ಶಿವಮೊಗ್ಗ, ಜು.15: ಕನಿಷ್ಠ ಮಾಸಿಕ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕೈಗೊಂಡಿರುವ ಹೋರಾಟ ಮುಂದುವರೆದಿದ್ದು, ಇಂದು ಮುಖ್ಯಮಂತ್ರಿಗೆ ಪತ್ರ ಬರೆದು ಪೋಸ್ಟ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕೊರೊನಾದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಹಗಲಿರುಳು ಕೆಲಸ ಮಾಡಿದ್ದಾರೆ. ಸರ್ಕಾರ ಕೇವಲ ಚಪ್ಪಾಳೆ, ಹೂಮಳೆ ಸುರಿಸಿದರೆ ಸಾಲದು, ನಿಜವಾಗಿ ಅವರ ಕಷ್ಟಗಳಿಗೆ ಸ್ಪಂದಿಸಬೇಕು, ಆಶಾ ಕಾರ್ಯಕರ್ತೆಯರು ವೇತನ ಇಲ್ಲದೆ, ರಕ್ಷಣೆ ಇಲ್ಲದೇ ಬಳಲಿ ಬೆಂಡಾಗಿದ್ದಾರೆ, ಗೌರವಧನ, ಪ್ರೋತ್ಸಾಹಧನ ಎರಡನ್ನೂ ಸೇರಿಸಿ ಕನಿಷ್ಟ ಮಾಸಿಕ 12 ಸಾವಿರ ರೂ.ವೇತನ ನಿಗದಿಪಡಿ ಸಬೇಕು ಎಂದು ಆಗ್ರಹಿಸಿದರು.
ಇದಲ್ಲದೇ ಕೋವಿಡ್-19 ವಿರುದ್ದದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷತಾ ಸಾಮಾಗ್ರಿ ಗಳನ್ನು ನೀಡಬೇಕು, ಕೊರೋನಾಕ್ಕೆ ತುತ್ತಾದ ಕಾರ್ಯಕರ್ತರಿಗೆ ಸಂಪೂರ್ಣ ಚಿಕಿತ್ಸೆ ಅಲ್ಲದೇ ಪರಿ ಹಾರ ನೀಡಬೇಕು, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಶೀಲಾ, ಸುನಿತಾ, ಅಕ್ಕಮ್ಮ, ಹನುಮಮ್ಮ ಸೇರಿ ದಂತೆ ಹಲವರಿದ್ದರು.