮಾಧಾನಕರ  ಬಹುಮಾನ ಪಡೆದುಕೊಂಡರು.ಬಿಜೆಪಿ ನಿಕಟ ಪೂರ್ವ ನಗರಾಧ್ಯಕ್ಷರಾದ ನಾಗರಾಜ್, ರೇಣುಕಾ ನಾಗರಾಜ್ ಸೇರಿದಂತೆ ಮಹಿಳಾ ಮೋರ್ಷಾದ ಕಾರ್ಯಕರ್ತರು ಭಾಗವಹಿಸಿದ್ದರು.

Exit mobile version