Site icon TUNGATARANGA

ಗ್ರಾಮಾಂತರದಲ್ಲೂ ಶೀಘ್ರ ಉತ್ತಮ ಇಂಟರ್ ನೆಟ್ ಸೇವೆ: ರಾಘವೇಂದ್ರ ವಿಶ್ವಾಸ

ಶಿವಮೊಗ್ಗ, : ಶಿವಮೊಗ್ಗ ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾದ ಇಂಟರ್‍ನೆಟ್ ಹಾಗೂ ಮೊಬೈಲ್ ಸೇವೆಯನ್ನು ಒದಗಿಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಮೊಬೈಲ್ ಕಂಪನಿಗಳಿಂದ ಹಾಗೂ ಬಿ.ಎಸ್.ಎನ್.ಎಲ್. ಸಂಸ್ಥೆಯಿಂದ ಆಗಿರಬಹುದಾದ ಟವರ್ ನಿರ್ಮಾಣ ಮತ್ತು ತರಂಗಾಂತರಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸ್ಥಳೀಯವಾಗಿ ಉಲ್ಬಣವಾಗಿರಬಹುದಾದ ಸಮಸ್ಯೆಯನ್ನು ಪರಿಹರಿಸಿ, ತುರ್ತು ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಮೊಬೈಲ್ ಕಂಪನಿಗಳ ಮುಖ್ಯಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಮುಂದಿನ ಶುಕ್ರವಾರ ಬೆಂಗಳೂರಿನಲ್ಲಿ ಸಭೆ ನಡೆಸಿ, ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗುವುದಲ್ಲದೆ ಸಕಾಲದಲ್ಲಿ ಟವರ್‍ಗಳನ್ನು ನಿರ್ಮಿಸಿ, ಉತ್ತಮ ಸೇವೆಯನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಬಿ.ಎಸ್.ಎನ್.ಎಲ್. ಸಂಪರ್ಕವಿರುವ ಅನೇಕ ಕಡೆಗಳಲ್ಲಿ ವಿದ್ಯುತ್, ಜನರೇಟರ್, ನಿರ್ವಹಣೆ ಸಿಬ್ಬಂಧಿ ಕೊರತೆ ಮುಂತಾದ ಕಾರಣಗಳಿಂದಾಗಿ ಉತ್ತಮ ಸೇವೆ ನಿರೀಕ್ಷಿಸುವುದು ಕಷ್ಟಸಾಧ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಕೂಡಲೇ ಉತ್ತಮ ಸೇವೆ ನೀಡಲು ಕ್ರಮ ವಹಿಸುವಂತೆ ವಿಭಾಗೀಯ ವ್ಯವಸ್ಥಾಪಕ ವೆಂಕಟೇಶ್ ಅವರಿಗೆ ಸೂಚಿಸಿದರು.


ಜಿಲ್ಲೆಯಲ್ಲಿ ಟವರ್‍ಗಳನ್ನು ನಿರ್ಮಿಸುವ ಸಂಬಂಧ ಖಾಸಗಿ ಕಂಪನಿಗಳಿಗೆ ಪ್ರದೇಶಗಳನ್ನು ವಿಂಗಡಿಸಿ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಶೇ. 80ರಷ್ಟು ಪ್ರದೇಶಕ್ಕೆ ಇಂಟರ್‍ನೆಟ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ. ಉಳಿದ ಶೇ.20ರಷ್ಟು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸಂಬಂಧಿಸಿದವರಿಗೆ ಒತ್ತಾಯಿಸಲಾಗುವುದು ಎಂದರು.
ಆರ್.ಆರ್.ಹೆಚ್. ಎಂ. ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿನ ಅಂಚೆ ಕಚೇರಿಗಳು, ಆರೋಗ್ಯ ಕೇಂದ್ರಗಳು, ಗ್ರಾಮ ಪಂಚಾಯಿತಿ, ಶಾಲಾ-ಕಾಲೇಜುಗಳು ಸೇರಿದಂತೆ 1000ಕ್ಕೂ ಹೆಚ್ಚಿನ ಭಾಗದಲ್ಲಿ ಉಚಿತ ಸಂಪರ್ಕ ಸೇವೆ ನೀಡಲಾಗುತ್ತಿದೆ. ನಿಗಧಿತ ಪ್ರದೇಶದಿಂದ ದೂರದ ಪ್ರದೇಶಕ್ಕೆ ಅದು ಹೊಂದಿರುವ ಕಿ.ಮೀ.ಗಳ ಅಂತರದಲ್ಲಿ ಶುಲ್ಕ ನಿಗಧಿಪಡಿಸಿ, ಸಂಪರ್ಕ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದ ಅವರು, ಮಕ್ಕಳ ಆನ್‍ಲೈನ್ ಕ್ಲಾಸ್‍ಗಳಿಗೆ ಅಡಚಣೆಯಾಗದಂತೆ ಅಗತ್ಯ ಸಾಮಥ್ರ್ಯವಿರುವ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರು ಮಾತನಾಡಿ, ಕೋವಿಡ್ ಸೋಂಕಿನ ಕಾರಣದಿಂದಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕರು ವರ್ಕ್ ಫ್ರಮ್ ಹೋಮ್ ಕಾರಣದಿಂದಾಗಿ ಮನೆಯಲ್ಲಿಯೇ ಇದ್ದು ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಉದ್ಯೋಗಿಗಳಿಗೆ ಬಹು ಅಗತ್ಯವಾಗಿರುವ ಇಂಟರ್ ನೆಟ್ ಸೌಲಭ್ಯಕ್ಕಾಗಿ ಮನೆ ಏರಿ, ಮರವೇರಿ ಕುಳಿತುಕೊಳ್ಳುತ್ತಿದ್ದಾರೆ. ತೀರ್ಥಹಳ್ಳಿ, ಸಾಗರ, ಹೊಸನಗರ ಸೇರಿದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚಿನ ಸಮಸ್ಯೆ ಇರುವುದನ್ನು ಗುರುತಿಸಲಾಗಿದೆ. ಈ ವ್ಯವಸ್ಥೆ ಜನಸಮಾನ್ಯರಿಗೆ ತೀವ್ರ ತರಹದ ಅಡಚಣೆಯನ್ನುಂಟು ಮಾಡಿದೆ. ಇದರ ನಿರ್ವಹಣೆ ಮಾಡಬೇಕಾದುದು ನಮ್ಮ ಜವಾಬ್ದಾರಿಯಾಗಿದ್ದು, ಈ ಸಮಸ್ಯೆಯ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗವುದು ಎಂದರು.
ಸಭೆಯಲ್ಲಿ ಸೂಡಾ ಅಧ್ಯಕ್ಷ ಜ್ಯೋತಿ ಎಸ್.ಪ್ರಕಾಶ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version