Site icon TUNGATARANGA

ನಾಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ, ಜಿಲ್ಲೆಯಲ್ಲಿ150 ಪರೀಕ್ಷಾ ಕೇಂದ್ರ- 24771 ಮಕ್ಕಳು ಭಾಗಿ

ಶಿವಮೊಗ್ಗ;
ರಾಜ್ಯಾದ್ಯಂತ ನಾಳೆಯಿಂದ ಎರಡು ದಿನ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲಾ ಆಡಳಿತ ಸಕಲ ತಯಾರಿ ನಡೆಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ನೂತನವಾಗಿ ಬಹು ಆಯ್ಕೆ ಮಾದರಿಯಂತೆ ನಾಳಿನ ಜು. 19 ಮತ್ತು 22 ರಂದು ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಾವುದೇ ಅಡ್ಡಿ-ಆತಂಕಗಳಿಲ್ಲದಂತೆ ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಕಳೆದ ಬಾರಿಯೂ ಕೋವಿಡ್ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್ ಪರೀಕ್ಷೆಯನ್ನು ಆರು ದಿನ ಯಶಸ್ವಿಯಾಗಿ ನಡೆಸಲಾಗಿತ್ತು. ಈ ಬಾರಿಯೂ ಯಶಸ್ವಿಯಾಗಿ ನಡೆಸಲಿದ್ದು ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯುವಂತಹ ವಾತಾವರಣ ನಿರ್ಮಿಸಲು ಎಲ್ಲ ಕ್ರಮ ವಹಿಸಲಾಗಿದೆ.
ಬೆಳಿಗ್ಗೆ 10.30ಪರೀಕ್ಷೆ ಆರಂಭಗೊಳ್ಳಲಿದ್ದು ಮಕ್ಕಳು ಕನಿಷ್ಟ ಅರ್ಧ ಗಂಟೆ ಮುಂಚೆ ಹಾಜರಿದ್ದರೆ ಒಳಿತು.
ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ಮಾರ್ಗ ಸೂಚಿಯನುಸಾರ ಪ್ರತಿ ತಾಲ್ಲೂಕುವಾರು ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು ಜಿಲ್ಲೆಯಲ್ಲಿ ಒಟ್ಟು 150 ಪರೀಕ್ಷೆಗಳನ್ನು ಗುರುತಿಸಲಾಗಿದೆ. ಪರೀಕ್ಷಾ ಮಂಡಳಿಯಿಂದ ನೀಡಲಾದ ಎಸ್.ಓ.ಪಿ(ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ, ವಿಶೇಷ ಕೊಠಡಿಗಳು, ಆರೋಗ್ಯ ತಪಾಸಣಾ ಕೌಂಟರ್‍ಗಳನ್ನು ತೆರೆಯಲಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನೇಮಕಾತಿಯೊಂದಿಗೆ ಆರೋಗ್ಯ ತಪಾಸಣಾ ಕೌಂಟರ್ ಗಳಿರುತ್ತವೆ.
ಪರೀಕ್ಷಾ ಕೇಂದ್ರ ವ್ಯವಸ್ಥೆ :

ಪ್ರತಿ ಪರೀಕ್ಷಾ ಕೇಂದ್ರವನ್ನು ಮತ್ತು ಪೀಠೋಪಕರಣಗಳನ್ನು ಪರೀಕ್ಷೆಯ ಮುನ್ನ ಮತ್ತು ಪರೀಕ್ಷೆಯಾದ ನಂತರ ಸೋಂಕು ನಿವಾರಕ ದ್ರಾವಣದಿಂದ ಶುದ್ದಗೊಳಿಸಲಾಗಿದೆ
ಪರೀಕ್ಷಾ ಕೇಂದ್ರದ ಪ್ರವೇಶದಲ್ಲೇ ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸಲಾಗಿದು. ಇದು ಬೆಳಿಗ್ಗೆ 8.30 ರಿಂದ ತೆರೆದಿದ್ದು ವೈದ್ಯಕೀಯ/ಆಶಾ ಕಾರ್ಯಕರ್ತೆಯರು ತಪಾಸಣೆ ನಡೆಸುವರು.
ಆರು ಅಡಿ ಅಂತರ ಕಡ್ಡಾಯ : ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಒಳಗೆ ಪ್ರವೇಶಿಸುವ ಪ್ರದೇಶದಲ್ಲಿ ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಆರು ಅಡಿ ಅಥವಾ 2 ಮೀಟರ್ ದೈಹಿಕ ಅಂತರವನ್ನು ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ.
ಒಂದು ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಯಲ್ಲಿ ಗರಿಷ್ಟ 12 ಮಕ್ಕಳು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರಕ್ಕೆ ಹೋಗದಂತೆ ಪರೀಕ್ಷಾ ಕೇಂದ್ರ ರಚಿಸಲಾಗಿದೆ.
ಮುಂಚಿತವಾಗಿ ಸೂಚನೆ :

