Site icon TUNGATARANGA

ಅಗರದಳ್ಳಿ ಗ್ರಾಮದ ಎಸ್ಸಿಎಸ್ಟಿ ಜನಾಂಗಕ್ಕೆ ಜಮೀನು ಮಂಜೂರಿಗೆ ಮನವಿ

ಶಿವಮೊಗ್ಗ,ಆ.14: ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಹೋಬಳಿಯ ಅಗರದಳ್ಳಿ ಗ್ರಾಮದಲ್ಲಿರುವ ಸರ್ವೇ ನಂ.49 ಮತ್ತು 50ರಲ್ಲಿರುವ ಗೋಮಾಳ ಜಮೀನನ್ನು ಸರ್ವೇ ಮಾಡಿಸಿ ಗ್ರಾಮದ ಎಸ್ಸಿ/ಎಸ್ಟಿ ಜನಾಂಗದವರಿಗೆ ಉಳುಮೆ ಮಾಡಿ ಜೀವನ ಸಾಗಿಸಲು ಜಮೀನನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿ ಮಹಾನಗರಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ ನೇತೃತ್ವದಲ್ಲಿ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಅಗರದಳ್ಳಿಯಲ್ಲಿರುವ ಸರ್ವೇ ನಂ.49ರಲ್ಲಿ ಕಣಿಯಮ್ಮ ದೇವಸ್ಥಾನದ ಬಲಭಾಗದಲ್ಲಿರುವ ಗೋಮಾಳ ಜಮೀನಿನಲ್ಲಿ ಸುಮಾರು 100 ಕುಟುಂಬಗಳು ಪಿತ್ರಾರ್ಜಿತವಾಗಿನಿಂದಲೂ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದು, ಸಾಗುವಳಿ ಚೀಟಿ ಪಡೆಯಲು 1989ರ ಹಿಂದಿನಿಂದಲೂ ಫಾರಂ ನಂ. 50 ಮತ್ತು 53ರಲ್ಲಿ ಅರ್ಜಿ ಕೂಡ ಸಲ್ಲಿಸಲಾಗಿದೆ. ಅದರಂತೆ ಕಂದಾಯಾಧಿಕಾರಿಗಳು ಮತ್ತು ಭೂಮಾಪಕರು ಗ್ರಾಮಕ್ಕೆ ಬಂದು ಅಳತೆ ಕಾರ್ಯನಿರ್ವಹಿಸಿ ಕಡತ ತಯಾರಿಸಿದ್ದಾರೆ. ಅದರಲ್ಲಿ ನಮ್ಮ ಸ್ವಾಧೀನಾನುಭವದಲ್ಲಿರುವುದಾಗಿ ನಮೂದಿಸಿದ್ದಾರೆ. ಆದರೆ 2010-11ನೇ ಸಾಲಿನಲ್ಲಿ ಗೋಮಾಳ ಇರುವ ಜಮೀನನ್ನು ರಾಜ್ಯ ಅರಣ್ಯ ಜಮೀನು ಎಂದು ಪಹಣಿಯಲ್ಲಿ ನಮೂದಿಸಲಾಗಿದೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಗ್ರಾಮದ ಮೇಲ್ವರ್ಗದ ಬಂಡವಾಳ ಶಾಯಿಗಳು ಅಗರದಳ್ಳಿ ಮತ್ತು ತಡಸ ಗ್ರಾಮದಲ್ಲಿ ಬಗರುಹುಕುಂ ಸಮಿತಿ ಮಾಡಿಕೊಂಡು ಅರಣ್ಯ ಇಲಾಖೆಗೆ ದೀಡು ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಗ್ರಾಮದ ಮೇಲ್ವರ್ಗದ ಜನರು ನಮ್ಮಂತಹ ಬಡ ಕುಟುಂಬದಿಂದ ಬದಂತಹ ಪಿತ್ರಾರ್ಜಿತ ಜಮೀನನ್ನೇ ಆಧಾರವಾಗಿಟ್ಟುಕೊಂಡು ಉಳುಮೆ ಮಾಡಿ ಜೀವನ ಮಾಡುವವರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆದ್ದರಿಂದ ಗೋಮಾಳ ಜಮೀನನ್ನು ಸಂಬಂಧಪಟ್ಟ ಇಲಾಖೆಯಿಂದ ಸರ್ವೇ ಮಾಡಿಸಿ ನಮಗೆ ಉಳುಮೆ ಮಾಡಿ ಜೀವನ ಸಾಗಿಸಲು ಜಮೀನು ಮಂಜೂರು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಹನುಮಂತ, ರಂಗಪ್ಪ, ಕುಮಾರ, ಮಹೇಶ್, ರವಿ ಹೆಚ್.ಪ್ರಭಾ, ಮಂಜಮ್ಮ, ಲಕ್ಷಮ್ಮ, ಎ.ಬಿ.ರಂಗಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.  

Exit mobile version