Site icon TUNGATARANGA

ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ನಾಲ್ವರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ


ಶಿವಮೊಗ್ಗ: ಜಿಲ್ಲೆಯ ಗೃಹರಕ್ಷಕದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು ನಾಲ್ಕು ಅಧಿಕಾರಿಗಳಿಗೆ ಅವರ ಪ್ರಾಮಾಣಿಕತೆ ಹಾಗೂ ಉತ್ತಮ ಸೇವೆಯನ್ನು ಗುರುತಿಸಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪದಕ ಪ್ರದಾನ ಸಮಾರಂಭದಲ್ಲಿ ಜಿಲ್ಲೆಯ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಎಸ್. ಶಿವಕುಮಾರ್, ಸಹಾಯಕ ಬೋಧಕರಾದ ಹೆಚ್. ದಿನೇಶ್, ಭದ್ರಾವತಿ ಘಟಕದ ಬಿ. ಇ. ವಿಜಯೇಂದ್ರ ಸಾರ್ಜೆಂಟ್ ಇವರುಗಳಿಗೆ ಚಿನ್ನದ ಪದಕ ಹಾಗೂ ಹೊಳೆಹೊನ್ನೂರು ಘಟಕದ ಘಟಕಾಧಿಕಾರಿ ಹೆಚ್. ಎಲ್. ಸುನೀಲ್ ಕುಮಾರ್ ಇವರಿಗೆ ಬೆಳ್ಳಿಪದಕವನ್ನು ಮುಖ್ಯಮಂತ್ರಿಗಳು ಪ್ರದಾನ ಮಾಡಿದರು.
ಜಿಲ್ಲೆಯ ಗೃಹರಕ್ಷಕದಳದ ಕಮಾಂಡೆಂಟ್ ಎಸ್. ಶಿವಕುಮಾರ್, ಪೊಲೀಸ್ ಇಲಾಖೆಗೆ ಪೂರಕ ಪಡೆಯಾಗಿ ಎಲ್ಲಾ ವಿಧವಾದ ಕಾನೂನು ಸುವ್ಯವಸ್ಥೆ, ಚುನಾವಣೆ, ಜಾತ್ರೆ, ಇನ್ನಿತರ ಕರ್ತವ್ಯಗಳಲ್ಲಿ ಅತೀಹೆಚ್ಚು ಗೃಹರಕ್ಷಕ/ಗೃಹರಕ್ಷಕಿಯರನ್ನು ಕ್ರೂಢೀಕರಿಸಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಅವಿರತ ಶ್ರಮ ವಹಿಸಿದ್ದಾರೆ. ಇವರ ಪ್ರಾಮಾಣಿಕ ಮತ್ತು ಉತ್ತಮ ಕರ್ತವ್ಯಕ್ಕಾಗಿ ಮುಖ್ಯಮಂತ್ರಿಯವರು 2018 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.
ಜಿಲ್ಲೆಯ ಗೃಹರಕ್ಷಕದಳದಲ್ಲಿ ಸಹಾಯಕ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್. ದಿನೇಶ್, ಗೃಹರಕ್ಷಕ ಇಲಾಖೆಯ ಸಮವಸ್ತ್ರ ನೀತಿ ನಿಯಮಗಳಿಗನುಸಾರವಾಗಿ ಎಲ್ಲಾ ವಿಧವಾದ ಕರ್ತವ್ಯಗಳಲ್ಲಿ ಲೋಪ ದೋಷಗಳಿಲ್ಲದೆ ಕರ್ತವ್ಯ ನಿರ್ವಹಿಸಿದ್ದಲ್ಲದೇ, ಕೇಂದ್ರ ಕಛೇರಿಯ ಇಲ್ಲಾ ತರಬೇತಿಗಳಿಗಾಗಿ ಶಿವಮೊಗ್ಗ ಜಿಲ್ಲೆಯಿಂದ ಶೇ.೧೦೦ ರಷ್ಟು ಗೃಹರಕ್ಷಕ-ಗೃಹರಕ್ಷಕಿಯರನ್ನು ನಿಯೋಜಿಸಿ ಹಲವಾರು ಚಿನ್ನದ ಪದಕಗಳನ್ನು ಜಿಲ್ಲೆಗೆ ತರುವಲ್ಲಿ ಶ್ರಮಿಸಿದ್ದಾರೆ. ಎಲ್ಲಾ ಕರ್ತವ್ಯಗಳನ್ನು ಲೋಪದೋಶಗಳಿಲ್ಲದೇ ನಿರ್ವಹಿಸಿದ ಪ್ರಯುಕ್ತ ಇವರಿಗೆ ೨೦೨೦ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.
ಇವರುಗಳ ಜೊತೆಗೆ ಹೊಳೆಹೊನ್ನೂರು ಘಟಕದ ಘಟಕಾಧಿಕಾರಿ ಹೆಚ್. ಎಲ್. ಸುನೀಲ್‌ಕುಮಾರ್ ಅವರ ಕರ್ತವ್ಯ ಮತ್ತು ಪ್ರಾಮಾಣಿಕತೆಗೆ 2015ನೇ ಸಾಲಿನ ಬೆಳ್ಳಿಪದಕ ಹಾಗೂ ಭದ್ರಾವತಿ ಘಟಕದ ಬಿ. ಇ. ವಿಜಯೇಂದ್ರ ಸಾರ್ಜೆಂಟ್ ಅವರ ಕಾರ್ಯವೈಖರಿಗೆ 2020ನೇ ಸಾಲಿನ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದ್ದು, ಈ ಎಲ್ಲಾ ಅಧಿಕಾರಿಗಳಿಗೆ ಕಛೇರಿಯ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳು ಮತ್ತು ಎಲ್ಲಾ ಗೃಹರಕ್ಷಕ/ಗೃಹರಕ್ಷಕಿಯರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version