ಆಸನ ವ್ಯವಸ್ಥೆ ಬಗ್ಗೆ ಮುಂಚಿತವಾಗಿ ತಿಳಿಸಿರುವುದರಿಂದ ಮಕ್ಕಳು ಸೂಚನಾ ಫಲಕದ ಮುಂದೆ ಗುಂಪುಗಟ್ಟುವುದಿಲ್ಲ.
ವಿದ್ಯಾರ್ಥಿಗಳು ಮನೆಯಿಂದ ನೀರಿನ ಬಾಟಲಿ ಮತ್ತು ಅಪೇಕ್ಷೆ ಪಟ್ಟಲ್ಲಿ ಮನೆಯಿಂದ ಆಹಾರದ ಡಬ್ಬಿ ತರಲು ಅವಕಾಶವಿದೆ ಎಂದ ಅವರು ಪರೀಕ್ಷಾ ಕೇಂದ್ರಕ್ಕೆ ಬರಲು ಸಾರಿಗೆ ಸಂಪರ್ಕ ತೊಂದರೆ ಇರುವ ಮಕ್ಕಳನ್ನು ಗುರುತಿಸಿ ಕರೆತರಲು ವ್ಯವಸ್ಥೆ ಮಾಡಲಾಗಿದೆ.
ವಿಶೇಷ ಮತ್ತು ಕಾಯ್ದಿರಿಸಿದ ಕೇಂದ್ರ :
ಕೆಮ್ಮು, ನೆಗಡಿ, ಜ್ವರ ಮೊದಲಾದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕನಿಷ್ಟ ಎರಡು ಕೊಠಡಿಗಳನ್ನು ವಿಶೇಷ ಕೊಠಡಿಗಳೆಂದು ಹೆಸರಿಸಿ ಕಾಯ್ದಿರಿಸಲಾಗುವುದು. ಹಾಗೂ ತಾಲ್ಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಟ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಅವುಗಳನ್ನು ‘ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಇಡಲಾಗುವುದು. ಕೆಮ್ಮು ನೆಗಡಿ, ಜ್ವರ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ತಪಾಸಣೆಗೂ ಮುನ್ನ ಕಡ್ಡಾಯವಾಗಿ ಎನ್95 ಮಾಸ್ಕ್ ನೀಡಲಾಗುವುದು. ಪ್ರತಿ ತಾಲ್ಲೂಕಿನಲ್ಲಿ ಒಂದು ಆಂಬುಲೆನ್ಸ್ ಸಿದ್ದವಿರಿಸಲಾಗಿದೆ.
ಆಕ್ಸಿಜನ್ ಸ್ಯಾಚುರೇಷನ್ ಮಟ್ಟ ಶೇ.94 ಗಿಂತ ಕಡಿಮೆ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಮುಂದಿನ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗುವುದು. ಕೆಮ್ಮು ನೆಗಡಿ, ಜ್ವರ ಇದ್ದು ಆಕ್ಸಿಜನ್ ಸ್ಯಾಚುರೇಷನ್ ಶೇ.94 ಕ್ಕಿಂತ ಕಡಿಮೆ ಇದ್ದಲ್ಲಿ ‘ವಿಶೇಷ ಕೊಠಡಿ’ಯಲ್ಲಿ ಕೂರಿಸಿ ಪರೀಕ್ಷೆ ನಡೆಸಲಾಗುವುದು. ಒಂದು ವೇಳೆ ವಿದ್ಯಾರ್ಥಿ ಈಗಾಗಲೇ ಕೋವಿಡ್ ಪಾಸಿಟಿವ್ ಇದ್ದು ಗೈರಾದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡಿ ಅದನ್ನು ಪ್ರಥಮ ಅವಕಾಶವೆಂದು ಪರಿಗಣಿಸಲಾಗುವುದು.
ಪರೀಕ್ಷಾ ಮೇಲ್ವಿಚಾರಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್‍ಶೀಲ್ಡ್ ಹಾಕಿಕೊಳ್ಳಬೇಕು. ಮಕ್ಕಳಿಗೆ ನೀರು ಕುಡಿಯಲು ಬಳಸಿ ಬಿಸಾಡಬಹುದಾದ ಲೋಟದ ವ್ಯವಸ್ಥೆ ಶೌಚಾಲಯಲ್ಲಿ ಲಿಕ್ವಿಡ್ ಸೋಪ್ ಇಡಬೇಕು. ಹಾಗೂ ವಿಕಲಚೇತನ ಮಕ್ಕಳಿಗೆ ನೆಲ ಮಾಳಿಗೆಯಲ್ಲಿ ಉತ್ತಮ ಆಸನ ವ್ಯವಸ್ಥೆ ಮಾಡಲಾಗಿದೆ.

ಲಸಿಕೆ ಮತ್ತು ಕೋವಿಡ್ ಪರೀಕ್ಷೆ ಕಡ್ಡಾಯ


ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯವರು ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರಬೇಕು ಹಾಗೂ ಆ ಸಂದರ್ಭಕ್ಕೆ ಅನುಗುಣವಾಗಿ ಆರ್.ಎ.ಟಿ ಅಥವಾ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸಿಕೊಂಡಿರುತ್ತಾರೆ. ಪರೀಕ್ಷಾ ಕಾರ್ಯಕ್ಕೆ 3967 ಸಿಬ್ಬಂದಿಗಳನ್ನು ನಿಯೋಜಿಸಿದ್ದು ಇವರೆಲ್ಲರೂ ಪ್ರಥಮ ಡೋಸ್ ಲಸಿಕೆ ಪಡೆದಿದ್ದಾರೆ.

Exit mobile version